Site icon Vistara News

ರಾಷ್ಟ್ರೀಯ ನಾಯಕರನ್ನೇ ಓವರ್‌ಟೇಕ್‌ ಮಾಡಿದ ಸಿದ್ದರಾಮಯ್ಯ: ಅವರ ಮಾತಿನಲ್ಲಿದೆ ಗತ್ತು ಗಮ್ಮತ್ತು!

siddaramaiah

ಬೆಂಗಳೂರು: ತಮ್ಮ ರಾಜಕೀಯ ಒಳಪಟ್ಟುಗಳು, ತಂತ್ರ-ಪ್ರತಿತಂತ್ರದಿಂದ ಮಾತ್ರವಲ್ಲ, ತಮ್ಮ ಮಾತಿನಿಂದಲೂ ಜನರ ಮನಗೆದ್ದವರು ಸಿದ್ದರಾಮಯ್ಯ. ಗ್ರಾಮ್ಯ ಶೈಲಿಯ ಅವರ ಮಾತುಗಳನ್ನು ವಿರೋಧಿಗಳೂ ಕುಳಿತು ಎಂಜಾಯ್‌ ಮಾಡಬಲ್ಲರು. ಇದಕ್ಕಾಗಿಯೇ ಸಿದ್ದರಾಮೋತ್ಸವದಲ್ಲೂ ರಾಹುಲ್‌ ಗಾಂಧಿ ಅವರನ್ನೂ ಓವರ್‌ಟೇಕ್‌ ಮಾಡಿದ್ದಾರೆ.

ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ರಾಷ್ಟ್ರೀಯ ನಾಯಕರು ಆಗಮಿಸಿದರೆ ಅಂತಹ ಕಾರ್ಯಕ್ರಮದಲ್ಲಿ ಅವರ ಮಾತೇ ಅಂತಿಮವಾಗಿರುತ್ತದೆ. ಬಿಜೆಪಿ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಷಾ ಆಗಮಿಸಿದರೆ, ಉಳಿದೆಲ್ಲರೂ ಮೊದಲು ಮಾತನಾಡುತ್ತಾರೆ. ನಾಡಿನ ಮುಖ್ಯಮಂತ್ರಿ ಇದ್ದರೂ ಅವರು ಮೊದಲೇ ಮಾತು ಮುಗಿಸುತ್ತಾರೆ. ನಂತರ ಮೋದಿ, ಅಮಿತ್‌ ಷಾ, ಜೆ.ಪಿ. ನಡ್ಡಾ ಮುಂತಾದವರ ಭಾಷಣ ಇರುತ್ತದೆ.

ಜೆಡಿಎಸ್‌ನಲ್ಲೂ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು, ಎಚ್‌.ಡಿ. ಕುಮಾರಸ್ವಾಮಿಯವರ ಮಾತೇ ಅಂತಿಮ. ಕಾಂಗ್ರೆಸ್‌ ಸಹ ಇದಕ್ಕೆ ಹೊರತಾಗಿಲ್ಲ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಅವರು ಇರುವ ಕಾರ್ಯಕ್ರಮದಲ್ಲಿ ಅವರ ಮಾತೇ ಅಂತಿಮ. ಅಂದರೆ, ಕೊನೆಗೆ ಮಾತನಾಡುವವರು ಅಂದಿನ ಕಾರ್ಯಕ್ರಮ ಅತಿ ಮುಖ್ಯ ಅತಿಥಿ ಎಂಬ ಅಲಿಖಿತ ನಿಯಮ ಬಹುತೇಕ ಎಲ್ಲ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳಲ್ಲೂ ನಡೆದುಕೊಂಡುಬಂದ ಪರಿಪಾಠ. ಆದರೆ ಸಿದ್ದರಾಮಯ್ಯ ಈ ರೂಲ್ಸ್‌ ಬ್ರೇಕ್‌ ಮಾಡಿದ್ದಾರೆ.

ಇದನ್ನೂ ಓದಿ | ರಾಹುಲ್‌ ಗಾಂಧಿ ಫಿಟ್‌ನೆಸ್‌: ಸಿದ್ದರಾಮೋತ್ಸವಕ್ಕೂ ಮುನ್ನ 52 ವರ್ಷದ ನಾಯಕನ ವರ್ಕೌಟ್‌

ಸಿದ್ದರಾಮಯ್ಯ ಅವರಿಗೆ ಸುಮಾರಾಗಿ ಇಂಗ್ಲಿಷ್‌ ಮಾತನಾಡಲು ಬರುತ್ತದೆ. ಇಂಗ್ಲಿಷ್‌ ಮಾಧ್ಯಮಗಳಿಗೆ ಸಂದರ್ಶನ ನೀಡುವಷ್ಟು ಮಟ್ಟಿಗಿನ ಹಿಡಿತ ಇಂಗ್ಲಿಷ್‌ ಭಾಷೆಯ ಮೇಲಿದೆ. ಅಲ್ಲೆಲ್ಲ ಫಾರ್ಮಲ್‌ ಆಗಿ ಮಾತನಾಡುವ ಸಿದ್ದರಾಮಯ್ಯ, ಕನ್ನಡಕ್ಕೆ ಬಂದ ಕೂಡಲೆ ಅಪ್ಪಟ ಗ್ರಾಮ್ಯ ಪದಗಳನ್ನೇ ಬಳಸುತ್ತಾರೆ.

ʻನಮ್ಮ ಸರ್ಕಾರ ಬಡವರ ಪರ ಯೋಜನೆಗಳಿಗೆ ಎರಡು ಲಕ್ಸ ಕೋಟಿ ರೂಪಾಯಿ ಕೊಟ್ಟಿದೆʼ ಎನ್ನುವಾಗ, ಲಕ್ಷ ಎನ್ನುವುದು ಲಕ್ಸ ಆಗುತ್ತದೆ. ಅದೇ ರೀತಿ ಶಿಷ್ಟ ಪದ ಪ್ರಯೋಗಗಳನ್ನು ಹೊರತುಪಡಿಸಿ ಗ್ರಾಮೀಣ ಶೈಲಿಯಲ್ಲೇ ಮಾತನಾಡುತ್ತಾರೆ.

ಅದಕ್ಕಿಂತಲೂ ಮುಖ್ಯವಾಗಿ, ವೇದಿಕೆಯ ಮೇಲೆ ಕುಳಿತಿರುವವರು, ವೇದಿಕೆಯ ಎದುರಿಗಿರುವವರ ಮಾತಿಗೂ ಪ್ರತಿಕ್ರಿಯಿಸುವ ಸಿದ್ದರಾಮಯ್ಯ ಶೈಲಿ ಎಲ್ಲರಿಗೂ ಅಚ್ಚುಮೆಚ್ಚು. ಕಾರ್ಯಕ್ರಮವೊಂದರಲ್ಲಿ ವೇದಿಕೆ ಎದುರು ಕುಳಿದಿದ್ದ ವ್ಯಕ್ತಿ ಸಿದ್ದರಾಮಯ್ಯ ಮಾತಿಗೆ ʻಹೌದು ಹುಲಿಯಾʼ ಎಂದಿದ್ದರು. ಬೆಳ್‌ಬೆಳಗ್ಗೇನೇ ಕುಡ್ಕಂಡ್‌ ಗಿಡ್ಕಂಡ್‌ ಬಂದಿದೀಯಾ ನೀನು ಎಂದು ಆ ವ್ಯಕ್ತಿಯನ್ನು ಮಾತನಾಡಿಸುವ ಶೈಲಿ ಅಚ್ಚುಮೆಚ್ಚಾಗಿತ್ತು. ನಂತರ ಈ ʻಹೌದು ಹುಲಿಯಾʼ ಮಾತು ಪ್ರಸಿದ್ಧವಾಯಿತು.

ಚುನಾವಣಾ ಪ್ರಚಾರವೊಂದರ ವೇಳೆ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದವರೊಬ್ಬರು ಅವರ ಜತೆಗೆ ನಡೆಸಿದ ವಾಗ್ವಾದ, ವಾದ ವಿವಾದದ ವಿಡಿಯೋ ಸಹ ವೈರಲ್‌ ಆಗಿತ್ತು. ಸಿದ್ದರಾಮಯ್ಯ ಅವರ ಭಾಷಣವನ್ನು ಕೇಳಲು ಎಲ್ಲರೂ ಮುಗಿ ಬೀಳುತ್ತಾರೆ. ರಾಜಕೀಯವಾಗಿ ಅವರ ಮಾತಿನಲ್ಲಿ ಒಪ್ಪದೇ ಇರಬಹುದಾದ ಅನೇಕ ವಿಚಾರಗಳು ಇರುತ್ತವೆ, ಆದರೆ ಮಾತಿನ ಶೈಲಿ ಮತ್ತು ಎದುರಾಳಿಗಳ ಕಾಲೆಳೆಯುವ ಧಾಟಿಯನ್ನು ನೋಡಲು ಮಜಾ ಬರುತ್ತದೆ ಎಂದು ವಿರೋಧ ಪಕ್ಷಗಳ ನಾಯಕರೂ ಒಪ್ಪಿಕೊಳ್ಳುತ್ತಾರೆ.

ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳಲ್ಲಿ ಉಳಿದ ರಾಷ್ಟ್ರೀಯ ನಾಯಕರೂ ಗೌಣವಾಗಿಬಿಡುತ್ತಾರೆ. ಕಾಂಗ್ರೆಸ್‌ನಲ್ಲಿ ಅತ್ಯುಚ್ಚ ನಾಯಕರೆಂದರೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ. 2018ರ ವಿಧಾನಸಭೆ ಚುನಾವಣೆಗೂ ಮುನ್ನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲೂ ರಾಹುಲ್‌ ಗಾಂಧಿ ಮೊದಲು ಮಾತು ಮುಗಿಸಿದ್ದರು. ಸಿದ್ದರಾಮಯ್ಯ ಅವರ ಭಾಷಣವನ್ನು ಕೊನೆಗೆ ಇರಿಸಲಾಗಿತ್ತು. ಸಿದ್ದರಾಮಯ್ಯ ಮಾತನ್ನು ಕೊನೆಗೆ ಇರಿಸಿದರೆ ಜನರನ್ನು ಹಿಡಿದಿಟ್ಟುಕೊಳ್ಳಬಹುದು ಎನ್ನುವುದು ಆಯೋಜಕರ ಖಚಿತ ನಿಲುವು.

ಪಕ್ಷದ ಕಾರ್ಯಕ್ರಮದಲ್ಲೇ ಸಿದ್ದರಾಮಯ್ಯ ಕೊನೆಗೆ ಮಾತನಾಡಿದ್ದರು. ಇನ್ನು ಸಿದ್ದರಾಮೋತ್ಸವ, ಅವರದ್ದೇ ಹುಟ್ಟುಹಬ್ಬದ ಸಂಭ್ರಮ. ಅಲ್ಲಿಗೆ ಆಗಮಿಸಿರುವವರು ಕಾಂಗ್ರೆಸ್‌ಗಿಂತಲೂ ಸಿದ್ದು ಅಭಿಮಾನಿಗಳು. ಹಾಗಾಗಿ ಸಿದ್ದರಾಮೋತ್ಸವದಲ್ಲೂ ಪ್ರಾರಂಭದಲ್ಲಿ ಕಾಂಗ್ರೆಸ್‌ ನಾಯಕರು, ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ರಾಹುಲ್‌ ಗಾಂಧಿ ಭಾಷಣದ ನಂತರ ಸಿದ್ದರಾಮಯ್ಯ ಮಾತನಾಡಲಿದ್ದಾರೆ.

ಸಿದ್ದರಾಮಯ್ಯ ಅವರ ಮಾತನ್ನು ಅಂತಿಮವಾಗಿ ಆಡಿಸಲು ರಾಹುಲ್‌ ಗಾಂಧಿಯವರೂ ಒಪ್ಪಿದ್ದಾರೆ. ಒಟ್ಟಿನಲ್ಲಿ ಜನರಿಗೆ ಸಂದೇಶ ಲಭಿಸಲಿ ಎನ್ನುವುದು ಅವರ ಅಭಿಪ್ರಾಯ. ಆದರೆ ಇಲ್ಲಿವರೆಗೆ ಸೋನಿಯಾ ಗಾಂಧಿಯವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಹೀಗೆ ಮಾಡಿಲ್ಲ. ಸೋನಿಯಾ ಅವರಿದ್ದ ಕಾರ್ಯಕ್ರಮದಲ್ಲಿ ಸೋನಿಯಾ ಅವರೇ ಕೊನೆಗೆ ಮಾತನಾಡುತ್ತಾರೆ. ಬಹುತೇಕ ಕಾರ್ಯಕ್ರಮದಲ್ಲಿ ಇದೇ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ | ಇಂದು ಸಿದ್ದರಾಮೋತ್ಸವ ಸಂಭ್ರಮ, ದಾವಣಗೆರೆಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

Exit mobile version