ದಾವಣಗೆರೆ: ಸದಾ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಹರಿಹಾಯುವ ತಮ್ಮ ಅಭ್ಯಾಸವನ್ನು ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ 75ನೇ ಹುಟ್ಟುಹಬ್ಬದ ಸಂಭ್ರಮದ ಸಮಯದಲ್ಲೂ ಇದನ್ನು ಮುಂದುವರಿಸಿದೆ. ಆದರೆ ಈ ಬಾರಿ ಪೂರ್ವಸಿದ್ಧತೆಯೊಂದಿಗೆ ಆಗಮಿಸಿದ್ದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಡೈಲಾಗ್‌ಗಳನ್ನೇ ಆಧಾರವಾಗಿಟ್ಟುಕೊಂಡು ವಾಗ್ದಾಳಿ ನಡೆಸಿದರು.
1. ನಾ ಖಾವೂಂಗಾ, ನಾ ಖಾನೇ ದೂಂಗಾ
ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಹೇಳುತ್ತಿರುವ ʻಮಹಾಮಂತ್ರʼವೆಂದರೆ ನಾ ಖಾವೂಂಗಾ, ನಾ ಖಾನೇ ದೂಂಗಾ. ಅಂದರೆ, ತಮ್ಮ ಸರ್ಕಾರದಲ್ಲಿ ಸ್ವತಃ ತಾವು ಭ್ರಷ್ಟಾಚಾರ ಮಾಡುವುದಿಲ್ಲ, ಹಾಗೂ ಬೇರೆಯವರೂ ಭ್ರಷ್ಟಾಚಾರವೆಸಗಲು ಅವಕಾಶ ನೀಡುವುದಿಲ್ಲ ಎನ್ನುವುದು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಆರೋಪಗಳನ್ನು ಮಾಡಲಾಗಿತ್ತು. ಅನೇಕ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪಗಳ ಕಾರಣಕ್ಕಾಗಿಯೇ ಬಿಜೆಪಿ ಅಧಿಕಾರಕ್ಕೆ ಬರಲು ಸಹಕಾರವಾಗಿತ್ತು. ಇದೇ ಮಾತನ್ನು ಸಿದ್ದರಾಮಯ್ಯ ತಮ್ಮ ವಾಗ್ದಾಳಿಗೆ ಬಳಸಿಕೊಂಡರು.
ತಾವೂ ತಿನ್ನುವುದಿಲ್ಲ, ಬೇರೆಯವರು ತಿನ್ನಲೂ ಬಿಡುವುದಿಲ್ಲ ಎಂದು ನರೇಂದ್ರ ಮೋದಿಯವರು ಸುಳ್ಳು ಹೇಳುತ್ತಾರೆ. ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಕಂಟ್ರಾಕ್ಟರ್ ಅಸೋಸಿಯೇಷನ್ ಹೇಳಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ತಮ್ಮ 44 ವರ್ಷದ ರಾಜಕೀಯ ಇತಿಹಾಸದಲ್ಲಿ ಕಂಡಿಲ್ಲ. ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ | ಸಿದ್ದರಾಮೋತ್ಸವ | ಜನುಮ ದಿನಾಚರಣೆ ಬೇಡ ಎನ್ನುವ ಸಿದ್ದರಾಮಯ್ಯ ಸಿದ್ದರಾಮೋತ್ಸವಕ್ಕೆ ಒಪ್ಪಿದ್ದೇಕೆ?
2. ಸಬ್ ಕಾ ಸಾಥ್, ಸಬ್‌ಕಾ ವಿಶ್ವಾಸ್
ಸಾಮಾನ್ಯವಾಗಿ ಬಿಜೆಪಿಯನ್ನು ಕೋಮುವಾದಿ ಎಂದು ವಿರೋಧ ಪಕ್ಷಗಳು ಆರೋಪಿಸುತ್ತವೆ. ಬಹುಸಂಖ್ಯಾತ ಹಿಂದುಗಳ ಪರವಾಗಿಯೇ ನೀತಿಗಳನ್ನು ರೂಪಿಸುವ ಮೂಲಕ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರನ್ನು ಅವಕಾಶವಂಚಿತರನ್ನಾಗಿ ಮಾಡಲಾಗುತ್ತದೆ ಎಂಬ ಆರೋಪಗಳನ್ನು ಆಗಾಗ್ಗೆ ಮಾಡಲಾಗುತ್ತದೆ. ಇದಕ್ಕೆ ಉತ್ತರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಬ್ ಕಾ ಸಾಥ್, ಸಬ್‌ಕಾ ವಿಶ್ವಾಸ್ ಎಂಬ ಘೋಷಣೆ ಮಾಡಿದರು. ತಮ್ಮ ಸರ್ಕಾರ ಮುಸ್ಲಿಂ ಮಹಿಳೆಯರ ಪರವಾಗಿ ತ್ರಿವಳಿ ತಲಾಖ್ ನಿಷೇಧ ಮಾಡಿದೆ, ಎಸ್‌ಟಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದೆ, ಹಿಂದುಳಿದ ವರ್ಗಗಳ ಮುಖಂಡರನ್ನು ದೇಶದ ಉನ್ನತ ಸ್ಥಾನಕ್ಕೆ ಕರೆತಂದಿದ್ದೇವೆ ಎಂಬ ಸಂದೇಶ ನೀಡಿದ್ದರು. ಈ ವಿಚಾರವನ್ನು ಕರ್ನಾಟಕದ ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಹತ್ಯೆಗಳಿಗೆ ಲಿಂಕ್ ಮಾಡಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಬ್ ಕಾ ಸಾಥ್, ಸಬ್‌ಕಾ ವಿಶ್ವಾಸ್ ಎಂದಿರಿ. ಕರಾವಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮೂರು ಕೊಲೆ ಆಗಿವೆ. ಮಸೂದ್, ಪ್ರವೀಣ್ ಹಾಗೂ ಫಾಜಿಲ್ ಕೊಲೆ ಆಗಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರಾವಳಿಗೆ ಭೇಟಿ ನೀಡಿದ್ದರು. ಮಸೂದ್ ಮನೆಗೂ ಹೋಗಲಿಲ್ಲ, ಫಾಜಿಲ್ ಮನೆಗೂ ಹೋಗಲಿಲ್ಲ, ಪ್ರವೀಣ್ ಮನೆಗೆ ಮಾತ್ರ ಹೋದರು. ಪ್ರವೀಣ್‌ಗೆ ಮಾತ್ರವೇ ಪರಿಹಾರ ಕೊಟ್ಟರು. ಪ್ರವೀಣ್‌ಗೆ ಪರಿಹಾರ ಕೊಟ್ಟಿದ್ದು ಸರಿ, ಅದಕ್ಕೆ ನನ್ನ ವಿರೋಧವಿಲ್ಲ. ಆದರೆ ಉಳಿದಿಬ್ಬರಿಗೆ ಏಕೆ ಕೊಟ್ಟಿಲ್ಲ? ನೀವು ಇಡೀ ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಒಂದು ಧರ್ಮಕ್ಕೆ ಸೇರಿದ ಮುಖ್ಯಮಂತ್ರಿಯೋ? ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವುದಕ್ಕೆ ನಿಮಗೆ ನೈತಿಕತೆ ಇದೆಯ? ನೀವು ಈ ರಾಜ್ಯ ಆಳುವುದಕ್ಕೆ ಲಾಯಕ್ಕ? ನೀವು ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದರು.
ಇದನ್ನೂ ಓದಿ | ರಾಹುಲ್ ಗಾಂಧಿ ಫಿಟ್‌ನೆಸ್: ಸಿದ್ದರಾಮೋತ್ಸವಕ್ಕೂ ಮುನ್ನ 52 ವರ್ಷದ ನಾಯಕನ ವರ್ಕೌಟ್
3. ಅಚ್ಛೇ ದಿನ್
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪಂಚಭೂತಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಆಪಾದನೆ ಮಾಡುತ್ತಿತ್ತು. 2ಜಿ ತರಂಗಾತರ, ಯುದ್ಧ ವಿಮಾನ, ಆದರ್ಶ್ ಹೌಸಿಂಗ್ ಸೊಸೈಟಿ, ಕಲ್ಲಿದ್ದಲು ಹಗರಣ ಸೇರಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ದೇಶ ಕರಾಳ ದಿನಗಳನ್ನು ಅನುಭವಿಸುತ್ತಿದೆ. ಬಿಜೆಪಿ ಸರ್ಕಾರ ಬಂದರೆ ದೇಶಕ್ಕೆ ಅಚ್ಛೇ ದಿನ್ (ಉತ್ತಮ ದಿನಗಳು) ಬರಲಿವೆ ಎಂದು ಚುನಾವಣೆ ಪ್ರಚಾರ ಸಭೆಗಳನ್ನು ನಡೆಸಿದ್ದರು. ಇದೇ ಅಚ್ಛೇ ದಿನ್ ಹೇಳಿಕೆಯನ್ನು ಬಳಸಿಕೊಂಡ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದರು.
ಕಳೆದ ಎಂಟು ವರ್ಷದಿಂದ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಅವರು ಪ್ರಧಾನಿಯಾದರೆ ದೇಶಕ್ಕೆ ಅಚ್ಛೇ ದಿನ್ ಬರುತ್ತದೆ ಎಂದು ಹೇಳಿದ್ದರು. ಆದರೆ ಅವರು ನುಡಿದಂತೆ ನಡೆಯಲಿಲ್ಲ. 2014ರಲ್ಲಿ ಮೋದಿ ಪ್ರಧಾನಿಯಾದಾಗ ಈ ದೇಶದ ಮೇಲಿದ್ದ ಸಾಲ 53 ಲಕ್ಷ ಕೋಟಿ ರೂಪಾಯಿ. ಎಂಟು ವರ್ಷದ ನಂತರ, ದೇಶದ ಮೇಲೆ 155 ಲಕ್ಷ ಕೋಟಿ ರೂ. ಸಾಲವಾಗಿದೆ. ಅಂದರೆ ಎಂಟು ವರ್ಷದಲ್ಲಿ 102 ಲಕ್ಷ ಕೋಟಿ ರೂ. ಸಾಲ ಮಾಡಿದ್ದೀರಿ. ರೈತರನ್ನು, ದಲಿತರನ್ನು, ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು ಹಾಳು ಮಾಡಿದ್ದೀರಿ. ಅಚ್ಛೇ ದಿನ್ ಎಂದುಕೊಂಡು ಅಧಿಕಾರಕ್ಕೆ ಬಂದ ನೀವು ಇಂದು ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಬೆಲೆ ಗಗನಕ್ಕೇರಲು ಕಾರಣವಾಗಿದ್ದೀರ ಎಂದು ಹರಿಹಾಯ್ದರು.
ಇದನ್ನೂ ಓದಿ | Video | ಸಿದ್ದರಾಮಯ್ಯ @75: ಸಿದ್ದರಾಮೋತ್ಸವಕ್ಕೂ ಮುನ್ನ ಒಂದು ಸಿಪ್ ಬಿಯರ್
4. ಕಾಂಗ್ರೆಸ್ ಮುಕ್ತ ಭಾರತ್
ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದೆ. ಆದರೆ ಈ ವರ್ಷಗಳಲ್ಲಿ ಕೇವಲ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಪ್ರತಿಭೆಗಳಿಗೆ ಅವಕಾಶ ನೀಡದಿರುವುದನ್ನು ನಡೆಸಿದೆ. ಬಿಜೆಪಿ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವುದಷ್ಟೆ ಅಲ್ಲ, ದೇಶದ ವಿವಿಧ ರಾಜ್ಯಗಳಲ್ಲಿ, ಸ್ಥಳೀಯ ಮಟ್ಟದಲ್ಲೂ ಕಾಂಗ್ರೆಸ್ ಅಧಿಕಾರವನ್ನು ಕಿತ್ತೆಸೆಯುವುದೇ ದೇಶದ ಅಭಿವೃದ್ಧಿಗೆ ಪರಿಹಾರ ಎನ್ನುವುದು ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರ ಭಾಷಣದ ಸಾರಾಂಶವಾಗಿರುತ್ತಿದ್ದವು. ಇದೇ ಮಾತನ್ನು ಅತ್ಯಂತ ಆಕ್ರೋಶಭರಿತರಾಗಿ ಸಿದ್ದರಾಮಯ್ಯ ಭಾಷಣದಲ್ಲಿ ಪ್ರಸ್ತಾಪಿಸಿದರು.
ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರಿಗೆ ಇ.ಡಿ ವಿಚಾರಣೆ ನಡೆಸುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ “ಜನಶಕ್ತಿ ಎದ್ದೇ ಏಳುತ್ತದೆ. ಇಂದು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಯಾವುದೇ ಅಕ್ರಮ ಹಣ ವರ್ಗಾವಣೆ ನಡೆಯದಿದ್ದರೂ ಐವತ್ತು ಗಂಟೆ ವಿಚಾರಣೆ ಮಾಡುತ್ತಿದ್ದೀರ. ಸೋನಿಯಾ ಗಾಂಧಿಯವರ ವಯಸ್ಸನ್ನೂ ಲೆಕ್ಕಿಸದೆ ಇ.ಡಿ. ಕಚೇರಿಗೆ ಕರೆದು ವಿಚಾರಣೆ ಮಾಡಿದ್ದೀರಿ. ನರೇಂದ್ರ ಮೋದಿಯವರೇ, ಕಾಂಗ್ರೆಸ್‌ಗೆ ಕೋಟ್ಯಂತರ ಕಾರ್ಯಕರ್ತರಿದ್ದಾರೆ. ಅವರೆಲ್ಲರೂ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಜತೆಗೆ ಇದ್ದಾರೆ. ಅಮಾಯಕರನ್ನು ವಿಚಾರಣೆ ನಡೆಸಲು ಕಾನೂನು, ಸಂವಿಧಾನ ಅವಕಾಶ ನೀಡುವುದಿಲ್ಲ. ಸೇಡಿನ ರಾಜಕಾರಣ ಮಾಡುವ ಕೋಮುವಾದಿ ಬಿಜೆಪಿ ಸರ್ಕಾರವನ್ನು ಆದಷ್ಟೂ ಬೇಗ ಕಿತ್ತೊಗೆಯಬೇಕು. ಕಾಂಗ್ರೆಸ್ ಮುಕ್ತ ಭಾರತ್ ಎಂಬ ಬಿಜೆಪಿ ಘೋಷಣೆಯನ್ನು ಎಂದಿಗೂ ನನಸಾಗಲು ಅವಕಾಶ ನೀಡುವುದಿಲ್ಲʼʼ ಎಂದರು.
ಇದನ್ನೂ ಓದಿ | ಸಿದ್ದರಾಮೋತ್ಸವ ವೇದಿಕೆಯಲ್ಲಿ ಸಾಮೂಹಿಕ ನಾಯಕತ್ವದ ಮಂತ್ರ ಪಠಿಸಿದ ಡಿ.ಕೆ ಶಿವಕುಮಾರ್