ಬೆಂಗಳೂರು: ನೇರ ನಡೆಯ ಸರಳ-ಸಜ್ಜನ ರಾಜಕಾರಣಿ ಎಂದು ಜನಮನ್ನಣೆ ಗಳಿಸಿದ್ದ ರಾಜ್ಯ ಕಂಡ ಅತ್ಯಂತ ಮುತ್ಸದ್ದಿ ರಾಜಕಾರಣಿಗಳಲ್ಲಿ ಒಬ್ಬರು ಡಿ.ಬಿ ಚಂದ್ರೇಗೌಡ (DB Chandregowda) ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah), ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ (BS Yediyurappa), ಬಸವರಾಜ ಬೊಮ್ಮಾಯಿ (Basavaraj Bommai), ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸೇರಿದಂತೆ ಹಲವಾರು ರಾಜಕೀಯ ನಾಯಕರು ಕಂಬಿನಿ ಮಿಡಿದಿದ್ದಾರೆ.
ಸಿಎಂ ಸಿದ್ದರಾಮಯ್ಯ ಕಂಬನಿ
ಚಂದ್ರೇಗೌಡ ರಾಜ್ಯದ ಹಿರಿಯ ರಾಜಕಾರಣಿ. ರಾಜ್ಯದಲ್ಲಿ ದೀರ್ಘಕಾಲ ರಾಜಕಾರಣ ಮಾಡಿದರೂ ಕಾಂಗ್ರೆಸ್‌ನಲ್ಲಿ ಇದ್ದರೂ, ಇಂದಿರಾ ಗಾಂಧಿ ಜತೆಗೆ ರಾಜಕೀಯ ಮಾಡಿದ್ದಾರೆ. ನಂತರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರೂ ವಿವಿಧ ಹಂತದಲ್ಲಿ ರಾಜಕೀಯ ಮಾಡಿದ್ದಾರೆ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಎಂದು ಸಿಎಂ ಸಿದ್ದರಾಮಯ್ಯ ಪ್ರಾರ್ಥಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಸಂತಾಪ
ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ. ಚಂದ್ರೇಗೌಡ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಖವಾಗಿದೆ. ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದ ಚಂದ್ರೇಗೌಡರು ನನ್ನ ನೆರೆ ಮನೆಯಲ್ಲಿಯೇ ಇದ್ದು ನನಗೆ ಅತ್ಯಂತ ಆತ್ಮೀಯರಾಗಿದ್ದರು.
ಕಳೆದ ತಿಂಗಳು ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದೆ, ಈಗ ಅವರು ನಮ್ಮನ್ನು ಅಗಲಿರುವುದು ಮನೆಯ ಹಿರಿಯರೊಬ್ಬರನ್ನು ಕಳೆದುಕೊಂಡಂತೆ ಆಗುತ್ತಿದೆ. ಚಂದ್ರೇಗೌಡರ ಅಗಲಿಕೆಯಿಂದ ರಾಜ್ಯ ಒಬ್ಬ ಪ್ರಾಮಾಣಿಕ ಹಿರಿಯ ನಾಯಕನನ್ನು ಕಳೆದುಕೊಂಡಂತಾಗಿದೆ.
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅವರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಂಬನಿ ಮಿಡಿದಿದ್ದಾರೆ.
ದುಃಖ ವ್ಯಕ್ತಪಡಿಸಿದ ಬಸವರಾಜ ಬೊಮ್ಮಾಯಿ
“ಕರ್ನಾಟಕದ ಶ್ರೇಷ್ಠ ಸಂಸದೀಯಪಟುಗಳಲ್ಲಿ ಒಬ್ಬರು, ಹಿರಿಯ ರಾಜಕಾರಣಿ, ಮಾಜಿ ಸಚಿವರು ಹಾಗೂ ಜನತಾ ಪರಿವಾರದ ಕೊಂಡಿ ಆಗಿದ್ದ ಶ್ರೀ ಡಿ.ಬಿ.ಚಂದ್ರೇಗೌಡರು ನಿಧನರಾದ ಸುದ್ದಿ ತಿಳಿದು ಬಹಳ ದುಃಖವಾಯಿತು.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದುಃಖತಪ್ತ ಕುಟುಂಬಕ್ಕೆ ಅವರ ಅಗಲಿಕೆ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.
ಸೋಮವಾರ ರಾತ್ರಿ ನಿಧನ
ಡಿ.ಬಿ ಚಂದ್ರೇಗೌಡ ಅವರು ಸೋಮವಾರ ರಾತ್ರಿ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 87 ವರ್ಷ ಆಗಿತ್ತು. ಅವರ ಅಂತ್ಯಕ್ರಿಯೆ ನವೆಂಬರ್ 8ರಂದು ಮಧ್ಯಾಹ್ನ ದಾರದಹಳ್ಳಿ ಪೂರ್ಣಚಂದ್ರ ಎಸ್ಟೇಟ್‌ನಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಡಿ.ಬಿ. ಚಂದ್ರೇಗೌಡರ ರಾಜಕೀಯ ಬದುಕಿನ ಹಾದಿ
- 1971: ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು.
- 1977: ಮತ್ತೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡನೇ ಜಯ.
- 1978: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿರಾ ಗಾಂಧಿಯವರಿಗೆ ಅವಕಾಶ.
- 1978-1983: ಎಂಎಲ್‌ಸಿಯಾಗಿ ಆಯ್ಕೆ. ಬಳಿಕ ದೇವರಾಜ್ ಅರಸ್ ಅವರ ಕ್ರಾಂತಿರಂಗಕ್ಕೆ ಸೇರ್ಪಡೆ.
- 1983: ತೀರ್ಥಹಳ್ಳಿ ಕ್ಷೇತ್ರದಿಂದ ಶಾಸಕರಾಗಿ ಜನತಾ ಪಕ್ಷದಿಂದ ಆಯ್ಕೆ.
- 1983- 1985ರವರೆಗೆ ವಿಧಾನಸಭೆಯಲ್ಲಿ ಸ್ಪೀಕರ್.
- 1986: ಜನತಾದಳದಿಂದ ರಾಜ್ಯಸಭೆಗೆ ಆಯ್ಕೆ.
- 1989: ಮತ್ತೆ ತೀರ್ಥಹಳ್ಳಿಯಿಂದ ಸ್ಪರ್ಧಿಸಿ ಜನತಾ ದಳದಿಂದ ಗೆಲುವು.
- 1999: ಕಾಂಗ್ರೆಸ್ ಅಭ್ಯರ್ಥಿಯಾಗಿ ಶೃಂಗೇರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
- 2008: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ
- 2009: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ