ದಾವಣಗೆರೆ/ಶಿವಮೊಗ್ಗ: ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಶವದ ಕಿವಿ ಓಲೆಯಿಂದಲೇ ಕೊಲೆವೊಂದನ್ನು (Murder case) ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳೆದ ಮೇ 9ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣಿವೆ ಬಿಳಚಿ ಬಳಿ ಭದ್ರಾ ನಾಲೆಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆಯಾದ ಹಿನ್ನೆಲೆ ಬಸವಾ ಪಟ್ಟಣ ಠಾಣೆಯ ಪೊಲೀಸರು ಇದೊಂದು ಕೊಲೆ ಎಂದು ಭಾವಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದರು.
ಆದರೆ ಶವ ಸಂಪೂರ್ಣ ಕೊಳೆತ ಹಿನ್ನೆಲೆಯಲ್ಲಿ ಗುರುತು ಹಿಡಿಯಲು ಕಷ್ಟವಾಗಿತ್ತು. ಶವ ಸಿಕ್ಕ ಜಾಗದಲ್ಲಿ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಆದರೆ ಶವದ ಗುರುತಾಗಲಿ ಜತೆಗೆ ಆರೋಪಿಗಳ ಸುಳಿವು ಯಾವುದು ಸಿಕ್ಕಿರಲಿಲ್ಲ. ಇತ್ತ ಎಲ್ಲ ಠಾಣೆಗಳಲ್ಲೂ ಯಾವುದಾದರೂ ಮಿಸ್ಸಿಂಗ್ ಕಂಪ್ಲೇಟ್ ಬಂದಿದ್ಯಾ ಎಂದು ಕ್ರಾಸ್ ಚೆಕ್ ಮಾಡಿಕೊಂಡಿದ್ದರು.
ಆಗ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ನಾಪತ್ತೆ ಆಗಿದ್ದಾರೆ ಎಂಬ ಪ್ರಕರಣ ದಾಖಲಿಸಿಕೊಂಡಿದ್ದರು. ಭದ್ರಾ ನಾಲೆಯಲ್ಲಿ ಸಿಕ್ಕ ಶವಕ್ಕೂ ಇಲ್ಲಿ ಮಿಸ್ಸಿಂಗ್ ಆಗಿದ್ದ ಮಹಿಳೆಗೂ ತಾಳೆ ಮಾಡಿ ನೋಡಿದ್ದರು. ಆಗ ಶವದಲ್ಲಿದ್ದ ಕಿವಿ ಓಲೆಯಿಂದ ಮೃತಳ ಗುರುತನ್ನು ಪತ್ತೆ ಮಾಡಿದ್ದರು. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಕೆರೆ ಗ್ರಾಮದ ನಿವಾಸಿ ನೇತ್ರಾವತಿ (47) ಕೊಲೆಯಾದವರು.
ಇದನ್ನೂ ಓದಿ:Murder case : ಮನೆ ಓನರ್ ಕೊಲೆ ಕೇಸ್; ಇದು ಕಳ್ಳಿ ಕೊಲೆಗಾರ್ತಿಯಾದ ಕಥೆ
ಕುಮಾರ ಎಚ್ ಜಿ (38) ಹಾಗೂ ಚಿದಾನಂದಪ್ಪ (54) ಎಂಬುವವರು ನೇತ್ರಾವತಿಯನ್ನು ಕೊಂದು ನಾಲೆಗೆ ಬೀಸಾಕಿ ಹೋಗಿದ್ದರು. ಆರೋಪಿಗಳ ಜಮೀನಿನಲ್ಲಿ ನೇತ್ರಾವತಿ ಅಡಿಕೆ ಮರಗಳನ್ನು ಕಡಿದು ಹಾಕಿದ್ದಳು. ಇದೇ ಸಿಟ್ಟಿನಲ್ಲಿ ನೇತ್ರಾವತಿಯನ್ನು ಕೊಲೆ ಮಾಡಿ ಬಳಿಕ ಕೈ-ಕಾಲು ಕಟ್ಟಿ ಭದ್ರಾ ಕಾಲುವೆಗೆ ಎಸೆದಿದ್ದರು. ಆದರೆ ಮಹಿಳೆಯ ಕಿವಿಯೋಲೆಯಿಂದ ಸಿಕ್ಕಿಬಿದ್ದರು.
ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣ ಭೇದಿಸಿದ ಬಸವಾ ಪಟ್ಟಣ ಠಾಣೆಯ ಪೊಲೀಸರ ಕಾರ್ಯಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ