ಕಾರವಾರ: ಹೊಸದಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಆರಂಭದಲ್ಲೇ ಆಘಾತವಾಗಿದೆ! ಬುಧವಾರ ಅವರು ಅಂಕೋಲಾದ ರಾಮನಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದಾಗ ಅಲ್ಲಿ ವೈದ್ಯರೇ ಇರಲಿಲ್ಲ, ಅರೆವೈದ್ಯಕೀಯ ಸಿಬ್ಬಂದಿಯೂ ಇಲ್ಲ. ಇದ್ದಿದ್ದು ಕೇವಲ ಡಿ ಗ್ರೂಪ್ ನೌಕರರು ಮಾತ್ರ! ಅದೂ ಹಾಡಹಗಲೇ, ಎಲ್ಲರೂ ಡ್ಯೂಟಿಯಲ್ಲಿರಬೇಕಾಗಿದ್ದ ಸಮಯದಲ್ಲೇ ಎಲ್ಲರೂ ಗೈರುಹಾಜರಾಗಿದ್ದರು.
ಹಾಗಂತ, ಜಿಲ್ಲಾಧಿಕಾರಿಗಳು ಬೇಕು ಅಂತಲೇ ನಡೆಸಿದ ದಾಳಿ ಇದಲ್ಲ. ಕರ್ತವ್ಯದ ನಿಮಿತ್ತ ಯಲ್ಲಾಪುರಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಅಂಕೋಲಾ ಪಿಎಚ್‌ಸಿಗೆ ಭೇಟಿ ನೀಡಿದ್ದರು. ಆಗ ಅಲ್ಲಿನ ನಿಜವಾದ ಪರಿಸ್ಥಿತಿಯ ದರ್ಶನ ಅವರಿಗಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ, ಸಿಬ್ಬಂದಿ ಕರ್ತವ್ಯಲೋಪಕ್ಕೆ ಪ್ರತಿಯಾಗಿ ಅವರು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ಪರಿಸ್ಥಿತಿ ಹೀಗಾದರೆ ಹೇಗೆ? ನಾನು ಭೇಟಿ ನೀಡುವ ವೇಳೆ ಯಾರು ಎಲ್ಲಿದ್ದರು ಎಂಬ ಬಗ್ಗೆ ವರದಿ ಕೊಡಿ ಎಂದು ಜಿಲ್ಲಾಧಿಕಾರಿಗಳು ತಾಲೂಕು ಆರೋಗ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರಿಗೆ ಆರೋಗ್ಯ ಸೇವೆ ಒದಗಿಸಲು ಪಿಹೆಚ್‌ಸಿಗೆ ವೈದ್ಯರನ್ನು ನೇಮಿಸಲಾಗಿದೆ. ಅವರು ಕಾಲ ಕಾಲಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ತಾಲೂಕು ಮಟ್ಟದ ಅಧಿಕಾರಿಯಾಗಿ ನೀವು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಅಧೀನ ವೈದ್ಯರು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳದೇ ಕರ್ತವ್ಯ ಲೋಪ ಎಸಗಿದ್ದಾಗಿ ಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
3 ದಿನದಲ್ಲಿ ಜಿಲ್ಲಾಧಿಕಾರಿ ಎದುರು ಹಾಜರಾಗಿ ಲಿಖಿತ ಕಾರಣ ನೀಡಬೇಕು, ಇಲ್ಲವಾದಲ್ಲಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಅಂಕೋಲಾ ಟಿಹೆಚ್‌ಓಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.