Site icon Vistara News

Dead body in plastic | ಶವ ಸಂಸ್ಕಾರಕ್ಕೆ ಹಣವಿಲ್ಲದೆ ಪತ್ನಿ ಶವವನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಊರಿಗೆ ಸಾಗಿಸಿದ ಗಂಡ

Dead body in plastic

ಚಾಮರಾಜನಗರ: ಬಡತನ ಎನ್ನುವುದು ಎಷ್ಟು ಕ್ರೂರವಾಗಿರುತ್ತದೆ, ಬದುಕನ್ನು ದೈನೇಸಿಯಾಗಿ ಮಾಡುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಇಲ್ಲೊಬ್ಬ ಅನಾರೋಗ್ಯದಿಂದ ಮೃತಪಟ್ಟ ತನ್ನ ಪತ್ನಿಯ ಅಂತ್ಯಕ್ರಿಯೆ ನಡೆಸಲೂ ಹಣವಿಲ್ಲದೆ, ಶವವನ್ನು ಪ್ಲಾಸ್ಟಿಕ್‌ನಲ್ಲಿ (Dead body in plastic) ಕಟ್ಟಿ ಹೊತ್ತುಕೊಂಡೇ ತನ್ನ ಊರಿಗೆ ಹೊರಟಿದ್ದಾನೆ! ಆದರೂ ಇದರ ಹಿಂದಿನ ನಿಜವಾದ ಕಥೆ ಏನು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚಾಮರಾಜ ನಗರ ಜಿಲ್ಲೆಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ನಗರದ ಕಂದಹಳ್ಳಿ ಸಮೀಪದ ರವಿ ಮತ್ತು ಕಾಳಮ್ಮ (೨೬) ಎಂಬವರು ವಾಸವಿದ್ದರು. ಇಬ್ಬರೂ ಪ್ಲಾಸ್ಟಿಕ್‌ ಮತ್ತು ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದರು. ಈ ನಡುವೆ, ಪತ್ನಿ ಕಾಳಮ್ಮ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಆದರೆ, ಆಕೆಯ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲು ರವಿ ಬಳಿ ಹಣವಿರಲಿಲ್ಲ. ಇವರು ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಕಾಗೆಪುರ ಗ್ರಾಮದವರು. ಹಾಗಾಗಿ ಅಲ್ಲಿಗೇ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸುವುದು ಎಂದು ತೀರ್ಮಾನಿಸಿದರು ರವಿ. ಆದರೆ, ಅಲ್ಲಿವರೆಗೆ ಹೋಗುವುದಕ್ಕೂ ಹಣವಿರಲಿಲ್ಲ. ಹೀಗಾಗಿ ಶವವನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಅದನ್ನು ಹಿಡಿದುಕೊಂಡು ಮಂಡ್ಯದ ಕಡೆಗೆ ಹೊರಟಿದ್ದರು.

ಇದನ್ನು ಗಮನಿಸಿದ ಕೆಲವರು ವಿಚಾರಿಸಿ ಮೂಟೆ ಇಳಿಸಿ ಪರಿಶೀಲಿಸಿದರು. ಅದರಲ್ಲಿ ಹೆಣವಿರುವುದನ್ನು ನೋಡಿ ವಿಚಾರಿಸಿದಾಗ ಬಡತನದ ಕತೆ ಹೇಳಿಕೊಂಡಿದ್ದಾನೆ. ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಈಗ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ʻʻನಾನು ಅನಾಥ. ಹೆಂಡತಿಗೆ ಚಿಕಿತ್ಸೆ ಕೊಡಿಸಲು ಹಣ ಇರಲಿಲ್ಲ, ಈಗ ಮೃತದೇಹ ಊರಿಗೆ ತೆಗೆದುಕೊಂಡು ಹೋಗಲು ಹಣವಿಲ್ಲ. ನನಗೆ ಸಂಬಂಧಿಕರೂ ಇಲ್ಲʼʼ ಎನ್ನುತ್ತಿದ್ದಾನೆ ರವಿ. ಇದೀಗ ಪೊಲೀಸರು ಆಕೆಯ ಸಾವಿನ ಹಿನ್ನೆಲೆಯನ್ನೂ ಪರಿಶೀಲಿಸಲಿದ್ದಾರೆ. ಜತೆಗೆ ಸ್ಥಳೀಯರು ಸೇರಿ ಶವದ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ | ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ, ಒಂದು ಮಗು ಸಾವು

Exit mobile version