ಹೊಸದಿಲ್ಲಿ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ವಿರುದ್ಧದ ಆದಾಯ ಮೀರಿ ಅಧಿಕ ಆಸ್ತಿ ಗಳಿಕೆ ಪ್ರಕರಣದ ಮೇಲ್ಮನವಿ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ (High court) ಇಂದು ನಡೆಯಲಿದೆ. ಪ್ರಕರಣದಲ್ಲಿ ಸಿಬಿಐ ವಿಚಾರಣೆ (CBI enquiry) ನಡೆಸಬೇಕೇ ಬೇಡವೇ ಎಂಬುದು ಇಂದು ತೀರ್ಮಾನವಾಗಲಿದ್ದು, ಡಿಸಿಎಂಗೆ ಇಂದು ಮಹತ್ವದ ದಿನವಾಗಿದೆ.
ಸಿಬಿಐ ತನಿಖೆಗೆ ಆದೇಶಿಸಿದ್ದ ಹಿಂದಿನ ಸರ್ಕಾರದ ಆದೇಶ ರದ್ದು ಕೋರಿ ಡಿಕೆ ಶಿವಕುಮಾರ್ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿತ್ತು. ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಡಿಕೆಶಿ ಮೇಲ್ಮನವಿ ಸಲ್ಲಿಸಿದ್ದರು. ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ಮಧ್ಯಂತರ ತಡೆ ನೀಡತ್ತು.
ಇದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಎರಡು ವಾರಗಳಲ್ಲಿ ಮೇಲ್ಮನವಿ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್ (supreme court) ನಿರ್ದೇಶನ ನೀಡಿತ್ತು. ಡಿಕೆಶಿ ಸಲ್ಲಿಸಿದ್ದ ಮೇಲ್ಮನವಿಯನ್ನು ಇಂದು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ.
ಇದೇ ವೇಳೆ ಸಿಬಿಐ ತನಿಖೆಗೆ ಆದೇಶಿಸಿದ್ದ ಹಿಂದಿನ ಸರ್ಕಾರದ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಹಿಂದಿನ ಸರ್ಕಾರದ ನಿರ್ಧಾರ ಕಾನೂನು ಬಾಹಿರ ಎಂದು ಕ್ಯಾಬಿನೆಟ್ ನಿರ್ಣಯ ಮಾಡಿದ್ದು, ಸರ್ಕಾರದ ನಿರ್ಧಾರದ ಬಗ್ಗೆ ಹೈಕೋರ್ಟ್ ಗಮನಕ್ಕೆ ತರುವ ಸಾಧ್ಯತೆ ಇದೆ. ಡಿಕೆಶಿ ಪರ ವಕೀಲರು ಅಥವಾ ಸರ್ಕಾರದ ಪರ ವಕೀಲರು ಹೈಕೋರ್ಟ್ ಗಮನಕ್ಕೆ ಇದನ್ನು ತರುವ ಸಾಧ್ಯತೆ ಇದೆ.
ಆದರೆ ಸರ್ಕಾರದ ಈ ಕ್ರಮ ಪ್ರಶ್ನಿಸಿ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ʼಹೈಕೋರ್ಟ್ ವಿಚಾರಣೆಯನ್ನ ನಿಷ್ಪಲಗೊಳಿಸಲು ಸರ್ಕಾರ ಯತ್ನಿಸುತ್ತಿದೆ. ಸಿಬಿಐ ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಈ ಹಂತದಲ್ಲಿ ಸರ್ಕಾರದ ಕ್ರಮ ಕಾನೂನುಬಾಹಿರ. ಸಿಬಿಐ ತನಿಖೆಯನ್ನು ಮೊಟಕುಗೊಳಿಸುವ ಉದ್ದೇಶ ಹೊಂದಿದೆʼ ಎಂದು ಮಧ್ಯಂತರ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಹೀಗಾಗಿ ಇಂದು ಎಲ್ಲರ ಚಿತ್ತ ಹೈಕೋರ್ಟ್‌ನತ್ತ ಹರಿದಿದ್ದು, ಇಂದಿನ ಕೋರ್ಟ್ ನಿರ್ಧಾರ ಅನುಸರಿಸಿ ಸರ್ಕಾರದ ಹಾಗೂ ಬಿಜೆಪಿಯ ಮುಂದಿನ ನಡೆಗಳು ನಿರ್ಧಾರವಾಗಲಿವೆ. ಸರ್ಕಾರದ ಕ್ರಮವನ್ನು ತಳ್ಳಿಹಾಕಿ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿದರೆ ಶಾಸಕಾಗ- ನ್ಯಾಯಾಂಗ ತಿಕ್ಕಾಟಕ್ಕೂ ಇದು ಕಾರಣವಾಗಲಿದೆ.
ಇದನ್ನೂ ಓದಿ: DK Shivakumar : ನಮ್ಮ ಜಾಹೀರಾತಲ್ಲಿ ಮತಯಾಚನೆ ಮಾಡಿಲ್ಲ; ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ: ಡಿಕೆಶಿ