ಯಶವಂತ್ ಕುಮಾರ್.ಎ, ದಾವಣಗೆರೆ
ಮಾಜಿ ಮುಖ್ಯಮಂತ್ರಿ, ಕುರುಬ ಸಮುದಾಯ ಪ್ರಮುಖ ನಾಯಕ ಸಿದ್ದರಾಮಯ್ಯ ಮತ್ತು ಹರಿಹರ ತಾಲೂಕು ಬೆಳ್ಳೂಡಿ ಕನಕ ಗುರುಪೀಠ ಶಾಖಾ ಮಠದ ಶ್ರೀ ನಿರಂಜನಾನಂದಪುರಿ ನಡುವಿನ ಎರಡು ವರ್ಷಗಳ ಮುಸಿಸು ಶಮನವಾದಂತಿದೆ.
ಕುರುಬ ಸಮುದಾಯ ಗುರುಪೀಠಕ್ಕೂ ಸಿದ್ದರಾಮಯ್ಯ ಅವರಿಗೂ ಅವಿನಾಭಾವ ಸಂಬಂಧ. ಕಳೆದ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಪ್ರಧಾನಿ ಆಗಬೇಕು ಎಂಬ ಅರ್ಥದಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಿದ್ದು ಪರ ಬ್ಯಾಟಿಂಗ್ ಮಾಡಿದ್ದರು. ಅಲ್ಲದೆ ಅವರೇ ನಮ್ಮ ಮುಂದಿನ ಸಿಎಂ ಎಂದೂ ಬಿಂಬಿಸಿದ್ದರು.
2020ರಲ್ಲಿ ಆರಂಭವಾದ ಕುರುಬ ಸಮುದಾಯದ ಎಸ್‌ಟಿ ಮೀಸಲು ಹೋರಾಟದಿಂದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಅದಕ್ಕೆ ಕಾರಣ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಎನ್ನಲಾಗಿತ್ತು. ಹಾಗಾಗಿ ಅಂದಿನಿಂದ ಆಗಸ್ಟ್ 3ರವರೆಗೂ ಸಿದ್ದರಾಮಯ್ಯ ಕನಕ ಗುರುಪೀಠಕ್ಕೆ ಭೇಟಿ ನೀಡಿರಲಿಲ್ಲ. ಸ್ವಾಮೀಜಿಗಳ ಜೊತೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ, ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು, ಮೀಸಲಾತಿ ಹೆಚ್ಚಿಸಬೇಕು ಎಂದು ಶ್ರೀ ನಿರಂಜನಾನಂದಪುರಿ ಶ್ರೀಗಳ ಸಾರಥ್ಯದಲ್ಲಿ ಹೋರಾಟಕ್ಕೆ ಕೆ.ಎಸ್.ಈಶ್ವರಪ್ಪ ಹೋರಾಟಕ್ಕೆ ರೂಪರೇಷೆ ಸಿದ್ಧಪಡಿಸಿದ್ದರು. ಅದಕ್ಕೆ ಕಾಂಗ್ರೆಸ್‌ನ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು. ಶ್ರೀಗಳೂ ಹೋರಾಟ ಮಾಡುವುದು ಬೇಡ ಎಂಬ ಸಲಹೆ ನೀಡಿದ್ದರು. ಆದರೆ, ನಿರಂಜನಾನಂದಪುರಿ ಶ್ರೀಗಳು ಸಿದ್ದು ಮಾತಿಗೆ ಮಣೆ ಹಾಕದೆ ಕೆ.ಎಸ್. ಈಶ್ವರಪ್ಪ ಅವರ ಸೂಚನೆಯಂತೆ ಹೋರಾಟಕ್ಕೆ ದುಮುಕಿದ್ದರು. ಅದರ ಪರಿಣಾಮವಾಗಿ ಸಿದ್ದರಾಮಯ್ಯ ಹಾಗೂ ಕನಕ ಶ್ರೀಗಳ ನಡುವೆ ಮುನಿಸು ಉಂಟಾಗಿತ್ತು.
ಇದನ್ನೂ ಓದಿ | ವಿಸ್ತಾರ TOP 10 NEWS | ಯಶಸ್ವಿ ಸಿದ್ದರಾಮೋತ್ಸವದಿಂದ ಯಶ್ ಟ್ವೀಟ್‌ವರೆಗಿನ ಪ್ರಮುಖ ಸುದ್ದಿಗಳಿವು
ಎರಡು ವರ್ಷಗಳಲ್ಲಿ ಸಿದ್ದರಾಮಯ್ಯ 10ಕ್ಕೂ ಹೆಚ್ಚು ಬಾರಿ ದಾವಣಗೆರೆಗೆ ಆಗಮಿಸಿದ್ದರೂ ಮಠದ ಕಡೆ ಮುಖ ಮಾಡಿರಲಿಲ್ಲ. ವಾರದ ಹಿಂದಷ್ಟೇ ಹರಿಹರ ಶಾಸಕ ಎಸ್. ರಾಮಪ್ಪ ಅವರ ಜನ್ಮ ದಿನಕ್ಕೆ ಹರಿಹರಕ್ಕೆ ಬಂದಿದ್ದ ಸಿದ್ದರಾಮಯ್ಯ, ಸಮೀಪವೇ ಇದ್ದ ಬೆಳ್ಳೂಡಿ ಮಠಕ್ಕೆ ಭೇಟಿ ಕೊಟ್ಟಿರಲಿಲ್ಲ. 75ನೇ ವರ್ಷದ ಕಾರ್ಯಕ್ರಮದ ದಿನವೇ ಸಿದ್ದರಾಮಯ್ಯ ಅವರು ಕನಕ ಗುರುಪೀಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಚುನಾವಣಾ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದೆ.
ಜಮೀರ್ ಸಂಧಾನ
ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಮುನಿಸು ಶಮನವಾಗಲು ಶಾಸಕ ಜಮೀರ್ ಕಾರಣ ಎನ್ನಲಾಗ್ತಿದೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಇಂತಹ ಸಮಯದಲ್ಲಿ ಮುನಿಸು ಸರಿಯಲ್ಲ ಎಂಬ ದೃಷ್ಟಿಯಿಂದ ಶಾಸಕ ಜಮೀರ್ ಒಂದು ವಾರ ಮೊದಲೇ ಶ್ರೀಮಠಕ್ಕೆ ಭೇಟಿ ಕೊಟ್ಟು ಸಿದ್ದರಾಮಯ್ಯ ಮತ್ತು ಶ್ರೀಗಳ ಸಂಧಾನಕ್ಕೆ ದಿನಾಂಕ ನಿಗದಿ ಮಾಡಿದ್ದರು. ಅದರಂತೆ ಆಗಸ್ಟ್ 3 ರಂದು ಮಠದಲ್ಲಿ ಶ್ರೀ ನಿರಂಜನಾನಂದಪುರಿ ಶ್ರೀಗಳು ಕೇಕ್ ಕಟ್ ಮಾಡಿಸುವ ಮೂಲಕ ಸಿದ್ದರಾಮಯ್ಯ ಅವರ ಜನ್ಮ ದಿನ ಆಚರಿಸಿ ರಾಜಿಯಾಗಿದ್ದಾರೆ.
ಶ್ರೀಗಳ ಜತೆ ಗುಪ್ತ ಸಭೆ
ಎರಡು ವರ್ಷಗಳ ಬಳಿಕ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಸುಮಾರು ಅರ್ಧ ಗಂಟೆಗೂ ಹೆಚ್ಚಿನ ಕಾಲ ಶ್ರೀಗಳ ಜೊತೆ ಕಾಲ ಕಳೆದರು. ಮುನಿಸಿಗೆ ಕಾರಣ ಏನು, ರಾಜಕೀಯ ಹುನ್ನಾರಗಳೇನು, ಕುರುಬ ಸಮುದಾಯವನ್ನು ಒಡೆಯುವ ಪ್ರಯತ್ನಗಳು ಯಾವ ರೀತಿ ನಡೆದವು ಎಂಬುದರ ಬಗ್ಗೆ ಶ್ರೀಗಳ ಮಾತುಕತೆ ನಡೆಸಿದರು ಎನ್ನಲಾಗುತ್ತಿದೆ.
ಸಿದ್ದು ಚುನಾವಣಾ ತಂತ್ರಗಾರಿಕೆ
2023ರ ವಿಧಾನಸಭಾ ಚುನಾವಣೆಗೆ ಸಿದ್ದರಾಮಯ್ಯ ಈಗಾಗಲೇ ತಂತ್ರಗಾರಿಕೆ ಆರಂಭಿಸಿದ್ದಾರೆ. ಇಷ್ಟು ದಿನ ಮಠ ಮಾನ್ಯದಿಂದ ದೂರವಿದ್ದ ಸಿದ್ದರಾಮಯ್ಯ ಅಮೃತ ಮಹೋತ್ಸವದ ದಿನದಂದೇ ತಂತ್ರಗಾರಿಕೆ ಆರಂಭಿಸಿ ಕನಕ ಗುರುಪೀಠ, ಪಂಚಮಸಾಲಿ ಮಠ, ಸಿರಿಗೆರೆ, ಮುರುಘಾ ಮಠಕ್ಕೆ ಭೇಟಿ ನೀಡಿ ಚುನಾವಣಾ ಕಹಳೆ ಮೊಳಗಿಸಿದ್ದಾರೆ.
ಇದನ್ನೂ ಓದಿ | ಸಿದ್ದು- ಡಿಕೆಶಿ ಭಾಯಿ ಭಾಯಿ ಸಿದ್ದರಾಮೋತ್ಸವ ಸ್ಟೇಜ್‌ಗೆ ಸೀಮಿತವೆ?: ಹೌದೆನ್ನುತ್ತದೆ ವಿಡಿಯೊ