ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಲಿಂಗಾಯತರ ಅವಗಣನೆ (Neglecting Lingayats) ಮತ್ತು ಲಿಂಗಾಯತರು ಸಿಎಂ ಆಗಬೇಕು (Lingayat CM Demdand) ಎಂಬ ಕೂಗೆದ್ದಿದೆ. ಲಿಂಗಾಯತ ಸಮುದಾಯದ ಹಿರಿಯ ನಾಯಕ, 92 ವರ್ಷದ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರ ಆಕ್ರೋಶದ ಒಂದು ನುಡಿ ಈ ರಾಜ್ಯ ಕಾಂಗ್ರೆಸ್‌ನಲ್ಲಿ ತಲ್ಲಣಗಳನ್ನು ಸೃಷ್ಟಿಸಿದೆ. ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿ ಇದೀಗ ಇಮ್ಮಡಿ ಉತ್ಸಾಹದೊಂದಿಗೆ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದ ಕಾಂಗ್ರೆಸ್‌ಗೆ ಈ ಬೆಳವಣಿಗೆ ಹಿನ್ನಡೆಯಾಗಿದೆ
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದೆ, ಲಿಂಗಾಯತ ಆಧಿಕಾರಿಗಳಿಗೆ ಪ್ರಮುಖ ಹುದ್ದೆಗಳು ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಶಾಮನೂರು ಶಿವಶಂಕರಪ್ಪ ಅವರು ಅಂತಿಮವಾಗಿ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಪಟ್ಟಕ್ಕೇ ಕಲ್ಲು ಹೊಡೆದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಶಾಮನೂರು ಅವರ ಆಕ್ರೋಶಕ್ಕೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದ್ದು, ಲಿಂಗಾಯತ ಸಮುದಾಯಕ್ಕೆ ಏಳು ಮಂತ್ರಿಗಳನ್ನು ಕೊಟ್ಟಿಲ್ವಾ ಎಂದು ಕೇಳಿದ್ದಾರೆ. ಇತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶಾಮನೂರು ಅವರ ಜತೆ ಮಾತನಾಡುವುದಾಗಿ ಹೇಳಿದ್ದಾರೆ.
ಶಾಮನೂರು ಶಿವಶಂಕರಪ್ಪ ಹೇಳಿದ್ದೇನು?
ದಾವಣಗೆರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ನಾಯಕರು, ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಅವರ ಮೇಲೆ ಮೇಲೆ ಹಲವು ಆರೋಪಗಳನ್ನು ಮಾಡಿದರು.
1. ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ನೀಡುತ್ತಿಲ್ಲ.
2. ಲಿಂಗಾಯತ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳೇ ಸಿಗುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಸರ್ಕಾರದ ಆಯಕಟ್ಟಿನ ಹುದ್ದೆಗಳನ್ನು ನಮ್ಮ ಸಮಾಜದವರಿಗೆ ಕೊಟ್ಟಿಲ್ಲ.
3. ಈ ಹಿಂದೆ ಎಲ್ಲರೂ ಚೆನ್ನಾಗಿದ್ದರು. ನಿಜಲಿಂಗಪ್ಪ, ಜೆ.ಎಚ್.ಪಾಟೀಲರು ಇದ್ದಾಗ ಎಲ್ಲರೂ ಲಿಂಗಾಯತ ಸಮಾಜದ ವಿಚಾರದಲ್ಲಿ ಚೆನ್ನಾಗಿದ್ದರು.
4. ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯವಾದ ಹುದ್ದೆಗಳನ್ನು ಬಹಳಷ್ಟು ಜನರಿಗೆ ಕೊಟ್ಟಿಲ್ಲ.
5. ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಕೊಡಬೇಕು ಎಂಬ ಪ್ರಸ್ತಾಪ ಮಾಡಲಾಗುತ್ತಿದೆ. ಈ ಪ್ರಸ್ತಾಪ ಯಾವಾಗಲೂ ನಮ್ಮ ಕಡೆಯಿಂದ ಇರುತ್ತದೆ. ಆದರೆ, ಡಿಸಿಎಂ ತೆಗೆದುಕೊಂಡು ಏನು ಮಾಡಬೇಕು. ಕೊಟ್ಟರೆ ಸಿಎಂ ಕೊಡಬೇಕು.
ಇದು ಕಾಂಗ್ರೆಸ್ ಅತ್ಯಂತ ಹಿರಿಯ ನಾಯಕರಾಗಿರುವ ಶಾಮನೂರು ಶಿವಶಂಕರಪ್ಪ ಮಂಡಿಸಿದ ಬೇಡಿಕೆಗಳು.
ಶಾಮನೂರು ಬೇಡಿಕೆಯ ಸಂದೇಶವೇನು? ಅಧಿಕಾರಿಗಳೇ ಇಲ್ಲಿ ಪ್ರಮುಖವೇ?
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪರವಾಗಿ ನಿಂತಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ 46 ಅಭ್ಯರ್ಥಿಗಳ ಪೈಕಿ 37 ಮಂದಿ ಗೆಲುವು ಸಾಧಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ 69 ಮಂದಿಯ ಪೈಕಿ ಗೆದ್ದಿದ್ದು 15 ಮಂದಿ ಮಾತ್ರ. ಲಿಂಗಾಯತರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದ್ದರೂ ಅವರಿಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ ಎನ್ನುವುದು ಅವರ ಆಕ್ರೋಶ. ಅದರಲ್ಲೂ ಮುಖ್ಯವಾಗಿ ಶಾಮನೂರು ಅವರು ಪ್ರಸ್ತಾಪ ಮಾಡುತ್ತಿರುವುದು ಲಿಂಗಾಯತ ಅಧಿಕಾರಿಗಳನ್ನು ಆಯಕಟ್ಟಿನ ಹುದ್ದೆಯಿಂದ ಮುಕ್ತಿಗೊಳಿಸಿ ಬೇರೆ ಜಾತಿಯವರಿಗೆ ನೀಡಲಾಗುತ್ತಿದೆ ಎಂಬುದನ್ನು.
ಇದಕ್ಕೆ ಪೂರಕವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೂಡಾ ಮಾತನಾಡಿದ್ದಾರೆ.
ʻʻಹಿರಿಯರಾದ ಶಾಮನೂರು ಅವರ ಹೇಳಿಕೆ ನನ್ನ ಗಮನಕ್ಕೂ ಕೂಡ ಬಂದಿದೆ. ಯಾವುದೇ ಒಂದು ಸಮುದಾಯದಿಂದ ಕಾಂಗ್ರೆಸ್ ಸರ್ಕಾರ ಬಂದಿಲ್ಲ. ಹಿಂದೆಲ್ಲ ಲಿಂಗಾಯತ ಸಮಾಜ ಕಾಂಗ್ರೆಸ್ ಜೊತೆಗೆ ಇಲ್ಲ ಎಂಬ ಕೊರಗಿತ್ತು. ಆ ಕೊರಗು ಈಗ ಇಲ್ಲ. ಕೆಲವು ಅಧಿಕಾರಿಗಳು ನಮ್ಮ ಬಳಿಯೂ ಕೂಡ ಬಂದಿದ್ದರು. ನಾನೂ ಕೂಡ ಮಾಹಿತಿ ಪಡೆದುಕೊಂಡಿದ್ದೇನೆ. ಸಂಬಂಧ ಪಟ್ಟ ಹಿರಿಯರ ಜೊತೆಗೆ, ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆʼʼ ಎಂದು ಹೇಳಿದರು.
ಶಿವಶಂಕರಪ್ಪ ಜತೆ ಮಾತನಾಡುತ್ತೇನೆ ಎಂದ ಡಿಕೆ ಶಿವಕುಮಾರ್
ಶಾಮನೂರು ಶಿವಶಂಕರಪ್ಪ ಅವರು ಏಕೆ ಹೀಗೆ ಹೇಳಿದ್ದಾರೆ ಎನ್ನುವ ಕುರಿತು ಅವರ ಬಳಿ ಚರ್ಚೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು ಮತ್ತು ಲಿಂಗಾಯತರಿಗೆ ಡಿಸಿಎಂ ಸ್ಥಾನ ಬೇಡ ಸಿಎಂ ಸ್ಥಾನ ಬೇಕು ಎನ್ನುವ ಹೇಳಿಕೆಯನ್ನು ಮಾಧ್ಯಮದವರು ಪ್ರಸ್ತಾಪಿಸಿದಾಗ, ಹೇಳಿಕೆ ಬಗ್ಗೆ ನನಗೆ ತಿಳಿದಿಲ್ಲ, ತಿಳಿದುಕೊಂಡು ಮಾತನಾಡುತ್ತೇನೆ ಎಂದರು.
ಏಳು ಮಂದಿ ಸಚಿವರಿಲ್ವಾ? ಯಾರಿಗೂ ಅನ್ಯಾಯ ಮಾಡಿಲ್ಲ ಎಂದ ಸಿಎಂ
ರಾಜ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿ ಹಾಕಿದರು. ನಮ್ಮ ಸರ್ಕಾರದಲ್ಲಿ ಲಿಂಗಾಯತರೇ 7 ಮಂದಿ ಸಚಿವರಿಲ್ವಾ ಎಂದು ಕೇಳಿದರು. ನಮ್ಮ ಸರ್ಕಾರ ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ. ನನ್ನ ಬಳಿ ಅಂಕಿಅಂಶಗಳಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.