ಬೆಂಗಳೂರು: ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ (Congress Guarantee) ಅನೇಕ ಕಂಡೀಷನ್‌ಗಳನ್ನು ವಿಧಿಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದುವ ಡಿಸಿಎಂ ಡಿ.ಕೆ. ಶಿವಕುಮಾರ್, ಇದು ಸರ್ಕಾರ, ಸರ್ಕಾರ ನಡೆಸೋದು ನಾವು ಎಂದು ಉತ್ತರಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಒಬ್ಬರಿಗೆ ಒಂದು ರೂಪಾಯಿ ಕೊಡಬೇಕಾದ್ರೆ ಅಕೌಂಟ್ ಇರಬೇಕು. ಯಾರು ಓಟರ್ ಲಿಸ್ಟ್‌ನಲ್ಲಿ ಹೆಸರನ್ನು ಸೇರಿಸಿದ್ದಾರೆ, ಯಾರು ಆಧಾರ್ ಕಾರ್ಡ್ ಇಟ್ಟುಕೊಂಡಿದ್ದಾರೆ, ಎಲ್ಲವೂ ನೋಡಬೇಕು. ಅವರಿಗೆ ಬ್ಯಾಂಕ್ ಅಕೌಂಟ್ ಇರಬೇಕು, ಬೇರೆ ಅವರ ಅಕೌಂಟ್ ಕೊಡೋಕೆ ಆಗಲ್ಲ.
ಯಜಮಾನಿ ಯಾರು ಅಂತ ಅವರೇ ತೀರ್ಮಾನ ಮಾಡಬೇಕು. ನಮ್ಮ ಬಳಿಯೂ ಎಲ್ಲಾ ದಾಖಲೆಗಳು ಇವೆ. ಅವುಗಳೊಂದಿಗೆ ತಾಳೆ ಆಗಬೇಕು. ಮನೆ ಸಂಸಾರ ಯಾರು ನಡೆಸುತ್ತಾರೆ ಅಂತ ಅವರೇ ಹೇಳಬೇಕು. ಅವರ ಮನೆ ವಿಚಾರದಲ್ಲಿ ನಾವು ಮಧ್ಯ ಪ್ರವೇಶ ಮಾಡೊಲ್ಲ. ಒಂದು ಮನೆಯಲ್ಲಿ ಒಬ್ಬ ಮಹಿಳೆಗೆ ಸೌಲಭ್ಯ ನೀಡುತ್ತೇವೆ. BPL, APL, ಅಂತ್ಯೋದಯ ಕಾರ್ಡ್ ಎಲ್ಲ ಲೆಕ್ಕ ಇದೆ. ಫಸ್ಟ್ ನೇಮ್ ಕೊಡಬೇಕಾ, ಸೆಕೆಂಡ್ ನೇಮ್ ಕೋಡಬೇಕಾ? ಹೆಣ್ಣುಮಕ್ಕಳು ತೀರ್ಮಾನ ಮಾಡಬೇಕು ಎಂದರು.
ಆದಾಯ ತೆರಿಗೆ ಪಾವತಿದಾರರಿಗೆ ಗ್ಯಾರಂಟಿ ಯೋಜನೆ ಇಲ್ಲ ಎಂಬ ಆದೇಶದ ಕುರಿತು ಪ್ರತಿಕ್ರಿಯಿಸಿ, ಬಡವರಿಗೆ ಕೊಡಬೇಕು ಅಂತ ನಾವು ತೀರ್ಮಾನ ಮಾಡಿದ್ದು. ಐಟಿ ಕಟ್ಟೋರು ಯಾರೂ ಗ್ಯಾರಂಟಿ ಕೇಳಿಲ್ಲ. ಯಾರು ಬಂದು ಗ್ಯಾರಂಟಿ ಕೊಡಿ ಅಂತ ಕೇಳೋದಿಲ್ಲ. ಬಹಳ ಜನ ನಮಗೆ 2 ಸಾವಿರ ಬೇಡ ಪತ್ರ ಬರೆದಿದ್ದಾರೆ. ಯಾರು ಪತ್ರ ಬರೆದಿದ್ದಾರೆ ಅಂತ ನಾನು ಹೇಳೋಕೆ ಅಗೊಲ್ಲ ಎಂದರು.
ಗ್ಯಾರಂಟಿ ಘೋಷಣೆ ಮಾಡೋವಾಗ ಕಂಡಿಷನ್ ಇರಲಿಲ್ಲ, ಈಗ ಷರತ್ತುಗಳು ಯಾಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ಸರ್ಕಾರ, ಸರ್ಕಾರ ನಡೆಸೋದು ನಾವು. ನಾವ್ ಏನ್ ಕೊಡಬೇಕು ಅಂತ ನಾವು ಹೇಳಿದ್ದೇವೆ. ಜನ ಕೇಳಿದ್ದಾರೆ. ಬಾಡಿಗೆ ಮನೆ ವಿಚಾರ ಬಂತು ಅದನ್ನ ಕ್ಲಿಯರ್ ಮಾಡಿದ್ದೇವೆ. ಬಾಡಿಗೆ ಮನೆ ಇದ್ದವರಿಗೂ ವಿದ್ಯುತ್ ಕೊಡ್ತೀವಿ. ಐಟಿ ಕಟ್ಟೋರು ಯಾರೂ ನಮಗೆ ಬೇಕು ಅಂತ ಕೇಳಿಲ್ಲ. ಸರ್ಕಾರಿ ನೌಕರರಿಗೆ ಗ್ಯಾರಂಟಿ ಅನ್ವಯ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ನಮಗೆ ಅವೆಲ್ಲ ಗೊತ್ತಿದೆ ಬಿಡಿ ಎಂದು ತಿಳಿಸಿದರು.
ಇದನ್ನೂ ಓದಿ: Congress Guarantee: ವಿದ್ಯುತ್ ಬಳಕೆ ಸರಾಸರಿ ಮೀರಿದರೆ ಎಷ್ಟು ಕಟ್ಟಬೇಕು? ಇಲ್ಲಿದೆ ಸರ್ಕಾರದ ಹೊಸ ನಿಯಮ