ದಾವಣಗೆರೆ: ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಶವವಾಗಿ ಪತ್ತೆಯಾದ, ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಅವರ ಅಂತ್ಯಸಂಸ್ಕಾರ ಇಂದು ರೇಣುಕಾಚಾರ್ಯರ ಸ್ವಗ್ರಾಮ ಕುಂದೂರಿನಲ್ಲಿ ನಡೆಯಲಿದೆ.
ಶಾಸಕ ಎಂ.ಪಿ ರೇಣುಕಾಚಾರ್ಯರ ಸ್ವಗ್ರಾಮ ಕುಂದೂರಿನಲ್ಲಿ ಅಜ್ಜಿ- ತಾತನ ಸಮಾಧಿ ಬಳಿಯೇ ಚಂದ್ರಶೇಖರ್ ಅಂತ್ಯ ಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಮೂಲಕ ಅಂತ್ಯ ಸಂಸ್ಕಾರ ನಡೆಯಲಿದೆ.
ಕಾರಿನಲ್ಲಿಯೇ ಪತ್ತೆಯಾದ ಚಂದ್ರು ಮೊಬೈಲ್
ಪೊಲೀಸರು ಕಾರು ತಪಾಸಣೆ ಮಾಡುವ ವೇಳೆ ಮೃತ ಚಂದ್ರಶೇಖರ್ ಅವರ ಮೊಬೈಲ್ ಕಾರಿನಲ್ಲಿಯೇ ಸಿಕ್ಕಿದೆ. ಕಣ್ಮರೆಯಾಗಿ ಐದು ದಿನಗಳ ಬಳಿಕ ಚಂದ್ರಶೇಖರ್ ಮೃತದೇಹ ಹೊನ್ನಾಳಿ- ನ್ಯಾಮತಿ ಮಧ್ಯೆ ಇರುವ ಭದ್ರಾ ಮೇಲ್ದಂಡೆ ಚಾನಲ್‌ನಲ್ಲಿ ಪತ್ತೆಯಾಗಿತ್ತು. ಮೊಬೈಲ್ ಕೊನೆಯ ಲೊಕೇಷನ್ ಹೊನ್ನಾಳಿ ಪಟ್ಟಣದಲ್ಲಿ ಸಿಕ್ಕಿತ್ತು. ಹೊನ್ನಾಳಿಯಿಂದ ಐದು ಕಿಲೋಮೀಟರ್ ದೂರದಲ್ಲಿರುವ ಭದ್ರಾ ಚಾನಲ್‌ನಲ್ಲಿ ಕಾರು ಹಾಗೂ ಮೃತದೇಹ ಪತ್ತೆಯಾಗಿತ್ತು.
ರೇಣುಕಾಚಾರ್ಯ ನಿವಾಸದಲ್ಲಿ ನೀರವ
ಸಹೋದರನ ಪುತ್ರ ಚಂದ್ರಶೇಖರ್ ನಿಧನದಿಂದ ತೀವ್ರ ಆಘಾತಗೊಂಡಿರುವ ಶಾಸಕ ಎಂ.ಪಿ ರೇಣುಕಾಚಾರ್ಯ ನಿವಾಸದಲ್ಲಿ ಮೌನ ಕವಿದಿದೆ. ತಮ್ಮ ಪ್ರೀತಿಪಾತ್ರ ಚಂದ್ರಶೇಖರ್ ಪಾರ್ಥಿವ ಶರೀರಕ್ಕೆ ನಿನ್ನೆ ರೇಣುಕಾಚಾರ್ಯ ಮುತ್ತಿಟ್ಟು ಕಣ್ಣೀರು ಹಾಕಿದ್ದರು. ರಾತ್ರಿ ಇಡೀ ನಿದ್ದೆ ಮಾಡದೆ ರೇಣುಕಾಚಾರ್ಯ ಮತ್ತು ಕುಟುಂಬಸ್ಥರು ಚಂದ್ರಶೇಖರ್ ಫೋಟೋವಿಟ್ಟು ಕುಳಿತಿದ್ದಾರೆ. ಅಧ್ಯಾತ್ಮದಲ್ಲಿ ಒಲವನ್ನು ಹೊಂದಿದ್ದ ಹುಡುಗ ವೈರಾಗ್ಯ ಮೂಡಿ ಎಲ್ಲಾದರೂ ಹೋಗಿರಬಹುದು ಎಂದುಕೊಂಡಿದ್ದರೆ, ಈ ಬಗೆಯ ಅಂತ್ಯ ಕಂಡಿರುವುದು ದಿಗ್ಭ್ರಮೆ ಮೂಡಿಸಿದೆ.