Site icon Vistara News

Self Harming : 5 ವರ್ಷದ ಮಗಳೊಂದಿಗೆ ಸೂಳೆಕೆರೆಗೆ ಹಾರಿ ತಾಯಿ ಆತ್ಮಹತ್ಯೆ, ಎಷ್ಟು ನೊಂದಿದ್ದಳೋ?

Soolekere suicide case Mother Kavita and Daughter Niharika

ದಾವಣಗೆರೆ: ತಾಯಿಯೊಬ್ಬಳು ಐದು ವರ್ಷದ ಪುಟ್ಟ ಮಗಳನ್ನು ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಾವಣಗೆರೆ ಜಿಲ್ಲೆಯ (Davanagere News) ಚನ್ನಗಿರಿ ತಾಲೂಕಿನ ‌ಕೆರೆಬಿಳಚಿ ಬಳಿ ಇರುವ ಐತಿಹಾಸಿಕ ಪ್ರವಾಸಿ ತಾಣ ಸೂಳೆಕೆರೆಯಲ್ಲಿ (Soolekere in Davanagere) ಘಟನೆ ನಡೆದಿದೆ. ಕವಿತಾ (27) ಎಂಬವರೇ ತಮ್ಮ ಮಗಳು ನಿಹಾರಿಕಾ (05) ಜತೆ ಆತ್ಮಹತ್ಯೆ (Self Harming) ಮಾಡಿಕೊಂಡವರು.

ಕವಿತಾ ಅವರು ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ನಿವಾಸಿ ಮಂಜುನಾಥ ಎಂಬುವರ ಪತ್ನಿ. ಕವಿತಾ ಮತ್ತು ಮಗಳು ಕಳೆದ ಶುಕ್ರವಾರದಿಂದಲೇ ನಾಪತ್ತೆಯಾಗಿದ್ದರು. ಈ ಬಗ್ಗೆ ಪತಿ‌ ಮಂಜುನಾಥ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಮತ್ತು ಸಂಬಂಧಿಕರು, ಬಂಧುಗಳು ಸಾಕಷ್ಟು ಹುಡುಕಾಟ ನಡೆಸಿದರೂ ತಾಯಿ ಮಗಳು ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗೆ ತಾಯಿ ಮಗಳ ಶವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ‌ಕೆರೆಬಿಳಚಿ ಬಳಿ ಇರುವ ಐತಿಹಾಸಿಕ ಪ್ರವಾಸಿ ತಾಣ ಸೂಳೆಕೆರೆಯಲ್ಲಿ ಪತ್ತೆಯಾಗಿದೆ.

Soolekere suicide case Mother Kavita and Daughter Niharika

ತಾಯಿ ಮತ್ತು ಮಗಳು ಒಂದೇ ವೇಲ್‌ನಲ್ಲಿ ಪರಸ್ಪರ ಕಟ್ಟಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕವಿತಾ ಅವರು ಮಗಳನ್ನು ವೇಲ್‌ನಲ್ಲಿ ಕಟ್ಟಿಕೊಂಡು ನೀರಿಗೆ ಹಾರಿದ್ದಾರೆ ಎನ್ನುವುದು ಇದರಿಂದ ಖಚಿತವಾಗಿದೆ. ಕೆಲವೊಂದು ಸಂದರ್ಭದಲ್ಲಿ ಮಕ್ಕಳ ಜತೆಗೆ ನೀರಿಗೆ ಹಾರಿದಾಗ ಮಕ್ಕಳು ಹೇಗೋ ಬಚಾವಾಗಿ ಮೇಲೆ ಬಂದ ಉದಾಹರಣೆಗಳಿವೆ. ಇಲ್ಲಿ ಹಾಗಾಗಬಾರದು ಎಂಬ ಉದ್ದೇಶದಿಂದ ಕವಿತಾ ಅವರು ತನ್ನ ಮಗಳನ್ನು ಕಟ್ಟಿಕೊಂಡೇ ಹಾರಿದ್ದಾರೆ ಎನ್ನಲಾಗುತ್ತಿದೆ.

ಆರು ವರ್ಷದ ಹಿಂದೆ ಮದುವೆ ಮತ್ತು ನಿರಂತರ ಕಿರುಕುಳ

ಮೂಲತಃ ಎರೇಹಳ್ಳಿಯ ನಿವಾಸಿಯಾದ ಕವಿತಾ ಮದ್ವೆ ಆರು ವರ್ಷದ ‌ಹಿಂದೆ ಹೊನ್ನೆಬಾಗಿ ಮಂಜುನಾಥನೊಂದಿಗೆ ಆಗಿತ್ತು. ಇವರ ಸಂಸಾರದಲ್ಲಿ ನಿಹಾರಿಕಾ ಬೆಳ್ಳಿ ರೇಖೆಯಾಗಿದ್ದಳು. ಬದುಕು ಚೆನ್ನಾಗಿಯೇ ಇದ್ದರೂ ಕವಿತಾಳ ಪಾಲಿಗೆ ವರದಕ್ಷಿಣೆಯ ಭೂತ ನಿರಂತರವಾಗಿ ಕಾಡುತ್ತಿತ್ತು.

ಇದನ್ನೂ ಓದಿ: Self Harming: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಗಂಡನಿಂದಲೇ ಕೊಲೆ ಆರೋಪ

ಪತಿ ಮಂಜುನಾಥ ಮತ್ತು ಮನೆಯವರು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ತಾಯಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚನ್ನಗಿರಿ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸೇರಿ ಕೆರೆಯಿಂದ ಶವಗಳನ್ನು ಮೇಲಕ್ಕೆ ಎತ್ತಿದ್ದಾರೆ. ಶವ ಸ್ವಲ್ಪ ಮಟ್ಟಿಗೆ ಬಾತುಕೊಂಡಿದೆ. ಇದೀಗ ಪೊಲೀಸರು ಮಂಜುನಾಥ್‌ ಮತ್ತು ಕುಟುಂಬದವರ ಮೇಲೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಊರಿನವರ ಪ್ರಕಾರ, ವರದಕ್ಷಿಣೆ ಕಿರುಕುಳವೇ ಸಾವಿಗೆ ಕಾರಣವಾಗಿರಬಹುದು.

Exit mobile version