ಬೆಂಗಳೂರು: ರಾಜ್ಯ ಕಂಡ ಅತ್ಯಂತ ಮುತ್ಸದ್ದಿ ರಾಜಕಾರಣಿಗಳಲ್ಲಿ ಒಬ್ಬರು ಡಿ.ಬಿ ಚಂದ್ರೇಗೌಡ (DB Chandregowda). ಸಂಸದರಾಗಿ, ಶಾಸಕರಾಗಿ, ಎಂಎಲ್‌ಸಿಯಾಗಿ, ಪ್ರಭಾವಿ ಸಚಿವರಾಗಿ ನೇರ ನಡೆಯ ರಾಜಕೀಯವನ್ನು ನಡೆಸಿ ಜನಪ್ರೀತಿಯನ್ನು ಸಂಪಾದಿಸಿದವರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ (Former PM Indiara Gandhi) ಅವರು ರಾಜಕೀಯ ಸಂಕಷ್ಟದಲ್ಲಿ ಸಿಲುಕಿದಾಗ ತಾನು ಗೆದ್ದ ಕ್ಷೇತ್ರವನ್ನು ಮನಸಾರೆ ಉಪಚುನಾವಣೆಗೆ (1978 Chikkamagaluru Byelection) ಒಪ್ಪಿಸಿ ಇಂದಿರಾ ಗೆಲುವಿನ ಜತೆಗೆ ತನ್ನ ಹೆಸರನ್ನು ಚಿರಸ್ಥಾಯಿಯಾಗಿ ಮಾಡಿದವರು. ಅವರು ಸೋಮವಾರ ರಾತ್ರಿ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 87 ವರ್ಷ ಆಗಿತ್ತು. ಅವರ ಅಂತ್ಯಕ್ರಿಯೆ ನವೆಂಬರ್ 8ರಂದು ಮಧ್ಯಾಹ್ನ ದಾರದಹಳ್ಳಿ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ನಡೆಯಲಿದೆ.
1936ರ ಆಗಸ್ಟ್ 26ರಂದು ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿಯಲ್ಲಿ ಬೈರೇಗೌಡ ಮತ್ತು ಪುಟ್ಟಮ್ಮ ದಂಪತಿಗಳ ಮಗನಾಗಿ ಜನಿಸಿದ ಡಿ.ಬಿ.ಚಂದ್ರೇಗೌಡರು ಉತ್ತಮ ರಾಜಕಾರಣಿ ಮಾತ್ರವಲ್ಲ, ರಾಜಕೀಯ ಪ್ರಬುದ್ಧರು, ಉತ್ತಮ ಸಂಸದೀಯ ಪಟುಗಳೂ ಹೌದು.
ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಬಿ.ಎಸ್ಸಿ ಶಿಕ್ಷಣ ವ್ಯಾಸಂಗ ಮಾಡುವಾಗ ಹಾಗು ಬೆಳಗಾವಿಯಲ್ಲಿ ಎಲ್.ಎಲ್.ಬಿ. ವ್ಯಾಸಂಗ ಮಾಡುವಾಗಲೇ ವಿದ್ಯಾರ್ಥಿಗಳ ನಾಯಕರಾಗಿ ಹೊರ ಹೊಮ್ಮಿದ್ದ ಚಂದ್ರೇಗೌಡರು, ರೇಣುಕಾಚಾರ್ಯ ಕಾಲೇಜ್ ಸ್ಟುಡೆಂಟ್ಸ್ ಅಸೋಸಿಯೇಷನ್”ನಲ್ಲಿ ಉಪ ನಾಯಕರಾಗಿ, ಬೆಳಗಾವಿಯ ಆರ್.ಎಲ್. ಲಾ ಕಾಲೇಜಿನಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಅಂದು ವಿದ್ಯಾರ್ಥಿಗಳ ನಾಯಕರಾಗಿದ್ದ ಇವರು ಮುಂದೆ ಅಗ್ರಗಣ್ಯ ನಾಯಕರಾಗಿ ಬೆಳೆದರು.
ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್, ಮೂರು ಅವಧಿಗೆ ಶಾಸಕ, ಒಂದು-ಅವಧಿಯ ವಿಧಾನಪರಿಷತ್ ಮತ್ತು 3 ಬಾರಿ ಸಂಸತ್ ಸದಸ್ಯರಾಗಿದ್ದರು. ಅವರು ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮತ್ತು ಕರ್ನಾಟಕ ಸರ್ಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದ್ದರು. ಪ್ರಜಾ ಸಮಾಜವಾದಿ ಪಕ್ಷ, ಜನತಾ ದಳ, ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ ಹೀಗೆ ಎಲ್ಲ ಪಕ್ಷಗಳಲ್ಲೂ ದುಡಿದ ಅನುಭವ ಅವರಿಗಿದೆ.
ಪ್ರಜಾಸೋಷಲಿಸ್ಟ್ ಪಾರ್ಟಿಯಿಂದ ರಾಜಕೀಯ ಆರಂಭ
ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಸೇರುವ ಮೂಲಕ ರಾಜಕೀಯ ರಂಗವನ್ನು ಪ್ರವೇಶ ಮಾಡುತ್ತಾರೆ. ಬಹಳ ಶಿಸ್ತಿನಿಂದ ರಾಜಕೀಯ ಅನುಭವವನ್ನು ಪಡೆದ ಇವರು 1971ರಲ್ಲಿ 5ನೇ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಪುನಃ 6ನೇ ಲೋಕಸಭೆ ಚುನಾವಣೆಯಲ್ಲಿ ಅದೇ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮರು ಆಯ್ಕೆಯಾದರು.
ಆದರೆ, ದೇಶದ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನಿಂದ ಉಪಚುನಾವಣೆ ಎದುರಿಸುವ ಪ್ರಸ್ತಾಪ ಬಂದಾಗ ಹಿಂದೆ ಮುಂದೆ ನೋಡದೆ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಪ್ರಬುದ್ಧತೆ ಮೆರೆದರು. ಈ ಕಾರಣಕ್ಕಾಗಿಯೂ ಚಂದ್ರೇಗೌಡರ ರಾಜಕೀಯ ಜೀವನ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.
1978ರಿಂದ 1983 ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಇವರು 1979ರಿಂದ 1980ರವರೆಗೆ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿ ಅತ್ಯುನ್ನತ ಆಡಳಿತವನ್ನು ನೀಡಿ, 1980ರಿಂದ 1981ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಕಾಂಗ್ರೆಸ್‌ನಿಂದ ದೂರ, ಮರಳಿ ಮನೆಗೆ
ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ದೂರ ಉಳಿದಿದ್ದ ಇವರು “ಕರ್ನಾಟಕ ಕ್ರಾಂತಿರಂಗ ಪಕ್ಷ”ವನ್ನು ಸೇರಿ ಕೆಲವು ದಿನಗಳ ನಂತರ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹಿಂತಿರುಗುತ್ತಾರೆ. ಮುಂದೆ, ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಯೂ ಪಕ್ಷವನ್ನು ಸಂಘಟಿಸಿರುತ್ತಾರೆ.
ವಿಧಾನಸಭೆ ಶಾಸಕರಾಗಿ ಆಯ್ಕೆಯಾದರು
1983ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. 1985ರವರೆಗೆ ವಿಧಾನಸಭೆ ಸ್ಪೀಕರ್ ಸ್ಥಾನವನ್ನು ಅಲಂಕರಿಸಿದ್ದರು. ಒಟ್ಟಾರೆ ಮೂರು ಬಾರಿ ಶಾಸಕರಾಗಿ, ಕಾನೂನು ಮಂತ್ರಿಗಳಾಗಿಯೂ ಉತ್ತಮ ಸೇವೆಯನ್ನು ಸಲ್ಲಿಸಿರುವ ಇವರು ಸೇವೆಯಲ್ಲಿ ತಮ್ಮದೇ ಆದ ಹೆಗ್ಗುರುತುಗಳನ್ನು ಮೂಡಿಸಿದ್ದಾರೆ. 1986ರಲ್ಲಿ ರಾಜ್ಯಸಭೆ ಸದಸ್ಯರಾಗಿಯೂ ಆಯ್ಕೆಯಾದರು.
ಬಿಜೆಪಿ ಸೇರಿ ಅಲ್ಲಿಯೂ ಗೆಲುವು ಕಂಡರು
2008ರಲ್ಲಿ ಬಿಜೆಪಿ ಸೇರಿದ ನಂತರ 2009 ರಲ್ಲಿ ಎದುರಾದ 15ನೇ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಮೂಲಕ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಮುಂದೆ ಅವರು ಸ್ಪರ್ಧಾತ್ಮಕ ರಾಜಕೀಯದಿಂದ ದೂರವೇ ಉಳಿದಿದ್ದಾರೆ. ರಾಜಕೀಯ ಜೀವನದ ನಡುವೆ ಕನ್ನಡ ಚಿತ್ರರಂಗದಲ್ಲಿಯು ಗುರುತಿಸಿಕೊಂಡಿರುವ ಇವರು “ನನ್ನ ಗೋಪಾಲ” ಎಂಬ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವು ಚಿತ್ರಗಳನ್ನು ನಿರ್ಮಿಸಿದ ಕೀರ್ತಿಯೂ ಅವರಿಗಿದೆ.
ಇದನ್ನೂ ಓದಿ: DB Chandregowda: ಹಿರಿಯ ರಾಜಕಾರಣಿ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ಇನ್ನಿಲ್ಲ
ಡಿ.ಬಿ. ಚಂದ್ರೇಗೌಡರ ರಾಜಕೀಯ ಬದುಕಿನ ಹಾದಿ
- 1971: ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು.
- 1977: ಮತ್ತೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡನೇ ಜಯ.
- 1978: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿರಾ ಗಾಂಧಿಯವರಿಗೆ ಅವಕಾಶ.
- 1978-1983: ಎಂಎಲ್‌ಸಿಯಾಗಿ ಆಯ್ಕೆ. ಬಳಿಕ ದೇವರಾಜ್ ಅರಸ್ ಅವರ ಕ್ರಾಂತಿರಂಗಕ್ಕೆ ಸೇರ್ಪಡೆ.
- 1983: ತೀರ್ಥಹಳ್ಳಿ ಕ್ಷೇತ್ರದಿಂದ ಶಾಸಕರಾಗಿ ಜನತಾ ಪಕ್ಷದಿಂದ ಆಯ್ಕೆ.
- 1983- 1985ರವರೆಗೆ ವಿಧಾನಸಭೆಯಲ್ಲಿ ಸ್ಪೀಕರ್.
- 1986: ಜನತಾದಳದಿಂದ ರಾಜ್ಯಸಭೆಗೆ ಆಯ್ಕೆ.
- 1989: ಮತ್ತೆ ತೀರ್ಥಹಳ್ಳಿಯಿಂದ ಸ್ಪರ್ಧಿಸಿ ಜನತಾ ದಳದಿಂದ ಗೆಲುವು.
- 1999: ಕಾಂಗ್ರೆಸ್ ಅಭ್ಯರ್ಥಿಯಾಗಿ ಶೃಂಗೇರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
- 2008: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ
- 2009: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ