ಬೆಂಗಳೂರು: ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನ ಸೌಧದ ಪಕ್ಕದಲ್ಲೇ ಇರುವ ಕಟ್ಟಡದ ಸಂಪ್‌ನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ನೂರಾರು ಸರಕಾರಿ ಕಚೇರಿಗಳಿರುವ ಎಂ.ಎಸ್. ಬಿಲ್ಡಿಂಗ್‌ನಲ್ಲಿ ಈ ಘಟನೆ ನಡೆದಿದೆ.
ಅಗ್ನಿಶಾಮಕ ವ್ಯವಸ್ಥೆ ನಿರ್ವಹಣೆಯ ಪಂಪ್ ಹೌಸ್ ಸಮೀಪದ ಸಂಪ್‌ನಲ್ಲಿ ಈ ಹೆಣ ಕಂಡುಬಂದಿದೆ. ಗುರುವಾರ ಬೆಳಗ್ಗೆ ಕೆಲಸಕ್ಕೆ ಬಂದ ಸಿಬ್ಬಂದಿಗಳು ಯಾರೋ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಧಾನಸೌಧ ಪೊಲೀಸರು , ಅಗ್ನಿ ಶಾಮಕ ಸಿಬ್ಬಂಧಿ , ಡಿಸಿಪಿ ಶ್ರೀನಿವಾಸ್ ಗೌಡ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಘಟನೆ ನಡೆದ ಸ್ಥಳ ವಿಧಾನಸೌಧ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಸಂಪ್‌ನೊಳಗಿನ ಶವವನ್ನು ಹೊರತೆಗೆಯಲು ಮೊದಲು ನೀರು ಖಾಲಿ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದ ಪೊಲೀಸರು ಆ ಕೆಲಸ ಮಾಡಿದರು. ಆಗ ಒಳಗೆ ಪುರುಷನ ಶವವೊಂದು ಕಂಡುಬಂತು. ಶವವ ಮೈಮೇಲೆ ಬಟ್ಟೆ ಇರಲಿಲ್ಲ.
ಶವವನ್ನು ಹೊರ ತೆಗೆದು ಬಟ್ಟೆ ಮುಚ್ಚಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಶವ ಸ್ವಲ್ಪ ಮಟ್ಟಿಗೆ ಕೊಳೆತಿರುವುದರಿಂದ ನೀರಿಗೆ ಬಿದ್ದು ಒಂದೆರಡು ದಿನ ಆರಿಬಹುದು ಎಂದು ಶಂಕಿಸಲಾಗಿದೆ. ಇದು ಆಕಸ್ಮಿಕವಾಗಿ ಸಂಪ್ ಗೆ ಬಿದ್ದು ಸಂಭವಿಸಿದ ಸಾವೇ ಅಥವಾ ಕೊಂದು ತಂದು ಸಂಪ್‌ಗೆ ಹಾಕಲಾಗಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಮೊದಲು ಪೋಸ್ಟ್ ಮಾರ್ಟಂ ನಡೆಯಬೇಕಾಗಿದೆ.
ನಾಲ್ಕು ದಿನಗಳ ಮಧ್ಯೆ ನಡೆದಿರುವ ಘಟನೆ
ಎಂ.ಎಸ್. ಬಿಲ್ಡಿಂಗ್‌ನ ಕಚೇರಿಗಳಿಗೆ ಶನಿವಾರ, ಭಾನುವಾರ, ಸೋಮವಾರ ರಜೆ ಇತ್ತು. ಈ ಸಂದರ್ಭದಲ್ಲಿ ನಡೆದಿರುವ ಘಟನೆ ಇದೆಂದು ಪೊಲೀಸರು ಶಂಕಿಸಿದ್ದಾರೆ. ಈ ಸಂದರ್ಭದಲ್ಲಿ ಯಾರು ಬಂದಿದ್ದರು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಈ ಪ್ರದೇಶದಲ್ಲಿ ಕೆಲಸ ಮಾಡುವವರು ಯಾರಾದರೂ ನಾಪತ್ತೆಯಾಗಿದ್ದಾರಾ? ಇಲ್ಲಿಗೆ ಯಾರೆಲ್ಲ ಬರುತ್ತಿದ್ದರು ಎಂಬೆಲ್ಲ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಹೇಳಿದ್ದಾರೆ.
ಇದನ್ನೂ ಓದಿ| Chunchi Falls | ಚುಂಚಿಫಾಲ್ಸ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದು ಯುವಕ ಸಾವು