ಆನೇಕಲ್: ತಾಲೂಕಿನ ತಿರುಪಾಳ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ (Dead Body) ಪತ್ತೆಯಾಗಿದೆ. ವಿಜಯಪುರ ಮೂಲದ ಪವಿತ್ರಾ ಸಂಗನಗೌಡ ಬಿರಾದಾರ (ಪಾರ್ವತಿ) ಮೃತ ಮಹಿಳೆ.
ತಿರುಪಾಳ್ಯ ಸಮೀಪ ಇರುವ ಕಟ್ಟಡದ ಮೂರನೇ ಮಹಡಿಯ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವವು ಪತ್ತೆಯಾಗಿದೆ. ಶವವನ್ನು ಬೆಡ್ ಶೀಟ್‌ನಲ್ಲಿ ಕಟ್ಟಿದ ಸ್ಥಿತಿಯಲ್ಲಿದ್ದು, ಮನೆಯಲ್ಲಿ ದುರ್ವಾಸನೆ ಬಂದಿದ್ದರಿಂದ ಪ್ರಕರಣ ಬಯಲಿಗೆ ಬಂದಿದೆ. ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಸುಮಾರು ಐದು ದಿನದ ಹಿಂದೆ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಗಂಡ- ಹೆಂಡತಿ ಇಬ್ಬರು ವಾಸವಾಗಿದ್ದು, ಮಹಿಳೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇತ್ತ ಮೃತಳ ಪತಿ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಪಾರ್ವತಿ ಗಂಡನೇ ಕೊಲೆ ಮಾಡಿ ಪರಾರಿಯಾಗಿರಬಹುದೆಂದು ಅನುಮಾನಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ | 22 ವರ್ಷದ ಹಳೆಯ ಕೊಲೆ ಕೇಸ್; ಕೇಂದ್ರ ಸಚಿವರ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್, ನ.10ಕ್ಕೆ ಅಂತಿಮ ತೀರ್ಪು