ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯಕ್ಕೆ (Veerashaiva Lingayath) ಸಮುದಾಯಕ್ಕೆ 68 ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ನಾಯಕರಲ್ಲಿ ಬೇಡಿಕೆ ಇಟ್ಟಿದ್ದೇವೆ, 50-55 ಜನರಿಗೆ ನೀಡುವ ಸಾಧ್ಯತೆಯಿದೆ ಎಂದು ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಸುದ್ದಿಗಾರರೊಂದಿಗೆ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ಕೊಡುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಕೇಳಿದಷ್ಟು ಕೊಡಲ್ಲ, ಸ್ವಲ್ಪ ಹೆಚ್ಚು ಕಮ್ಮಿ ಕೊಡ್ತಾರೆ. 68 ಟಿಕೆಟ್ ಗೆ ಬೇಡಿಕೆಯಿಟ್ಟಿದ್ದೇವೆ, ಅವರು 50-55 ಕೊಡಬಹುದು.
ಸಮುದಾಯದ ಮತಗಳು ಈ ಹಿಂದೆ ಕಾಂಗ್ರೆಸ್ ಪರವಾಗಿದ್ದವು. ವೀರೇಂದ್ರ ಪಾಟೀಲ್ ಅವರನ್ನು ತೆಗೆದು ಹಾಕಿದ ಮೇಲೆ ಜೆಡಿಎಸ್ ಗೆ ಹೋದವು. ಜೆಡಿಎಸ್ ನಿಂದ ಬಿಜೆಪಿಗೆ ಬಂದವು. ಕಳೆದ ಬಾರಿ ಟಿಕೆಟ್ ಪಡೆದವರಲ್ಲಿ ನಾವೇ ಹೆಚ್ಚು ಗೆದ್ದಿದ್ದೇವೆ ಎಂದರು.
ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಬರುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ದೊಡ್ಡವರ ಸುದ್ದಿ ನಮಗೆ ಯಾಕೆ? ಎಂದರು. ಜನರು ಮತ ಹಾಕಿದ ಬಳಿಕ ಗೊತ್ತಾಗುತ್ತದೆ, ವೋಟ್ ಬಂದಿದ್ದಾವಾ, ಇಲ್ಲವಾ ಅಂತ. ಸೋಮಣ್ಣ ಬಂದ್ರೆ ಸ್ವಾಗತ ಮಾಡ್ತೇವೆ. ನಮ್ಮ ಕೈಯಲ್ಲಿ ಏನಿದೆ? ನಮ್ಮ ಲೀಡರ್ಸ್ ಕರೆದುಕೊಂಡು ಬರ್ತಾರೆ. ಯಾರನ್ನೇ ಸೇರಿಸಿಕೊಂಡರೂ ನಮ್ಮ ವಿರೋಧವಿಲ್ಲ.
ಇದನ್ನೂ ಓದಿ: V. Somanna: ಅಶೋಕ್ ಜತೆ ಮುನಿಸಿಕೊಂಡು ಅರ್ಧಕ್ಕೇ ಬಿಜೆಪಿ ರಥ ಇಳಿದ ವಿ. ಸೋಮಣ್ಣ: ಪಕ್ಷ ಬಿಡೋದು ಪಕ್ಕಾ?
ಟಿಕೆಟ್ ವಿಚಾರಕ್ಕೆ ಚರ್ಚೆ ಮಾಡಿದ್ದೇವೆ. ಯಾರಿಗೆ ಟಿಕೆಟ್ ಕೊಡಬೇಕು ಎಂದು ಚರ್ಚೆ ಮಾಡಿದ್ದೇವೆ. ಪರಿಶೀಲನೆ ಮಾಡಿ ಎಂದು ಎಂ.ಬಿ. ಪಾಟೀಲ್ ರ ಕೈಯಲ್ಲಿ ಕೊಟ್ಟಿದ್ದೇವೆ ಎಂದರು.
ಸಚಿವ ವಿ. ಸೋಮಣ್ಣ ಕಾಂಗ್ರೆಸ್‌ಗೆ ಆಗಮಿಸಿ ರಾಜಾಜೀನಗರದಿಂದ ಸ್ಪರ್ಧೀಸುವ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡ್ತಾರೆ. ನಾವು ಬೆಂಗಳೂರಿನಲ್ಲಿ ಎರಡು ಸೀಟು ಕೊಡಿ ಎಂದು ಕೇಳಿದ್ದೇವೆ ಎಂದರು.