ಬೆಂಗಳೂರು: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕೆಲವೇ ಕ್ಷೇತ್ರಗಳಿಗೆ ಸಾಲ ನೀಡುತ್ತಿರುವುದು, ಸ್ವಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲ ನೀಡದಿರುವುದು, ತುಮಕೂರು ಜಿಲ್ಲೆಯಲ್ಲಿ ಸಾಲ ನವೀಕರಣಕ್ಕೆ ಹಣ ವಸೂಲಿ ಬಗ್ಗೆ ತನಿಖೆ ಮಾಡಿ ವರದಿ ನೀಡಲು ಅಧಿಕಾರಿಯನ್ನು ನೇಮಿಸಿದ್ದು, ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ನಗರದಲ್ಲಿ ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತನಿಖೆಗೆ ಅಡಿಷನಲ್ ರಿಜಿಸ್ಟ್ರಾರ್ ರವೀಂದ್ರ ಎಂಬ ಅಧಿಕಾರಿ ನೇಮಕ ಮಾಡಿದ್ದು, ತನಿಖೆ ಮಾಡಿ 15 ದಿನಗಳಲ್ಲಿ ವರದಿ ಕೊಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | ಸಚಿವ ಮಾಧುಸ್ವಾಮಿ ಹೇಳಿಕೆ ವೈರಲ್: ಸಚಿವ ಸೋಮಶೇಖರ್ ಫುಲ್ ಗರಂ
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಕೇವಲ ನಾಲ್ಕು ಕ್ಷೇತ್ರಗಳಿಗೆ ಮಾತ್ರ ಸಾಲ ಕೊಡಲಾಗುತ್ತಿದೆ ಎಂದು ಸಂಸದರು, ಮಾಜಿ ಶಾಸಕರು ದೂರು ನೀಡಿದ್ದಾರೆ. ತನಿಖೆ ಬಳಿಕ ನಾಲ್ಕು ಕ್ಷೇತ್ರಗಳಾವುವು ಎಂದು ಗೊತ್ತಾಗುತ್ತದೆ. ತುಮಕೂರು ಜಿಲ್ಲೆಯಲ್ಲಿ ರಾಜಣ್ಣ ಅವರ ಕ್ಷೇತ್ರಕ್ಕೆ 100 ಕೋಟಿ ಸಾಲ ಕೊಡಲಾಗಿದೆ. ಸೊಸೈಟಿಗಳಲ್ಲಿ ಸಾಲ ಕೊಡಲು ಷೇರು ಹಣದಲ್ಲಿ ಶೇ.10 ಡಿವಿಡೆಂಟ್ ಅನ್ನು ಸಿಬ್ಬಂದಿ ತೆಗದುಕೊಳ್ಳುತ್ತಿರುವ ಬಗ್ಗೆ ಆರೋಪಗಳು ಬಂದಿವೆ. ಈ ಬಗ್ಗೆ ತನಿಖೆ ನಂತರ ಎಲ್ಲ ತಿಳಿಯಲಿದೆ ಎಂದು ಹೇಳಿದರು.
ಕೃಷಿ ಸಾಲದ ಮೇಲೆ ರೈತರಿಂದ ಅನಧಿಕೃತ ಬಡ್ಡಿ ವಸೂಲಿ ಬಗ್ಗೆ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದೇವೆ. ರೈತರಿಗೆ 24 ಸಾವಿರ ಕೋಟಿ ರೂಪಾಯಿ ಸಾಲ ನೀಡಲು ಗುರಿ ಇದೆ. ಸಿಎಂ 33 ಲಕ್ಷ ರೈತರಿಗೆ ಸಾಲ ಘೋಷಣೆ ಮಾಡಿದ್ದಾರೆ. ಇದರಲ್ಲಿ ಮೂರು ಲಕ್ಷ ಹೊಸ ರೈತರಿಗೆ ಸಾಲ ನೀಡಲಿದ್ದೇವೆ. ಕೋಲಾರದಲ್ಲಿ 623 ಕೋಟಿ ರೂಪಾಯಿ ಸಾಲ, ತುಮಕೂರಿನಲ್ಲಿ 692 ಕೋಟಿ ರೂಪಾಯಿ ಸಾಲ ಕೊಡುವ ಗುರಿ ಇದೆ. ಸಾಲ ನವೀಕರಣಕ್ಕೆ 1300 ರೂಪಾಯಿ ಬಡ್ಡಿ ಪಡೆಯುವ ಬಗ್ಗೆ ಇಲಾಖೆಯಿಂದ ಸೂಚನೆ ಇಲ್ಲ. ಲಿಖಿತ ದೂರು ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಹಗರಣ ಸಂಬಂಧ ಎರಡನೇ ಸಭೆ ನಡೆಸಲಾಗಿದೆ. 84 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ವರದಿ ಬಂದಿದೆ. ಕೆಲವರು ಹಣ ವಾಪಸ್ ಕಟ್ಟುವುದಾಗಿ ಬಂದಿದ್ದಾರೆ. ಆಡಳಿತಾಧಿಕಾರಿ, ಆರ್‌ಬಿಐ ಅಧಿಕಾರಿಗಳು ಸೇರಿ ಸಭೆಯಲ್ಲಿ ಭಾಗಿಯಾಗಿದ್ದರು. ಹಣ ವಾಪಸ್ ಕಟ್ಟಿದವರಿಗೆ 10 ದಿನದಲ್ಲಿ ವಾಪಸ್ ನೀಡಬೇಕು. ಈ ಪ್ರಕರಣದ ಮಾಹಿತಿ ಸಿಐಡಿ, ಇಡಿ ಬಳಿ ಇದೆ. ಇ.ಡಿ.ಗೆ ಹತ್ತು ದಿನದಲ್ಲಿ ದಾಖಲೆ ನೀಡಬೇಕು, ಸರ್ಫೇಜ್ ಆ್ಯಕ್ಟ್‌ನಲ್ಲಿ ವಸೂಲಿ ಮಾಡಲು ತೀರ್ಮಾನ ಮಾಡಲಾಗಿದೆ. ಸೆಪ್ಟೆಂಬರ್ 5ಕ್ಕೆ ಮತ್ತೆ ಸಭೆ ಸೇರಲು ನಿರ್ಧಾರ ಮಾಡಿದ್ದೇವೆ. ವಸಿಷ್ಠ ಬ್ಯಾಂಕ್ ಹಗರಣದ ಬಗ್ಗೆಯೂ ಚರ್ಚೆಯಾಗಿದೆ ಎಂದರು.
ಇದನ್ನೂ ಓದಿ | ಸಿಎಂ ಕೇಳಿದ್ರೆ ರಾಜೀನಾಮೆ: ಸಹೋದ್ಯೋಗಿಗಳು ಎನ್ನೋದಕ್ಕೆ ಗೌರವ ಉಳಿದಿಲ್ಲ ಎಂದ ಮಾಧುಸ್ವಾಮಿ