Site icon Vistara News

Road Romeo : ಹುಡುಗಿಯರಿಗೆ ಕರೆ ಮಾಡಿ ಕಾಡುತ್ತಿದ್ದ ರೋಮಿಯೊಗೆ ರೋಡಲ್ಲೇ ಗೂಸಾ; ವಿಡಿಯೊ ಕಾಲ್‌ ಮಾಡ್ಲಾ ಅಂತಿದ್ದ!

Road Romeo thrashed

ದಾವಣಗೆರೆ: ಹುಡುಗಿಯರ ಮೊಬೈಲ್‌ ನಂಬರ್‌ ಅದು ಹೇಗೋ ಸಂಪಾದಿಸಿ, ಬಳಿಕ ಕರೆ ಮಾಡಿ ಕಾಡುತ್ತಿದ್ದ ರೋಡ್‌ ರೋಮಿಯೊ (Road Romeo) ಒಬ್ಬನಿಗೆ ರೋಡಲ್ಲೇ ಸಖತ್‌ ಒದೆ (Road Romeo attacked) ಬಿದ್ದಿದೆ. ಗಂಡ್ಮಕ್ಕಳು, ಹೆಣ್ಮಕ್ಕಳು ಎಲ್ಲಾ ಸೇರಿ ಚಪ್ಪಲಿ, ಕೈ ಮತ್ತು ಸಿಕ್ಕಿದ್ದರಲ್ಲಿ ಹೊಡೆದು ಪಾಠ ಕಲಿಸಿದ್ದಾರೆ.

ದಾವಣಗೆರೆಯ ಎವಿಕೆ ಕಾಲೇಜು ರಸ್ತೆಯಲ್ಲಿ (Davanagere AVK College Road) ಈ ರೋಡ್‌ ರೋಮಿಯೊನನ್ನು ಅಟ್ಟಾಡಿಸಿ ಹೊಡೆಯಲಾಗಿದೆ. ಅಂದ ಹಾಗೆ ಹೀಗೆ ಹುಡುಗಿಯರನ್ನು ಸತಾಯಿಸುತ್ತಿದ್ದ (Harrassing girls over Phone) ಕಾರಣಕ್ಕೆ ನಡುರಸ್ತೆಯಲ್ಲಿ ಪೆಟ್ಟು ತಿಂದವನ ಹೆಸರು ವಿನಯ್.‌ ವೃತ್ತಿಯಲ್ಲಿ ಖಾಸಗಿ ಬಸ್‌ ಕಂಡಕ್ಟರ್‌ (Private bus conductor) ಅಗಿರುವ ತ್ಯಾವಣಗಿ ಗ್ರಾಮದ ಯುವಕ ಪ್ರವೃತ್ತಿಯಲ್ಲಿ ಹೆಣ್ಮಕ್ಕಳಿಗೆ ಕರೆ ಮಾಡಿ ಮಾತನಾಡುವ ಚಾಳಿ ಇದೆ!

ಇನ್ಯಾವತ್ತೂ ಹೀಗೆ ಮಾಡಲ್ಲ‌ ಎಂದ ವಿನಯ್‌.. ಆದರೆ, ಅದನ್ನು ಕೇಳಿಸಿಕೊಳ್ಳದೆ ಬಿತ್ತು ಒದೆ

ಖಾಸಗಿ ಬಸ್‌ನಲ್ಲಿ ಕಂಡಕ್ಟರ್‌ ಆಗಿರುವ ಕಾರಣಕ್ಕೋ ಇರಬೇಕು, ಇವನಿಗೆ ಹುಡುಗಿಯರ ಜತೆ ಕನೆಕ್ಷನ್‌ ಬೆಳೆಯುತ್ತಿತ್ತು. ಅವರಲ್ಲಿ ಸಲುಗೆಯಲ್ಲಿ ಮಾತನಾಡುತ್ತಾ ಫೋನ್‌ ನಂಬರ್‌ ಕೇಳುತ್ತಿದ್ದ ಅನಿಸುತ್ತದೆ. ಒಬ್ಬಾಕೆಯ ಫೋನ್‌ ನಂಬರ್‌ ಇನ್ನೊಬ್ಬಾಕೆಯ ಕೈಯಲ್ಲಿ ಕೇಳಿ ಪಡೆಯುವುದೂ ಇತ್ತು. ಒಂದಿಷ್ಟು ಚೆನ್ನಾಗಿ ಹೇರ್‌ ಕಟ್‌ ಮಾಡಿಸಿಕೊಂಡು ಹೀರೋ ಸ್ಟೈಲ್‌ ಮಾಡಲು ಪ್ರಯತ್ನ ಪಡುತ್ತಿದ್ದವನು ವಿನಯ್‌.

ಇಡೀ ಮನೆಯ ಎಲ್ಲರೂ ಚೆನ್ನಾಗಿ ಬಡಿದರು ವಿನಯ್‌ಗೆ

ಹೀಗೆ ನಂಬರ್‌ಗಳನ್ನು ಸಂಪಾದಿಸಿಕೊಳ್ಳುವ ಆತ ಹುಡುಗಿಯರಿಗೆ ಪೋನ್‌ ಮಾಡಿ ಮಾತಿಗೆಳೆಯುತ್ತಿದ್ದ. ಮೊದಲು ಚೆನ್ನಾಗಿ ಶುರುವಾಗುವ ಮಾತು ಬಳಿಕ ಸಲುಗೆ ಹೆಚ್ಚಾಗುತ್ತಿದ್ದಂತೆಯೇ ಬೇರೆ ಬೇರೆ ರೂಪ ಪಡೆಯುವಂತೆ ಮಾಡುತ್ತಿದ್ದ. ಪದೇಪದೆ ಕರೆ ಮಾಡುವುದು, ಕೊನೆಗೆ ವಿಡಿಯೊ ಕಾಲ್‌ ಮಾಡ್ಲಾ ಎಂದು ಕೇಳುವುದು, ಏನಾದರೂ ಆಮಿಷ ಒಡ್ಡುವುದು.. ಹೀಗೆ ನಡೆಯುತ್ತಿತ್ತು ರೋಮಿಯೊ ಆಟ.

ಆತ ಈ ರೀತಿ ಎಷ್ಟು ಹುಡುಗಿಯರ ಜತೆ ಕೆಟ್ಟದಾಗಿ ನಡೆದುಕೊಂಡಿದ್ದನೋ ಗೊತ್ತಿಲ್ಲ. ಆದರೆ, ಮಾಯಕೊಂಡ ಹೋಬಳಿಯ ಗ್ರಾಮವೊಂದರ ಯುವತಿಯರಿಬ್ಬರಿಗೆ‌ ಕರೆ ಮಾಡಿ ಈಗ ಸಿಕ್ಕಿಬಿದ್ದಿದ್ದಾನೆ.

ಕಥೆ ಹೊಡೀಬೇಡ ಅಂತ ಹೇಳಿ ಹೇಳಿ ಹೊಡೆದರು.

ಪದೇಪದೆ ಪೋನ್ ಮಾಡಿ ತೊಂದರೆ ಕೊಡುತ್ತಿದ್ದ ವಿನಯ್‌ ವರ್ತನೆಯಿಂದ ರೋಸಿ ಹೋದ ಹುಡುಗಿಯರು ಮನೆಯಲ್ಲಿ ಮಾಹಿತಿ ನೀಡಿದ್ದರು. ಮನೆಯವರು ಆತನನ್ನು ನೇರವಾಗಿ ಹೋಗಿ ಕೇಳಿದರೆ ಸರಿಯಾಗುವುದಿಲ್ಲ ಎಂದು ಒಂದು ಉಪಾಯ ಮಾಡಿದರು.

ಹುಡುಗಿಯರ ಕೈಯಿಂದಲೇ ಫೋನ್‌ ಮಾಡಿಸಿ ಎವಿಕೆ ಕಾಲೇಜು ರಸ್ತೆಯಲ್ಲಿ ಸಿಗೋಣ್ವಾ ಎಂದು ಕೇಳಿದರು. ಲಡ್ಡು ಬಾಯಿಗೆ ಬಂದು ಬಿತ್ತು ಎಂದು ಖುಷಿಯಿಂದ ಕುಣಿದಾಡಿರಬೇಕು ವಿನಯ್‌. ಒಳ್ಳೆಯ ಸ್ಟೈಲಾಗಿ ಅವರು ಹೇಳಿದ ಹೊತ್ತಿಗೆ ಕಾಲೇಜಿನ ಬಳಿ ಬಂದು ಆಚೀಚೆ ನೋಡಿದರೆ ಅವನನ್ನು ಕರೆಸಿದ ಹುಡುಗಿಯರು ಬರುತ್ತಿಲ್ಲ.

ಇದನ್ನೂ ಓದಿ: Girl power : ತನ್ನನ್ನು ಚುಡಾಯಿಸಿದ ಬೀದಿ ಕಾಮಣ್ಣನನ್ನು ರೋಡಲ್ಲೇ ಅಟ್ಟಾಡಿಸಿ ಹೊಡೆದ ಕಾಲೇಜು ವಿದ್ಯಾರ್ಥಿನಿ

ಬರ್ತಾ ಇರುವುದು ಮಹಿಳೆಯರು ಮತ್ತು ಪುರುಷರು. ಇವರ್ಯಾಕಪ್ಪ ತನ್ನ ಕಡೆಗೆ ಬರುತ್ತಿದ್ದಾರೆ ಎಂದು ಭಯಗೊಂಡ ವಿನಯ್‌ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. ಆದರೆ, ಅವರು ಸಾಕಷ್ಟು ಜನ ಇದ್ದಿದ್ದರಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ.

ಸಪ್ತಸಾಗರದಾಚೆ ಅಲ್ಲ.. ರೋಡಲ್ಲೇ ಒದೆ..

ನಿಲ್ಲಿಸಿದ ಆಟೋ ರಿಕ್ಷಾಗಳ ನಡುವೆ ಎಲ್ಲ ನುಸುಳುವ ಆತನನ್ನು ಕೊನೆಗೂ ಹಿಡಿದು ಚೆನ್ನಾಗಿ ತದುಕಲಾಗುತ್ತದೆ. ಅವನ ಮೊಬೈಲನ್ನು ಕಿತ್ತುಕೊಳ್ಳಲಾಗುತ್ತದೆ. ಮಹಿಳೆಯೊಬ್ಬರಂತೂ ಆತನಿಗೆ ಸಿನಿಮಾ ಸ್ಟೈಲಲ್ಲಿ ಚಪ್ಪಲಿಯಿಂದ ಎಗರಿ ಎಗರಿ ಹೊಡೆದಿರುವುದು ದಾಖಲಾಗಿದೆ.

ಒಟ್ಟಿನಲ್ಲಿ ರೋಡ್‌ ರೋಮಿಯೋಗೆ ರೋಡ್‌ನಲ್ಲೇ ಚೆನ್ನಾಗಿ ಪೂಜೆ ಮಾಡಿ ಪಾಠ ಕಲಿಸಲಾಗಿದೆ. ಇನ್ಯಾವತ್ತೂ ಹೀಗೆ ಮಾಡಲ್ಲ, ಬಿಟ್ಟು ಬಿಡಿ ನನ್ನನ್ನು ಎಂದು ಗೋಗರೆಯುತ್ತಿದ್ದ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ಹೊಡೆತಕ್ಕೆ ಕಂಗಾಲಾಗಿ ಹೋದ ಬಸ್‌ ಕಂಡಕ್ಟರ್‌ ವಿನಯ್‌

ಹಲ್ಲೆ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆಲವು ಹುಡುಗರು ಈ ವಿಡಿಯೊ ಇಟ್ಟುಕೊಂಡು ನಿನಗೂ ಇದೇ ಗತಿ ಕಾದಿದೆ ಎಂದು ಪರಸ್ಪರ ಕಿಚಾಯಿಸಿಕೊಳ್ಳುತ್ತಿದ್ದಾರೆ.

Exit mobile version