Site icon Vistara News

DK Shivakumar: ಸರ್ಕಾರಿ ಅಧಿಕಾರಿಗಳು ಗುಲಾಮರೆಂದ ಮಾಜಿ ಶಾಸಕ; ಕ್ಷಮೆ ಕೇಳಿದ ಡಿ.ಕೆ. ಶಿವಕುಮಾರ್

DCM Dk shivakumar statement in bagilige bantu sarkara sevege irali sahakara programme in channapattana

ಚನ್ನಪಟ್ಟಣ: ಸರ್ಕಾರಿ ಅಧಿಕಾರಿಗಳು ಜನಸೇವೆಗೆ ತಮ್ಮ ಬದುಕು ಮುಡಿಪಿಟ್ಟಿದ್ದಾರೆ. ಅವರನ್ನು ಗುಲಾಮರು ಎಂದ ಮಾಜಿ ಶಾಸಕರ ಹೇಳಿಕೆಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು.

ಚನ್ನಪಟ್ಟಣದ ಬೇವೂರು ಹಾಗೂ ತಿಟ್ಟಮಾರನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಹಾಗೂ ಚನ್ನಪಟ್ಟಣದ ಮಾಜಿ ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಹೇಳದೆ ಪರೋಕ್ಷವಾಗಿ ಹೀಗೆ ತಿಳಿಸಿದರು.

ಸರ್ಕಾರಿ ಕೆಲಸ ದೇವರ ಕೆಲಸ ಎಂದು ಇದೇ ಜಿಲ್ಲೆಯವರಾದ ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ಪ್ರವೇಶದ್ವಾರದ ಮೇಲೆ ಬರೆದಿದ್ದಾರೆ. ಸರ್ಕಾರಿ ಅಧಿಕಾರಿಗಳು ಕೂಡ ಜನಸೇವೆಯೇ ಜನಾರ್ದನ ಸೇವೆ ಎಂದು ಭಾವಿಸಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Essay on Kempegowda in Kannada: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ!

ಮಾಜಿ ಶಾಸಕರು ನಿಮ್ಮನ್ನು ಗುಲಾಮರು ಎಂದು ಕರೆದಿದ್ದು, ನಾನು ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ. ನಾನು ಸಂವಿಧಾನದ ಅಡಿಯಲ್ಲಿ ಸರ್ಕಾರಿ ನೌಕರ. ಜನ ಸಂತೋಷವಾಗಿರಲು ನಾವು ಸರ್ಕಾರದ ಕೆಲಸ ಮಾಡಬೇಕು. ನೊಂದ ಜನರಿಗೆ ಸಹಾಯ ಮಾಡಲು ಸರ್ಕಾರದಿಂದ ವೇತನ ನೀಡಲಾಗುತ್ತಿದೆ. ಕಷ್ಟಗಳಿಗೆ ಪರಿಹಾರ ಕೊಡು ಎಂದು ಕೇಳಲು ಜನ ದೇವಾಲಯಕ್ಕೆ ಹೋಗುತ್ತಾರೆ. ಅದೇ ರೀತಿ ಸರ್ಕಾರಿ ಕಚೇರಿ ಕೂಡ ದೇವಾಲಯ. ಜನರ ಕಷ್ಟಕ್ಕೆ ಸ್ಪಂದಿಸಿ ಪರಿಹಾರ ನೀಡಲು ಸರ್ಕಾರಿ ಕಚೇರಿ ಇದೆ ಎಂದರು.

ಕ್ಷೇತ್ರದ ಎರಡು ಕಡೆ ಈ ಕಾರ್ಯಕ್ರಮವನ್ನು ಮಾಡಿದ್ದು, ಈಗಾಗಲೇ 3 ಸಾವಿರ ಜನ ಅರ್ಜಿ ಸಲ್ಲಿಸಿದ್ದಾರೆ. ವ್ಯಾಪಾರಕ್ಕೆ ಸಾಲ ಸೌಲಭ್ಯ, ನಿವೇಶನ, ಮನೆ, ಸ್ಮಶಾನಕ್ಕೆ ಭೂಮಿ, ಕಾಲುವೆ ದುರಸ್ತಿ, ರಸ್ತೆ ಅಭಿವೃದ್ಧಿ, ವಿವಿಧ ಪಿಂಚಣಿ, ಪೋಡಿ, ಖಾತೆ ಸಮಸ್ಯೆ, ಸರ್ಕಾರಿ ಕಚೇರಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಜನರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಇನ್ನು ಮುಂದೆ ಬಡವರ, ರೈತರ ಕೆಲಸಗಳಿಗೆ ಸರ್ಕಾರಿ ಅಧಿಕಾರಿಗಳು, ನೌಕರರು ಲಂಚ ಕೇಳಿದರೆ ನಮಗೆ ದೂರು ನೀಡಿ. ಇದಕ್ಕಾಗಿ ಸರ್ಕಾರಿ ಕಚೇರಿಯಲ್ಲಿ ಪ್ರತ್ಯೇಕ ದೂರವಾಣಿ ಸಂಖ್ಯೆ ನೀಡಲಾಗುವುದು. ಲಂಚ ಕೇಳುವವರನ್ನು ಬಲಿ ಹಾಕುತ್ತೇವೆ. ಸರ್ಕಾರಿ ಅಧಿಕಾರಿಗಳಿಗೆ ವೇತನ ಇದೆ. ಆದರೆ ರೈತನಿಗೆ ಸಂಬಳ, ಬಡ್ತಿ, ಪಿಂಚಣಿ, ಲಂಚ ಸಿಗುವುದಿಲ್ಲ. ಆದರೂ ಅವರು ಬದುಕಬೇಕು. ಅಧಿಕಾರಿಗಳು ಕೂಡ ಅವರ ಪರಿಸ್ಥಿತಿಯಲ್ಲಿ ನಿಂತು ಆಲೋಚನೆ ಮಾಡಬೇಕು. ಇಲ್ಲಿ ತಮ್ಮ ಸಮಸ್ಯೆ ನಿವಾರಣೆ ಮಾಡಿಕೊಳ್ಳಬೇಕು ಎಂದು ಜನ ಬಂದಿದ್ದಾರೆ. ಈ ಜನರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಅವರ ಕೆಲಸ ಮಾಡಿಕೊಡಬೇಕು ಎಂದು ಸೂಚಿಸಿದರು.

ನೀವು ಯಾವುದೇ ಪಕ್ಷಕ್ಕೆ ಮತ ಹಾಕಿದ್ದರೂ, ಬೆಂಬಲ ನೀಡಿದ್ದರೂ ಮುಜುಗರ ಬೇಡ. ನಮ್ಮ ಬಳಿ ಸಮಸ್ಯೆ ಹೇಳಿಕೊಳ್ಳಿ, ಪರಿಹಾರ ಪಡೆಯಿರಿ. ನೀವು ಇಲ್ಲಿ ಅರ್ಜಿ ಕೊಡಲು ಸಂಕೋಚ ಪಡುವುದಾದರೆ, ಅಂತಹವರು ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ: ECE v/s CSE: ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್; ಯಾವುದು ಉತ್ತಮ ಆಯ್ಕೆ?

ಸರ್ಕಾರದಿಂದ ಅನೇಕ ಸಮುದಾಯಗಳ ನಿಗಮಗಳಿವೆ. ಈ ನಿಗಮಗಳಲ್ಲಿ 1 ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುತ್ತಿದೆ. ಯುವಕರಿಗೆ ಸ್ವಯಂ ಉದ್ಯೋಗ ಮಾಡಲು ಸಬ್ಸಿಡಿ ಸಹಿತ ಸಾಲ ನೀಡಲಾಗುವುದು ಎಂದರು.

ನಿಮ್ಮ ಬದುಕಲ್ಲಿ ಬದಲಾವಣೆ ತರಲು ಬಂದಿದ್ದೇನೆ

ಈ ಕ್ಷೇತ್ರದಲ್ಲಿ ಬಗರ್ ಹುಕುಂ ಸಾಗುವಳಿ ಜಮೀನು, ಆಶ್ರಯ ಮನೆ ಯೋಜನೆ ಕುರಿತು ಸಭೆ ಆಗಿಲ್ಲ. ಈ ಹಿಂದೆ ಇದ್ದ ಶಾಸಕರು ಯಾಕೆ ಸಭೆ ಮಾಡಿಲ್ಲ ಎಂದು ಟೀಕೆ ಮಾಡಲು ಹೋಗುವುದಿಲ್ಲ. ಇಲ್ಲಿನ ಬಡವರಿಗೆ ನಿವೇಶನ, ಮನೆ ನೀಡಲು ಎಲ್ಲೆಲ್ಲಿ ಜಾಗ ಇದೆಯೋ ಅದನ್ನು ಗುರುತಿಸಿ. ಸರ್ಕಾರಿ ಜಮೀನು ಇಲ್ಲವಾದರೆ ನಿಮ್ಮ ನಿಮ್ಮ ಊರುಗಳಲ್ಲೇ 2-3 ಎಕರೆ ಜಾಗವನ್ನೂ ಸರ್ಕಾರದ ವತಿಯಿಂದ ಖರೀದಿ ಮಾಡುವ ಆಲೋಚನೆ ಇದೆ. ಚನ್ನಪಟ್ಟಣದಲ್ಲಿ ಕನಿಷ್ಠ 50 ಎಕರೆ ಜಾಗ ಗುರುತಿಸಿ ಅಲ್ಲಿ ಸರ್ಕಾರದ ವತಿಯಿಂದ ಲೇಔಟ್ ಮಾಡಿ, ನಿವೇಶನ ಹಂಚಿಕೆ ಮಾಡಲಾಗುವುದು. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ನಾನು ಬಂದಿದ್ದೇನೆ ಎಂದು ಡಿಸಿಎಂ ತಿಳಿಸಿದರು.

ನಮ್ಮ ಸರ್ಕಾರ ಪ್ರತಿ ತಿಂಗಳು ಬಡ ಕುಟುಂಬದ ಮಹಿಳೆಗೆ 2 ಸಾವಿರ, ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಅಕ್ಕಿ ಹಾಗೂ ಅಕ್ಕಿಯ ಹಣ ಸೇರಿದಂತೆ ಗ್ಯಾರಂಟಿ ಯೋಜನೆಗಳನ್ನು ನಿಮಗೆ ತಲುಪಿಸುತ್ತಿದೆ. ಈ ಹಿಂದೆ ಇದ್ದವರು ನಿಮಗೆ ಏನು ಸಹಾಯ ಮಾಡಿದರು, ಏನು ಮಾಡಲಿಲ್ಲ ಎಂಬುದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಅವರು ಅವರದೇ ಆದ ಲೆಕ್ಕಾಚಾರದಲ್ಲಿ ನಿಮ್ಮ ಹೃದಯ ಗೆದ್ದಿದ್ದರು. ನಾನು ನಿಮ್ಮ ಹೃದಯ ಗೆಲ್ಲಬೇಕು ಎಂದರೆ ಶ್ರಮ ವಹಿಸಿ ಕೆಲಸ ಮಾಡಬೇಕು. ನಿಮಗೆ ಆರ್ಥಿಕ ಶಕ್ತಿ ತುಂಬಿ, ನಿಮ್ಮ ಕೈ ಬಲಪಡಿಸಬೇಕು. ಈ ಕಾರಣಕ್ಕೆ ನಾನು ಸರ್ಕಾರಿ ಅಧಿಕಾರಿಗಳನ್ನು ನಿಮ್ಮ ಮನೆ ಬಾಗಿಲಿಗೆ ಕರೆತಂದಿದ್ದೇನೆ ಎಂದರು.

ಈ ಕಾರ್ಯಕ್ರಮ ನಮ್ಮ ಜವಾಬ್ದಾರಿ. ಜನರ ಋಣ ತೀರಿಸಲು ಇಲ್ಲಿಗೆ ಬಂದಿದ್ದೇವೆ. ಈ ಭಾಗದ ಜನ ನಿವೇಶನ, ಮನೆ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಡುತ್ತಿದ್ದಾರೆ. ಇಷ್ಟು ದಿನ ಇದ್ದ ಶಾಸಕರು ಇಲ್ಲಿಗೆ ಬಂದು ಮತ ಹಾಕಿಸಿಕೊಂಡು ಹೋಗುತ್ತಿದ್ದರು. ಈ ಕ್ಷೇತ್ರದ ಹಳ್ಳಿಗಳ ಕಡೆ ತಿರುಗಿ ನೋಡುತ್ತಿರಲಿಲ್ಲ. ನಾನು ಬೆಂಗಳೂರು, ರಾಮನಗರ, ಕನಕಪುರದಲ್ಲಿ ಈ ಕಾರ್ಯಕ್ರಮ ಮಾಡಿದ್ದೇನೆ. ಈ ಹಿಂದೆ ಇದ್ದವರಿಗೆ ಈ ಬಗ್ಗೆ ಆಸಕ್ತಿ ಇರಲಿಲ್ಲ, ಹೀಗಾಗಿ ಇಂತಹ ಕಾರ್ಯಕ್ರಮ ಮಾಡಲಿಲ್ಲ. ಇಷ್ಟು ದಿನ ನೀವು ಆಶ್ವಾಸನೆಯಲ್ಲಿ ಬದುಕಿದ್ದೀರಿ. ನಿಮ್ಮ ಕಷ್ಟಗಳಿಗೆ ಆದಷ್ಟು ಬೇಗ ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಈ ಬಾರಿ ಚನ್ನಪಟ್ಟಣದಲ್ಲಿ ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಶಾಸಕ ಆಯ್ಕೆಯಾಗುವ ಆತ್ಮವಿಶ್ವಾಸ ನನಗಿದೆ. ನಿಮಗೆ ನೋವಿದೆ, ಹಸಿದಿದ್ದೀರಿ. ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಶಾಸಕನನ್ನು ಆಯ್ಕೆ ಮಾಡುತ್ತೀರಿ ಎಂಬ ನಂಬಿಕೆ, ವಿಶ್ವಾಸ ಇದೆ ಎಂದರು.

ಈ ಭಾಗದ ಅಭಿವೃದ್ಧಿಗೆ ವಿಶೇಷ ಅನುದಾನ

ಸರ್ಕಾರದಿಂದ 150-200 ಕೋಟಿಯಷ್ಟು ವಿಶೇಷ ಅನುದಾನ ತಂದು ಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲಿ ಆಗಬೇಕಿರುವ ಕೆಲಸ ಮಾಡಲಾಗುವುದು. ನನ್ನ ನೀರಾವರಿ ಇಲಾಖೆಯಿಂದ 540 ಕೋಟಿ ವೆಚ್ಚದಲ್ಲಿ ಸತ್ತೆಗಾಲದಿಂದ 1.5 ಟಿಎಂಸಿ ನೀರು ಪೂರೈಸುವ ಕೆಲಸ ಮಾಡಲಾಗಿದೆ. ಇನ್ನು ಕಳೆದ ವರ್ಷ ಇಲ್ಲಿ ಮಳೆ ಬಂದು ನೀರು ನಿಂತಾಗ ನಾನು ಇಲ್ಲಿಗೆ ಬಂದು ಭೇಟಿ ನೀಡಿದ್ದೆ. ಇಲ್ಲಿ ನೀರು ಬಾರದಂತೆ ಕೋಡಿಹಳ್ಳಕ್ಕೆ ತಡೆಗೋಡೆ ನಿರ್ಮಿಸುವ ಯೋಜನೆಗೆ 1.40 ಕೋಟಿ ರೂ. ಅನುದಾನ ನೀಡಲಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಶಿವಕುಮಾರ್‌ ಹೇಳಿದರು.

ಈ ಭಾಗದಲ್ಲಿ ಸಿ.ಎಸ್. ಆರ್. ನಿಧಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಜಾಗತಿಕ ಮಟ್ಟದ ಶಿಕ್ಷಣ ನೀಡಲು ಮುಂದಾಗಿದ್ದೇವೆ. ಈಗಾಗಲೇ ಟೊಯೊಟಾ ಅವರಿಂದ ಕೆಲವು ಶಾಲೆಗಳ ನಿರ್ಮಾಣ ಕಾರ್ಯ ಆರಂಭವಾಗಿವೆ. ಇನ್ನು ಈ ಭಾಗದ ರೈತರ ಪಂಪ್‌ಸೆಟ್‌ಗಳಿಗೆ ಅನುಕೂಲವಾಗಬೇಕು ಎಂದು ನಾವು ಉಚಿತ ಟಿಸಿ ಹಾಕಿಸಿದ್ದೆವು. ಸುರೇಶ್ ಅವರು ಸಂಸದರಾಗಿದ್ದಾಗ ಈ ಸೌಲಭ್ಯ ಕಲ್ಪಿಸಲಾಯಿತು. ಪಕ್ಕದ ಮಂಡ್ಯದಲ್ಲಿ ಇಂತಹ ವ್ಯವಸ್ಥೆ ಇಲ್ಲ. ನನ್ನ ಕೊಡುಗೆ ಏನು ಎಂದು ಯಾರು ಏನಾದರೂ ಟೀಕೆ ಮಾಡಲಿ. ನನ್ನ ಹಾಗೂ ನಿಮ್ಮ ಸಂಬಂಧ ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ ಎಂದರು.

ತಕ್ಷಣವೇ ಬಸ್‌ ವ್ಯವಸ್ಥೆ ಮಾಡಲು ಸೂಚನೆ:

ಸಭೆಯಲ್ಲಿ ಸಿದ್ದರಾಮೇಶ್ವರ ಕಾಲೇಜು ಹಾಗೂ ಇತರೆ ಸರ್ಕಾರಿ ಶಾಲೆಗಳ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು “ಸರ್ ನಮಗೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲ. ಚನ್ನಪಟ್ಟಣದಿಂದ ಮಲ್ಲನಕುಪ್ಪೆಗೆ ಪ್ರತಿದಿನ 9 ಗಂಟೆಗೆ ತಲುಪುವಂತೆ ಬಸ್ ವ್ಯವಸ್ಥೆ ಕಲ್ಪಿಸಿ” ಎಂದು ಮನವಿ ಮಾಡಿದರು.

ಇದನ್ನೂ ಓದಿ: Book Release: ಬೆಂಗಳೂರಿನಲ್ಲಿ ಜೂ.29ರಂದು ‘ಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ

ಮನವಿಗೆ ಸ್ಪಂದಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, “ನಮ್ಮ ಹೆಣ್ಣು ಮಕ್ಕಳು ಧೈರ್ಯ, ಓದುವ ಛಲದಿಂದ ಇಲ್ಲಿಯವರೆಗೂ ಬಂದಿದ್ದಾರೆ. ನಿಮ್ಮ ಅಧಿಕಾರಿಗೆ ಹೇಳಿ” ಎಂದು ಪಕ್ಕದಲ್ಲಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಹೇಳಿದರು. ಆಗ ಕೆಎಸ್‌ಆರ್‌ಟಿಸಿ ಅಧಿಕಾರಿಯನ್ನು ಕರೆದ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು, “ಸೋಮವಾರವೇ ಬಸ್ ಬರಬೇಕು. ಈ ವಿದ್ಯಾರ್ಥಿನಿಯರ ಸಮಸ್ಯೆ ಬಗೆಹರಿಸಬೇಕು” ಎಂದು ಸ್ಪಷ್ಟ ಸೂಚನೆ ನೀಡಿದರು.

Exit mobile version