ದಾವಣಗೆರೆ: ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ (Operation Kamala) ಸೌಂಡ್ ಮಾಡುತ್ತಿದೆ. ಒಂದು ಕಡೆಯಲ್ಲಿ ಮಾಜಿ ಶಾಸಕರು, ಬಿಜೆಪಿಯ ಹಿರಿಯ ನಾಯಕರನ್ನು ಕಾಂಗ್ರೆಸ್ ಹೈಜಾಕ್ ಮಾಡುತ್ತಿದ್ದರೆ, ಇತ್ತ ಬಿಜೆಪಿ ಸೈಲೆಂಟಾಗಿ ಶಾಸಕರನ್ನು ಟಾರ್ಗೆಟ್ ಆಗಿ ಇಟ್ಟುಕೊಂಡ ಆಪರೇಷನ್ ಕಮಲ ನಡೆಸಲು ಸಜ್ಜಾಗುತ್ತಿದೆ. ಹೀಗೆಂದು ಮಂಡ್ಯದ ಕಾಂಗ್ರೆಸ್ ಶಾಸಕ ಗಣಿಗ ರವಿ (Congress MLA Ganiga Ravi) ಅವರು ದಾವಣಗೆರೆಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ʻʻಬಿಜೆಪಿ ಮತ್ತೊಮ್ಮೆ ಅಪರೇಷನ್ ಕಮಲ ಆರಂಭಿಸಿದೆ. ಯಾವ ಟೀಮ್ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಳಿಸಿತ್ತೋ ಅದೇ ಟೀಂ ಈಗ ಆ್ಯಕ್ಟಿವ್ ಆಗಿದೆ. ಅಂದು ಸಕ್ರಿಯವಾಗಿದ್ದ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಆಪ್ತ ಸಹಾಯಕ ಎನ್.ಆರ್. ಸಂತೋಷ್ (NR Santhosh) ಈ ಹೊಸ ಆಪರೇಷನ್ ಪ್ಲ್ಯಾನ್ನಲ್ಲೂ ಸಕ್ರಿಯವಾಗಿದ್ದಾರೆʼʼ ಎಂದು ರವಿ ಗಣಿಗ ಹೇಳಿದ್ದಾರೆ.
ʻʻಆ ಟೀಂ ಬೆಳಗ್ಗೆ ಬೆಳಗ್ಗೆ ರೆಡಿಯಾಗಿ ಕಾಂಗ್ರೆಸ್ ಶಾಸಕರ ಮನೆಗೆ ಹೋಗುತ್ತದೆ. ಸ್ಪೇಷಲ್ ಫ್ಲೈಟ್ ಮಾಡ್ತಿವಿ, ಅಮಿತ್ ಷಾ ಅವರನ್ನು ಮೀಟ್ ಮಾಡಿಸ್ತೀವಿ. 50 ಕೋಟಿ ರೂ. ಅಮೌಂಟ್ ಕೊಡ್ತೀವಿ ಎಂದು ಆಮಿಷ ಒಡ್ಡಲಾಗುತ್ತಿದೆʼʼ ಎಂದು ರವಿ ಗಣಿಗ ನೇರವಾಗಿ ಆರೋಪ ಮಾಡಿದ್ದಾರೆ.
ʻʻಅ ಗ್ಯಾಂಗ್ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಿಎ ಆಗಿದ್ದ ಸಂತೋಷ್ ಕೂಡ ಇದಾರೆ. ಅವರು ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ನಮ್ಮ ಶಾಸಕರನ್ನು ಮೀಟ್ ಆಗಿದ್ದಾರೆ. ಯಾರೆಲ್ಲ ಓಡಾಡುತ್ತಿದ್ದಾರೋ ಅವರ ವಿಡಿಯೊ ಕೂಡಾ ಇದೆ. ಕೆಲವೇ ದಿನಗಳಲ್ಲಿ ಕಾಲ್ ರೆಕಾರ್ಡ್, ವಿಡಿಯೋ ಬಿಡುಗಡೆ ಮಾಡುತ್ತೀವಿʼʼ ಎಂದು ರವಿ ಗಣಿಗ ಹೇಳಿದ್ದಾರೆ.
ಕಾಂಗ್ರೆಸ್ನ ಹಲವಾರು ಶಾಸಕರಿಗೆ ಈ ರೀತಿ ಆಮಿಷ ಒಡ್ಡಲಾಗುತ್ತಿದೆ. ನಾಲ್ಕೂ ದಿಕ್ಕುಗಳಿಂದ ಈ ಕಾರ್ಯಾಚರಣೆ ನಡೆಯುತ್ತಿದೆ. ನಮ್ಮವರು ಯಾರೂ ಆಮಿಷಕ್ಕೆ ಬಲಿಯಾಗಿಲ್ಲ. ಕೆಲವು ಪ್ರಾಮಾಣಿಕ ಶಾಸಕರು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ರವಿ ಗಣಿಗ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವೂ ಆಪರೇಷನ್ ಹಸ್ತ ನಡೆಸುತ್ತಿರುವ ಬಗ್ಗೆ ಕೇಳಿದಾಗ, ʻʻಬಿಜೆಪಿ ನಾಯಕರು ಅವರಾಗಿಯೇ ಬರುತ್ತಿದ್ದಾರೆ. ನಾವ್ಯಾರು ಕರೆದಿಲ್ಲ. ನಮಗೆ ಬೇರೆ ಶಾಸಕರ ಅವಶ್ಯಕತೆ ಇಲ್ಲʼʼ ಎಂದು ಹೇಳಿದರು.
ಬೆಳಗಾವಿಯಿಂದಲೇ ಕಾಂಗ್ರೆಸ್ ಪತನವಾಗುತ್ತದೆ ಎಂಬ ಶಾಸಕ ಮುನಿರತ್ನ ಹೇಳಿಕೆ ಬಗ್ಗೆ ಕೇಳಿದಾಗ, ʻʻಮುನಿರತ್ನ ಅವರು ಫಿಲ್ಮ್ ತೆಗೀತಾರಲ್ಲ. ಹಾಗಾಗಿ ಆವಾಗಾವಾಗ ಆ ಡೈಲಾಗ್ ಹೊಡೀತಾರೆʼʼ ಎಂದರು ಗವಿ ಗಣಿಗ.
ಇದನ್ನೂ ಓದಿ: Operation Hasta: ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೇರಿ 750ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಸೇರ್ಪಡೆ
ಸೆಲೆಬ್ರಿಟಿಗಳನ್ನೂ ಅರೆಸ್ಟ್ ಮಾಡಿ ಎಂದ ಶಾಸಕ ರವಿ ಗಣಿಗ
ಇದೇ ವೇಳೆ ಹುಲಿಯುಗುರು ಹೊಂದಿರುವ ಪ್ರಕರಣಗಳ ಬಗ್ಗೆ ಕೂಡಾ ರವಿ ಗಣಿಗ ಪ್ರತಿಕ್ರಿಯಿಸಿದರು.
ʻʻಹುಲಿ ಉಗುರು ಹಾಕಿಕೊಂಡಿದ್ದಾನೆ ಎಂದು ಅಮಾಯಕ ರೈತನನ್ನು ಬಂಧನ ಮಾಡಲಾಗಿದೆ. ಅದೇ ರೀತಿ ಯಾರು ಯಾರು ಹಾಕಿಕೊಂಡಿದ್ದಾರೋ ಅವರನ್ನು ಕೂಡ ಬಂಧನ ಮಾಡಿ. ಒಬ್ಬರಿಗೆ ಒಂದು ಕಾನೂನು ಇನ್ನೊಬ್ಬರಿಗೆ ಒಂದು ಕಾನೂನು ಮಾಡುವುದು ಬೇಡʼʼ ಎಂದು ಅವರು ಹೇಳಿದರು.
ʻʻಸಂತೋಷ್ ಶೋಕಿಗಾಗಿ ಹಾಕಿಕೊಳ್ತಾ ಇದ್ದ. ಪಾಪದ ರೈತ ಅವನು. ಆತನನ್ನು ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಮಾಡಿದ್ರಿ. ಅದೇ ರೀತಿ ಎಲ್ಲರನ್ನು ಅರೆಸ್ಟ್ ಮಾಡಿ ನೋಡೋಣʼʼ ಎಂದು ತಮ್ಮದೇ ಸರ್ಕಾರಕ್ಕೆ ಅವರು ಸವಾಲು ಹಾಕಿದರು. ʻʻನಮ್ಮದೇ ಸರ್ಕಾರ ಇದೆ, ಅದಕ್ಕೆ ಹೇಳ್ತಾ ಇರೋದುʼʼ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿದರು. ಎಲ್ಲರಿಗೂ ನೋಟೀಸ್ ಕೊಡುವ ಬದಲು ಅರೆಸ್ಟ್ ಮಾಡಿ ಎಂದ ಶಾಸಕ ರವಿ ಗಣಿಗ ಹೇಳಿದರು.