Site icon Vistara News

DCM Post: ಮತ್ತೆ ಸಮುದಾಯವಾರು ಡಿಸಿಎಂ ಕೂಗು; ನಾವೂ ಬೇಡಿಕೆಯಿಟ್ಟಿದ್ದೇವೆ ಎಂದ ಸಚಿವ ಜಮೀರ್ ಅಹ್ಮದ್!

DCM Post

ಬೆಂಗಳೂರು: ಕೈ ಪಾಳಯದಲ್ಲಿ ಸಮುದಾಯವಾರು ಡಿಸಿಎಂ ಹುದ್ದೆ (DCM Post) ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರು ಹಾಗೂ ಡಿಸಿಎಂ ಡಿಕೆಶಿ ಬಣದ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರಿಂದ ಡಿಸಿಎಂ ಹುದ್ದೆ ಬೇಡಿಕೆ ಕೇಳಿಬರುತ್ತಿದ್ದು, ಸಚಿವ ಕೆ.ಎನ್‌ ರಾಜಣ್ಣ, ಸತೀಶ್ ಜಾರಕಿಹೊಳಿ‌, ಜಮೀರ್ ಅಹ್ಮದ್ ಡಿಸಿಎಂ ಹುದ್ದೆ ಬಗ್ಗೆ ಮತ್ತೆ ಪ್ರಸ್ತಾಪಿಸಿದ್ದಾರೆ.

ಎಸ್‌ಸಿ-ಎಸ್‌ಟಿ, ಲಿಂಗಾಯತ, ಮುಸ್ಲಿಂ ಸಮುದಾಯಕ್ಕೆ ಡಿಸಿಎಂ ಹುದ್ದೆ ನೀಡುವಂತೆ ಬೇಡಿಕೆ ಕೇಳಿಬಂದಿದೆ. ಡಿಸಿಎಂ ಹುದ್ದೆ ಸೃಷ್ಟಿ ಆಗಬೇಕು ಎಂದು ಸಚಿವ ಕೆ.ಎನ್ ರಾಜಣ್ಣ ಈ ಹಿಂದಿನಿಂದಲೇ ಹೇಳುತ್ತಾ ಬರುತ್ತಿದ್ದು, ಇದೀಗ ಡಿಸಿಎಂ ಹುದ್ದೆ ಕುರಿತು ಸಾಮೂಹಿಕ ಚರ್ಚೆ ಆಗಬೇಕು. ಬಿಜೆಪಿಯಲ್ಲಿ ಸಮುದಾಯವಾರು ಡಿಸಿಎಂ ಮಾಡಲಾಗಿತ್ತು. ಅಧಿಕಾರ ಎಲ್ಲಾ ಸಮುದಾಯಗಳಿಗೆ ಹಂಚಿಕೆಯಾಗಬೇಕು. ಇದರಿಂದ ಎಲ್ಲರಿಗೂ ಸಮಾಧಾನವಾಗುತ್ತದೆ. ಡಿಸಿಎಂ ಹುದ್ದೆ ನೀಡಿದರೆ ಆ ಸಮುದಾಯಗಳ ಪ್ರೀತಿ, ವಿಶ್ವಾಸ ನಮ್ಮ ಪಕ್ಷದ ಮೇಲೆ ಇರುತ್ತದೆ. ಈ ಬಗ್ಗೆ ಹೈ ಕಮಾಂಡ್‌ ತೀರ್ಮಾನಿಸಬೇಕು ಎಂದು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಸಚಿವ ಸತೀಶ್‌ ಜಾರಕಿಹೊಳಿ ಅವರು, ಹೆಚ್ಚುವರಿಯಾಗಿ ಡಿಸಿಎಂ ನೇಮಕ ಕುರಿತಂತೆ ಸಾಮೂಹಿಕ ಚರ್ಚೆ ಆಗಬೇಕು. ಎಐಸಿಸಿ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆ ಆಗಬೇಕು. ಸಿಎಂ ಮಟ್ಟದಲ್ಲೂ ಚಿಂತನೆ ಆಗಬೇಕು. ಇದರಿಂದ ಡಿಸಿಎಂ ಹುದ್ದೆ ಅಗತ್ಯದ ಬಗ್ಗೆ ದಾರಿ ಸ್ಪಷ್ಟವಾಗಲಿದೆ ಎಂದು ಹೇಳಿದ್ದರು.

ಈ ಬಗ್ಗೆ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿ, ಡಿಸಿಎಂ ಹುದ್ದೆ ಕೇಳುವುದರಲ್ಲಿ ತಪ್ಪೇನಿಲ್ಲ, ಎಲ್ಲಾ ಸಮಾಜಕ್ಕೂ ಬೇಕು ಎನ್ನುವುದು ಇರುತ್ತದೆ. ನಮ್ಮ ಮುಸ್ಲಿಂ ಸಮುದಾಯಕ್ಕೆ ಡಿಸಿಎಂ ಹುದ್ದೆ ನೀಡಲಿ, ನಾವು ಬೇಡಿಕೆಯಿಟ್ಟಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Pralhad Joshi: ಗ್ಯಾರಂಟಿ ಎನ್ನುತ್ತ ಜನರ ತಲೆ ಮೇಲೆ ಚಪ್ಪಡಿ ಕಲ್ಲು ಎತ್ತಿ ಹಾಕಿದ ಕಾಂಗ್ರೆಸ್: ಪ್ರಲ್ಹಾದ್‌ ಜೋಶಿ ಕಿಡಿ

ನನ್ನ ಅಭಿಪ್ರಾಯ ಕೇಳಿಕೊಂಡು ಯಾರೂ ಡಿಸಿಎಂ ಮಾಡಲ್ಲ ಎಂದ ಗೃಹ ಸಚಿವ

ರಾಜಣ್ಣ ಮತ್ತು ಜಮೀರ್ ಅಹ್ಮದ್ ಮತ್ತೆ ಹೆಚ್ಚುವರಿ ಡಿಸಿಎಂ ಹುದ್ದೆ ಮಾಡಬೇಕು ಎಂದಿರುವ ವಿಚಾರದ ಬಗ್ಗೆ ಗೃಹ ಸಚಿವ ಡಾ. ಪರಮೇಶ್ವರ್‌ ಪ್ರತಿಕ್ರಿಯಿಸಿ, ನಾವು ಹೇಳಿರುವುದರಲ್ಲಿ ಏನೂ ತಪ್ಪಿಲ್ಲ ಅಂತ ಅವರು ಹೇಳಿದ್ದಾರೆ. ನಾವು ಏನೂ ಅದಕ್ಕೆ ರಿಯಾಕ್ಟ್ ಮಾಡುವುದು ಬೇಕಿಲ್ಲ. ಎಲ್ಲ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅಗತ್ಯ ಇದ್ದರೆ ಮಾಡುತ್ತಾರೆ ಎಂದರು. ಅಗತ್ಯತೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ನನ್ನ ಅಭಿಪ್ರಾಯ ಕೇಳಿಕೊಂಡು ಯಾರೂ ಡಿಸಿಎಂ ಮಾಡಲ್ಲ ಎಂದು ತಿಳಿಸಿದರು.

Exit mobile version