Site icon Vistara News

ಕದ್ದ ಮಗುವನ್ನು ಹಿಂದಿರುಗಿಸಿದ ಮಹಿಳೆ: 20 ದಿನದ ಬಳಿಕ ಪತ್ತೆಯಾದ ನವಜಾತ ಶಿಶು

ಚಾಕು ಇರಿತ

ದಾವಣಗೆರೆ: ಮಕ್ಕಳಿಲ್ಲದ ದಂಪತಿಗೆ ಅಕ್ರಮವಾಗಿ ಮಾರಾಟ ಮಾಡುವುದೂ ಸೇರಿ ಅನೇಕ ಕಾರಣಗಳಿಗೆ ಮಕ್ಕಳನ್ನು ಕಳ್ಳತನ ಮಾಡುವ ದಂಧೆ ರಾಜ್ಯ ಹಾಗೂ ದೇಶದಕ್ಕಿ ಸಕ್ರಿಯವಾಗಿ ನಡೆಯುತ್ತಿದೆ. ಆದರೆ ದಾವಣಗೆರೆಯಲ್ಲಿ ಇಂತಹದ್ದೇ ಒಂದು ಪ್ರಕರಣದಲ್ಲಿ ಮಗುವನ್ನು ಕದದ ಮಹಿಳೆ 20 ದಿನದ ನಂತರ ವೃದ್ಧೆಯೊಬ್ಬರಿಗೆ ಹಿಂದಿರುಗಿಸಿರುವ ಘಟನೆ ನಡೆದಿದೆ.

ಮಾರ್ಚ್‌ 16ರಂದು ದಾವಣಗೆರೆ ನಗರದ ಚಾಮರಾಜಪೇಟೆ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಮೂಲದ ಇಸ್ಮಾಯಿಲ್‌ ಜಬೀವುಲ್ಲಾ ಹಾಗೂ ಉಮೇಸಲ್ಮಾ ದಂಪತಿಗೆ ಸೇರಿದ ಮಗುವನ್ನು ಹುಡುಕಿಕೊಡುವಂತೆ ದಾವಣಗೆರೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಕಳುವಾಗಿರುವ ಮಗುವನ್ನು ಪೊಲೀಸರು ಹುಡುಕಿಕೊಡಬೇಕು ಎಂದು ಮಗುವಿನ ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆಯನ್ನೂ ನಡೆಸಿದ್ದರು.

ಈ ನಡುವೆ ಮಂಗಳವಾರ ತಡರಾತ್ರಿ ದಾವಣಗೆರೆ ನಗರದ KSRTC ಬಸ್‌ ನಿಲ್ದಾಣಕ್ಕೆ ಆಗಮಿಸಿದ ಮಹಿಳೆಯೊಬ್ಬರು, ನಿಲ್ದಾಣದ ಪಕ್ಕದಲ್ಲಿ ಕುಳಿತಿದ್ದ ವೃದ್ಧೆಗೆ ಮಗುವನ್ನು ಕೊಟ್ಟು ಪರಾರಿಯಾಗಿದ್ದಾಳೆ. ಕೂಡಲೆ ಮಗುವನ್ನು ಪೊಲೀಸರಿಗೆ ತಲುಪಿಸಲಾಗಿದೆ. ಮಗು ಮೇಲ್ನೋಟಕ್ಕೆ ಇಸ್ಮಾಯಿಲ್‌ ಜಬೀವುಲ್ಲಾ ಹಾಗೂ ಉಮೇಸಲ್ಮಾ ದಂಪತಿಗೆ ಸೇರಿದ್ದೇ ಎಂದು ತಿಳಿಯುತ್ತಿದೆ. ಆದರೆ ಮಗುವಿನ ಹಾಗೂ ದಂಪತಿಯ ವೈದ್ಯಕೀಯ ಪರೀಕ್ಷೆ ನಡೆಸಿ, ಮಗು ಅವರದ್ದೇ ಎಂದು ಖಚಿತಪಡಿಸಿಕೊಂಡ ನಂತರವಷ್ಟೆ ಹಸ್ತಾಂತರ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಓದು: ತೆಂಗಿನಕಾಯಿ ಕೀಳಲು ಬಂದವ ಅಜ್ಜಿ ಕುತ್ತಿಗೆಯಲ್ಲಿದ್ದ ಸರ ಕಿತ್ತ !

ಒಟ್ಟಿನಲ್ಲಿ, ಕಳೆದುಹೋದ ಮಗುವೊಂದು ಪವಾಡಸದೃಷವಾಗಿ ಹಿಂದಿರುಗಿರುವುದು ಪೊಲೀಸರು ಹಾಗೂ ಪೋಷಕರಲ್ಲಿ ಸಂತಸಕ್ಕೆ ಕಾರಣವಾಗಿದೆ. ಆದರೆ ಮಗುವನ್ನು ಕದ್ದ ಮಹಿಳೆ ಹಿಂದಿರುಗಿಸಿದ್ದೇಕೆ ಎಂಬ ಪ್ರಶ್ನೆಗೆ ಮಾತ್ರ ಉತ್ತರ ದೊರಕಿಲ್ಲ.

Exit mobile version