Site icon Vistara News

Wild Animals : ರಸ್ತೆಗೆ ಅಡ್ಡಲಾಗಿ ಮಲಗಿಕೊಂಡ ಚಿರತೆ; ಕಾಡಿನಿಂದ ಹಸು ಜತೆಗೆ ಓಡೋಡಿ ಬಂದ ಜಿಂಕೆ

Wild Animals

ದಾವಣಗೆರೆಯ ಕೊಂಡಜ್ಜಿ ಸಮೀಪ ಚಿರತೆಯೊಂದು ಪ್ರತ್ಯಕ್ಷಗೊಂಡು ಆತಂಕವನ್ನು (Wild Animals) ಸೃಷ್ಟಿಸಿತ್ತು. ಶಂಕ್ರನಹಳ್ಳಿ ರಸ್ತೆ ಮಧ್ಯೆ ಕಾಣಿಸಿಕೊಂಡ ಚಿರತೆಯು ಬಳಿಕ ರಸ್ತೆಗೆ ಅಡ್ಡಲಾಗಿ ಮಲಗಿಕೊಂಡಿತ್ತು. ರಸ್ತೆಯಲ್ಲಿ ಓಡಾಡಲು ಜನರು, ವಾಹನ ಸವಾರರು ಪರದಾಡಬೇಕಾಯಿತು. ಕಾರಿನೊಳಗೆ ಕುಳಿತು ಚಿರತೆ ಓಡಾಟವನ್ನು ಯುವಕರು ಸೆರೆ ಹಿಡಿದಿದ್ದಾರೆ. ಗ್ರಾಮಸ್ಥರು ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ಕಾಡಿನಿಂದ ಓಡಿ ಬಂದ ಜಿಂಕೆ

ಕಾಡಿನಿಂದ ಗೋವಿನ ಜತೆಗೆ ಜಿಂಕೆಯೊಂದು ನಾಡಿಗೆ ಬಂದಿದೆ. ಶಿವಮೊಗ್ಗದ ಹೊಸನಗರ ಪಟ್ಟಣಕ್ಕೆ ಮಳೆಗಾಲದ ವಿಶೇಷ ಅತಿಥಿಯಾಗಿ ಜಿಂಕೆ ಆಗಮಿಸಿದಂತೆ ಭಾಸವಾಗಿತ್ತು. ಹೊಸನಗರ ಪಟ್ಟಣದ ಶಿವಪ್ಪನಾಯಕ ರಸ್ತೆಯಲ್ಲಿ ಗೋವಿನ ಜತೆಗೆ ಓಡೋಡಿ ಬಂದಿದೆ. ಜಿಂಕೆ ಓಡಾಟವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟಿದ್ದನ್ನು ಗಮನಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Assault Case : ಹೆಲ್ಮೆಟ್‌ ಇಲ್ಲದೇ ಚಲಿಸುತ್ತಿದ್ದ ಬೈಕ್ ಸವಾರನ ಕಾಲರ್ ಪಟ್ಟಿ ಹಿಡಿದು ಎಳೆದ ಟ್ರಾಫಿಕ್‌ ಪೊಲೀಸ್‌!

ಬಾಲಕನ ಮೇಲೆ ದಾಳಿ ಮಾಡಿದ ಬೀದಿ ನಾಯಿಗಳು

ಬೀದಿ ನಾಯಿಗಳು ದಾಳಿ ಮಾಡಿದ್ದು, ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ವೆಂಕಟೇಶ್ವರಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಬಾಲಾಜಿ ನಾಯ್ಕ್ ನಾಯಿ ದಾಳಿಗೆ ಒಳಗಾದ ಬಾಲಕ.

ಶಾಲೆಗೆ ಹೋಗಲು ರೆಡಿಯಾಗಿ ಮನೆಯಿಂದ ಹೊರ ಬಂದಿದ್ದ ಬಾಲಾಜಿ ನಾಯ್ಕ್ ಮೇಲೆ ಏಕಾಏಕಿ ನಾಲ್ಕಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿದೆ. ಬಾಲಾಜಿ ಕಿರುಚಾಡುವುದನ್ನು ನೋಡಿ ಜನರು ಓಡಿ ಬಂದಿದ್ದಾರೆ. ಬಳಿಕ ನಾಯಿಗಳನ್ನು ಓಡಿಸಿದ್ದಾರೆ. ಬಾಲಾಜಿ ನಾಯ್ಕ್ ಬೆನ್ನು ಹಾಗೂ ಕಾಲಿಗೆ ನಾಯಿಗಳು ಕಚ್ಚಿ ಗಂಭೀರ ಗಾಯಗೊಳಿಸಿದೆ.

ಗಾಯಾಳನ್ನು ಕೂಡಲೇ ತಾಲೂಕಾಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಿದ್ದಾರೆ. ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಕೂಡಲೇ ನಿಯಂತ್ರಣ ‌ಮಾಡುವಂತೆ ಗ್ರಾಮಪಂಚಾಯತಿ ಅಧಿಕಾರಿಗೆ ಈ ಹಿಂದೆಯೇ ಗ್ರಾಮಸ್ಥರು ಮನವಿ ಮಾಡಿದ್ದರು. ಗ್ರಾಮ‌ಪಂಚಾಯತಿ ಅಧಿಕಾರಿಗಳ‌ ನಿರ್ಲಕ್ಷ್ಯದಿಂದ ಈ ರೀತಿ ಘಟನೆ ನಡೆದಿದೆ ಎಂದು ಕಿಡಿಕಾರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version