ಬೆಂಗಳೂರು: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಆರೋಗ್ಯ ಸಿಬ್ಬಂದಿಗಳಿಗಾಗಿ ಡೇ ಕೇರ್ ಸೆಂಟರ್ (Day Care Centre) ನಿರ್ಮಾಣ ಮಾಡಿದೆ. ನಗರದ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದ ಅಧಿಕಾರಿ ಮತ್ತು ಸಿಬ್ಬಂದಿಯ ಮಕ್ಕಳ ಲಾಲನೆ, ಪಾಲನೆಗೆ ಡೇ ಕೇರ್ ಸೆಂಟರ್ ನಿರ್ಮಾಣ ಮಾಡಿದ್ದಾರೆ.
ವಿನೂತನ ಶೈಲಿಯ ನೆಲದ ಹಾಸಿಗೆ, ರಬ್ಬರ್ ಮ್ಯಾಟ್, ಡೈನಿಂಗ್ ಟೇಬಲ್, ಜಾರು ಬಂಡಿ, ಬಾಸ್ಕೆಟ್ ಬಾಲ್ ಹಾಗೂ ಅಂಬೆಗಾಲಿಡುವ ಮಕ್ಕಳಿಂದ ಪ್ರಾಥಮಿಕ ಶಾಲೆ ಪ್ರವೇಶಿಸುವ ವಿದ್ಯಾರ್ಥಿ ಹಂತದವರೆಗೆ ಆಟಿಕೆ ವಸ್ತುಗಳ ಜತೆಗೆ ಉಪಚಾರಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಉಚಿತ ಡೇ ಕೇರ್ ಸೆಂಟರ್
ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿ ಡೇ ಕೇರ್ ಸೆಂಟರ್ ಮಾಡಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆಲ್ಲ ಮಕ್ಕಳನ್ನು ಖಾಸಗಿ ಡೇ ಕೇರ್ ಸೆಂಟರ್‌ನಲ್ಲಿ ಬಿಟ್ಟು ಬರುತ್ತಿದ್ದೀವಿ. ಆಗ ಮನಸ್ಸೆಲ್ಲ ಮಕ್ಕಳ ಮೇಲೆ ಇರುತ್ತಿತ್ತು, ಆತಂಕವೂ ಇರುತ್ತಿತ್ತು. ಅಲ್ಲದೆ ಒಂದು ತಿಂಗಳಿಗೆ 5 ಸಾವಿರ ರೂ. ವ್ಯಯಿಸಬೇಕಿತ್ತು. ಆದರೆ, ಆರೋಗ್ಯ ಇಲಾಖೆ ಹಾಗೂ ಸರ್ಕಾರ ನಮಗೆ ಉಚಿತವಾಗಿ ಡೇ ಕೇರ್ ಮಾಡಿ ಕೊಟ್ಟಿದ್ದಾರೆ. ನಮ್ಮ ಮಕ್ಕಳು ತಂದೆ-ತಾಯಿ ಜತೆ ಬೆರೆಯಲು, ಬೆಳೆಯಲು ಅನುವಾಗಲಿದೆ ಎಂದು ಆರೋಗ್ಯ ಸಿಬ್ಬಂದಿ ಸುಜಾತ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಈ ಹೊಸ ಪ್ರಯೋಗಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಲಾಲನೆ, ಪಾಲನೆಗೆ ಸೂಕ್ತ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಇಂತಹ ಕೇಂದ್ರಗಳು ಅಗತ್ಯವಾಗಿವೆ. ಉದ್ಯೋಗದಲ್ಲಿರುವ ದಂಪತಿಗೆ, ಅದರಲ್ಲೂ ನಿರ್ದಿಷ್ಟವಾಗಿ ಹತ್ತು ವರ್ಷ ವಯೋಮಿತಿಯೊಳಗಿನ ಮಕ್ಕಳನ್ನು ಹೊಂದಿರುವ ಪಾಲಕರಿಗೆ ಈ ವ್ಯವಸ್ಥೆ ಅನುಕೂಲವಾಗಿದೆ.
ಇದನ್ನೂ ಓದಿ | Kangaroo care | ಅವಧಿಪೂರ್ವದಲ್ಲಿ ಜನಿಸಿದ ಮಗುವಿಗೆ ಬೆಚ್ಚಗಿನ ಅಪ್ಪುಗೆ: ವಿಶ್ವ ಆರೋಗ್ಯ ಸಂಸ್ಥೆ ಸೂಚನೆ