ಬೆಂಗಳೂರು: ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಕಳೆದ ಮಾರ್ಚ್ 13ರಂದು ಡ್ರಮ್‌ನಲ್ಲಿ ಪತ್ತೆಯಾದ ಶವ ಜಿಗಣಿ ಮೂಲದ ಮುಸ್ಲಿಂ ಮಹಿಳೆ ತಮನ್ನಾಳದ್ದು ಎಂಬುದು ಈಗ ಬಯಲಾಗಿದೆ. ಆಕೆಯನ್ನು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾಗಿ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಪ್ರಕರಣದಲ್ಲಿ ಒಟ್ಟು ಎಂಟು ಮಂದಿ ಆರೋಪಿಗಳು ಭಾಗಿಯಾಗಿದ್ದು ಕಮಾಲ್, ತನ್ವೀರ್, ಶಾಕೀಬ್ ಎಂಬ ಮೂವರನ್ನಷ್ಟೇ ಈಗ ಬಂಧಿಸಲಾಗಿದೆ. ಉಳಿದ ಐವರನ್ನು ಬಂಧಿಸಬೇಕಾಗಿದೆ.
ಮಾರ್ಚ್ 13ರಂದು ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿಕ ಅನಾಥವಾಗಿ ಪತ್ತೆಯಾದ ಡ್ರಮ್‌ನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಮಹಿಳೆಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು ಶವವನ್ನು ಡ್ರಮ್‌ನಲ್ಲಿ ಇಟ್ಟು ಹೋಗಿದ್ದರು ದುಷ್ಕರ್ಮಿಗಳು. ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದಾಗ ಇಬ್ಬರು ದುಷ್ಕರ್ಮಿಗಳು ಒಂದು ಆಟೋದಲ್ಲಿ ಬಂದು ಡ್ರಮ್ ಇಟ್ಟು ಹೋಗಿದ್ದು ಪತ್ತೆಯಾಗಿತ್ತು. ಬಳಿಕ ರೈಲ್ವೆ ಎಸ್‌ಪಿ ಸೌಮ್ಯಲತಾ ಅವರ ಮುತುವರ್ಜಿಯಿಂದ ನಡೆದ ತನಿಖೆಯಲ್ಲಿ ಕೊಲೆಯಾದ ಮಹಿಳೆ ತಮನ್ನಾ ಎನ್ನುವುದು ಬಯಲಾಗಿದೆ.
ಆರೋಪಿಗಳೆಲ್ಲರೂ ಬಿಹಾರ ಮೂಲದವರಾಗಿದ್ದು, ಅಲ್ಲಿಂದ ಬಂದು ಕಲಾಸಿಪಾಳ್ಯದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ಬಳಸಿಕೊಂಡು ಈ ಕೊಲೆ ನಡೆದಿದೆ. ಈ ಕೊಲೆಯ ಹಿಂದೆ ಕೌಟುಂಬಿಕ ಕಾರಣಗಳು ಇವೆ ಎಂದು ಹೇಳಲಾಗಿದೆ.
ಕೊಲೆಯಲ್ಲಿ ಒಟ್ಟು ಎಂಟು ಮಂದಿ ಭಾಗಿಯಾಗಿದ್ದು, ನವಾಬ್, ಜಮಾಲ್, ಮಜರ್, ಅಸ್ಸಾಬ್, ಸಬೂಲ್, ಕಮಾಲ್, ತನ್ವೀರ್, ಶಾಕೀಬ್ ಸೇರಿ ಕಲಾಸಿಪಾಳ್ಯದಲ್ಲಿ ಕೊಲೆ ಮಾಡಿ ಬೈಯಪ್ಪನಹಳ್ಳಿ ಮೃತದೇಹ ಇಟ್ಟು ಬಂದಿದ್ದರು.
ಏನಿದು ಕೌಟುಂಬಿಕ ಕಲಹ
ತಮನ್ನಾ ಕೊಲೆಗೆ ಕೌಟುಂಬಿಕ ಕಾರಣ ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಆದರೆ, ಇದಕ್ಕೂ ಕೊಲೆಗಾರರಿಗೂ ಏನು ಸಂಬಂಧ ಎನ್ನುವುದು ತುಂಬಾ ಸ್ಪಷ್ಟತೆ ಸಿಗುವುದಿಲ್ಲ. ಆರೋಪಿಗಳಲ್ಲಿ ಒಬ್ಬಾತ ಮಾತ್ರ ಈಕೆಯ ಕುಟುಂಬಕ್ಕೆ ಸೇರಿದವನು. ಉಳಿದವರು ಹತ್ಯೆಯಲ್ಲಿ ಯಾಕೆ ಭಾಗಿಯಾದರು ಎನ್ನುವುದು ಇನ್ನಷ್ಟೇ ಪೂರ್ಣ ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ.
ತಮನ್ನಾ ಮತ್ತು ಇಂತಿಕಾಬ್ ಮದುವೆಯಾಗಿ ಜಿಗಣಿಯಲ್ಲಿ ವಾಸವಾಗಿದ್ದರು. ಅವರನ್ನು ಆಕೆಯ ಸಂಬಂಧಿಯಾದ ನವಾಬ್ ಎಂಬಾತ (ಆರೋಪಿಗಳಲ್ಲಿ ಒಬ್ಬ) ಬೆಂಗಳೂರಿಗೆ ಕರೆಸಿಕೊಂಡಿದ್ದ. ಬೆಂಗಳೂರು ತೋರಿಸೋದಾಗಿ ಕರೆತಂದಿದ್ದ ಆತ ಕೆಲವು ಕಡೆಗಳಿಗೆ ಕರೆದು ಕೊಂಡು ಕೂಡಾ ಹೋಗಿದ್ದರು.
ಈ ತಮನ್ನಾಗೆ ಮೊದಲು ಅಫ್ರೋಜ್ ಎಂಬಾತನ ಜತೆಗೆ ಮದುವೆ ಆಗಿತ್ತು. ಅಫ್ರೋಜ್ ವಿಶೇಷ ಚೇತನನಾಗಿದ್ದ. ಅವನಿಂದ ಡೈವೋರ್ಸ್ ಪಡೆದಿದ್ದ ಆಕೆ ಇಮ್ತಿಕಾಬ್ ಎಂಬಾತನನ್ನು ಮದುವೆಯಾಗಿದ್ದಳು. ಜಿಗಣಿಯಲ್ಲಿ ವಾಸವಾಗಿರುವುದು ಇಮ್ತಿಕಾಬ್ ಜತೆ. ನಿಜವೆಂದರೆ ಅಫ್ರೋಜ್ ಇಮ್ತಿಕಾಬ್‌ನ ದೊಡ್ಡಪ್ಪನ ಮಗನೇ ಆಗಿದ್ದ. ಕೊಲೆಯಲ್ಲಿ ಭಾಗಿಯಾಗಿರುವ ನವಾಬ್ ಇಮ್ತಿಕಾಬ್‌ನ ಸಹೋದರ.
ಕೊಲೆ ಮಾಡಿದ್ದು ಯಾಕೆ?
ಈ ಪ್ರಕರಣದಲ್ಲಿ ತಮನ್ನಾ ಮೇಲೆ ಪ್ರಬಲ ದ್ವೇಷ ಇರುವುದು ನವಾಬ್‌ನಿಗೆ. ತಮನ್ನಾ ಇಡೀ ಕುಟುಂಬವನ್ನು ಹಾಳು ಮಾಡುತ್ತಿದ್ದಾಳೆ ಎನ್ನುವುದು ಅವನ ಆಕ್ರೋಶ. ಹೀಗಾಗಿ ಕೊಲೆಗೆ ಸ್ಕೆಚ್ ಮಾಡಿದ್ದ. ಬೆಂಗಳೂರಿಗೆ ಕರೆಸಿಕೊಂಡಿದ್ದ. ಮಾರ್ಚ್ 12ರ ಭಾನುವಾರ ಎರಡು ಗಂಟೆಗೆ ಪಾರ್ಟಿಗೆ ಕರೆಸಿಕೊಳ್ಳಲಾಗಿದೆ. ತಮನ್ನಾ ಒಬ್ಬಳೇ ಮಹಿಳೆ ಆಗಿರುವುದರಿಂದ ಇನ್ನೊಬ್ಬ ಮಹಿಳೆಯನ್ನು ಮನೆಗೆ ಕರೆಸಿಕೊಂಡಿದ್ದರು.
ಆವತ್ತು ಮನೆಯಲ್ಲಿ ಪಾರ್ಟಿ ಮಾಡಿದ ಬಳಿಕ ಸಂಜೆ ಆರು ಗಂಟೆಗೆ ಕೊಲೆ ಮಾಡಿದ್ದಾರೆ. ಕುತ್ತಿಗೆಯನ್ನು ಕೈಯಿಂದ ಹಿಸುಕಿ ಮತ್ತು ವೇಲ್‌ನಿಂದ ಬಿಗಿದು ಕೊಲೆ ಮಾಡಿದ್ದರು. ಅಂದೇ ಕಲಾಸಿಪಾಳ್ಯದಿಂದ ಒಂದು ಡ್ರಮ್ ಖರೀದಿಸಿದ ಆರೋಪಿಗಳು ಶವವನ್ನು ಅದರಲ್ಲಿ ಹಾಕಿ ರಾತ್ರಿ 11.45ರ ಹೊತ್ತಿಗೆ ಬೈಯಪ್ಪನ ಹಳ್ಳಿ ರೈಲ್ವೇ ನಿಲ್ದಾಣದಲ್ಲಿ ಇಟ್ಟುಬಂದಿದ್ದಾರೆ. ಶವವನ್ನು ಇಡಲಾಗಿದ್ದು ಡ್ರಮ್ ಮೇಲಿದ್ದ ಸ್ಟಿಕರ್ ಆಧಾರದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಐವರಿಗಾಗಿ ಶೋಧ ಮುಂದುವರಿದಿದೆ.
ಇದನ್ನೂ ಓದಿ : ರೈಲ್ವೇ ಸ್ಟೇಷನ್ ಶವ ಪತ್ತೆ ರಹಸ್ಯ ಬಯಲು; ಮಹಿಳೆಯನ್ನು ಕೊಂದು ಡ್ರಮ್‌ನಲ್ಲಿ ಹಾಕಿಟ್ಟು ಪರಾರಿಯಾದ ಇಬ್ಬರ ಅರೆಸ್ಟ್