ದಾವಣಗೆರೆ: ಬೆಣ್ಣೆ ದೋಸೆಗೆ ಖ್ಯಾತಿಯಾಗಿರುವ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ (Davangere Lok Sabha Constituency) ಈ ಬಾರಿಯೂ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಕುಟುಂಬಗಳ ನಡುವಿನ ಸಮರವೇ ಜೋರಾಗಿದೆ. ಆದರೆ, ಈ ಕುಟುಂಬಗಳ ಮಹಿಳೆಯರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದರ ಮಧ್ಯೆಯೇ, ಜಿ.ಬಿ. ವಿನಯ್ ಕುಮಾರ್ ಅವರು ಕಾಂಗ್ರೆಸ್ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮತಗಳ ವಿಭಜನೆ ನಿರೀಕ್ಷಿಸಲಾಗಿದೆ.
ಸಂಸದ ಜಿ.ಎಂ.ಸಿದ್ದೇಶ್ವರ್ ಅವರಿಗೆ ಅನಾರೋಗ್ಯದ ಕಾರಣದಿಂದಾಗಿ ಬಿಜೆಪಿಯು ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಕಣಕ್ಕಿಳಿಸಿದೆ. ಅತ್ತ, ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದರಿಂದಾಗಿ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ನಾರಿಶಕ್ತಿಯ ನಡುವಿನ ದೊಡ್ಡ ಸಮರವಾಗಿದೆ. ಹಾಗಾಗಿ, ಯಾರು ಗೆದ್ದರೂ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ ಎಂದೇ ಹೇಳಲಾಗುತ್ತಿದೆ.
ಜಿ.ಎಂ.ಸಿದ್ದೇಶ್ವರ್ ಅವರು ಅನಾರೋಗ್ಯದ ಮಧ್ಯೆಯೂ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ನರೇಂದ್ರ ಮೋದಿ ಅವರ ಅಲೆಯು ಕೂಡ ಕ್ಷೇತ್ರದಲ್ಲಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮಧ್ಯಸ್ಥಿಕೆಯಿಂದಾಗಿ ಕ್ಷೇತ್ರದಲ್ಲಿ ಭುಗಿಲೆದ್ದಿದ್ದ ಭಿನ್ನಮತವು ಶಮನವಾಗಿದೆ. ಹಾಗಾಗಿ, ಗಾಯತ್ರಿ ಸಿದ್ದೇಶ್ವರ್ ಅವರಿಗೆ ಗೆಲುವು ಸಿಕ್ಕರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.
ದಾವಣಗೆರೆ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ವರ್ಚಸ್ಸಿದೆ. ಇವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಸಚಿವರೂ ಆಗಿದ್ದಾರೆ. ಲಿಂಗಾಯತ ಮತಗಳ ಮೇಲೆ ಇವರ ಕುಟುಂಬದ ಹಿಡಿತವಿದೆ. ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕಳೆದ ಒಂದು ವರ್ಷದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಜನರಿಗೆ ಹತ್ತಿರವಾಗಿದ್ದಾರೆ. ಮಾವ, ಪತಿಯ ಬಲದಿಂದ, ಸಮಾಜ ಸೇವೆ, ಕಾಂಗ್ರೆಸ್ ಗ್ಯಾರಂಟಿಗಳ ಫಲವಾಗಿ ಪ್ರಭಾ ಮಲ್ಲಿಕಾರ್ಜುನ್ ಅವರು ಮುನ್ನಡೆಯ ವಿಶ್ವಾಸದಲ್ಲಿದ್ದಾರೆ. ಆದರೆ, ಜಿ.ಬಿ.ವಿನಯ್ ಕುಮಾರ್ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿರುವುದು ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ತುಸು ಹಿನ್ನಡೆ ಎಂದೇ ಹೇಳಲಾಗುತ್ತಿದೆ.
2019, 2014ರ ಫಲಿತಾಂಶ ಏನಾಗಿತ್ತು?
2019ರಲ್ಲಿ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್ ಅವರು ಕಾಂಗ್ರೆಸ್‌ನ ಎಚ್.ಬಿ.ಮಂಜಪ್ಪ ಅವರ ವಿರುದ್ಧ ಸುಮಾರು 1.69 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಕಳೆದ 4 ಲೋಕಸಭೆ ಚುನಾವಣೆಗಳಲ್ಲೂ ಬಿಜೆಪಿಯಿಂದ ಜಿ.ಎಂ.ಸಿದ್ದೇಶ್ವರ್ ಅವರೇ ಗೆಲುವು ಸಾಧಿಸಿದ್ದಾರೆ. 2004, 2009 ಹಾಗೂ 2014ರಲ್ಲೂ ಜಿ.ಎಂ.ಸಿದ್ದೇಶ್ವರ್ ಅವರೇ ಗೆಲುವು ಸಾಧಿಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: Dakshina Kannada Lok Sabha Constituency : ದಕ್ಷಿಣ ಕನ್ನಡದಲ್ಲಿ ವಿಜಯ ಅಭಿಯಾನ ಮುಂದುವರಿಸಲು ಬಿಜೆಪಿ ಕಾತರ