Site icon Vistara News

ಜೆಡಿಎಸ್‌ ಅಭ್ಯರ್ಥಿ ಸಾವು | ಜನಸೇವಕನಾಗಬಯಸಿದ್ದ ಮಾಜಿ ಸೈನಿಕ | ಸೋಮಜ್ಯಾಳ ನಿಧನಕ್ಕೆ ಎಚ್‌ಡಿಕೆ ತೀವ್ರ ಸಂತಾಪ

jds candidate sindagi

ವಿಜಯಪುರ: ತೀವ್ರ ಹೃದಯಾಘಾತದಿಂದ ಮೃತಪಟ್ಟ ಸಿಂದಗಿ ಮತಕ್ಷೇತ್ರದ ಘೋಷಿತ ಜೆಡಿಎಸ್‌ ಅಭ್ಯರ್ಥಿ ಶಿವಾನಂದ ಪಾಟೀಲ್‌ ಸೋಮಜ್ಯಾಳ, ದೇಶಕ್ಕೆ ಸೇವೆ ಸಲ್ಲಿಸಿದ ಮಾಜಿ ಸೈನಿಕನಾಗಿದ್ದರು. ಇವರ ಸಾವಿಗೆ ಜೆಡಿಎಸ್‌ ಮುಖಂಡ ಎಚ್‌ಡಿ ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ಮತಕ್ಷೇತ್ರದ ಜನಸೇವಕನಾಗಬಯಸಿದ್ದ ಅವರು ಮೊನ್ನೆಯಷ್ಟೇ ತಮ್ಮ ಪರವಾಗಿ ಬೆಂಬಲ ಸೂಚಿಸಿ ಮತಯಾಚಿಸಲು ಬಂದಿದ್ದ ಪಕ್ಷದ ಮುಖಂಡ ಹಾಗೂ ಮಾಜಿ ಸಿಎಂಗೆ ಬೃಹತ್‌ ಬೆಲ್ಲದ ಹಾರ ಹಾಕಿ ಸ್ವಾಗತ ಕೋರಿದ್ದರು. ತಾವು ಸಾವಿಗೀಡಾಗುವ ಕೆಲವೇ ಗಂಟೆಗಳ ಮುನ್ನ ಅಗಲಿದ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು. ಆದರೆ ವಿಧಿಯಾಟ ಬಲ್ಲವರಾರು!

ವಿಜಯಪುರ ಜಿಲ್ಲೆಯ ಎಂಟು ಮತಕ್ಷೇತ್ರಗಳಲ್ಲಿ ಏಳು ಮತಕ್ಷೇತ್ರಗಳಿಗೆ ಜೆಡಿಎಸ್‌ ತನ್ನ ಅಭ್ಯರ್ಥಿಗಳನ್ನು ಈಗಾಗಲೇ ಘೋಷಣೆ ಮಾಡಿದೆ. ಕಳೆದ ಐದು ದಿನಗಳಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಈ ಎಲ್ಲಾ ಏಳು ಮತಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಸಂಚಾರ ನಡೆಸಿ ಪಕ್ಷ ಮತ್ತು ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮಾಜಿ ಸಿಎಂ ಪ್ರಚಾರ ಕೈಗೊಂಡಿದ್ದು, ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮೊದಲು ಇಂಡಿ, ನಂತರ ಸಿಂದಗಿ, ದೇವರ ಹಿಪ್ಪರಗಿ ಹಾಗೂ ನಾಗಠಾಣ ಮತಕ್ಷೇತ್ರದ ಸಂಚಾರ ಪೂರ್ಣಗೊಳಿಸಿ ಇಂದು ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನಂತರದ ದಿನದಲ್ಲಿ ಬಸವನಬಾಗೇವಾಡಿ ಹಾಗೂ ಬಬಲೇಶ್ವರ ಮತಕ್ಷೇತ್ರದಲ್ಲಿ ರಥಯಾತ್ರೆ ಸಂಚರಿಸುವುದಿತ್ತು. ಈ ಮಧ್ಯೆ ಪಕ್ಷ ಮತ್ತು ಜಿಲ್ಲೆಯ ಜನತೆಗೆ ಆಘಾತಕಾರಿ ಸುದ್ದಿ ಶಿವಾನಂದ ಸಾವಿನ ರೂಪದಲ್ಲಿ ಅಪ್ಪಳಿಸಿದೆ.

ಘೋಷಿತ ಏಳು ಅಭ್ಯರ್ಥಿಗಳಲ್ಲಿ ಸಿಂದಗಿ ಮತಕ್ಷೇತ್ರದ ಶಿವಾನಂದ ಪಾಟೀಲ್‌ ಸೋಮಜ್ಯಾಳ ಸಹ ಒಬ್ಬರಾಗಿದ್ದರು. ಮಾಜಿ ಸೈನಿಕರಾಗಿದ್ದ ಇವರು ಸಿಂದಗಿ ಮತಕ್ಷೇತ್ರದ ಜನಸೇವಕರಾಗುವ ಕನಸು ಕಂಡಿದ್ದರು. ಜನವರಿ ೧೮ರಂದು ತಮ್ಮ ಮತಕ್ಷೇತ್ರವಾದ ಸಿಂದಗಿಯಲ್ಲಿ ನಡೆದ ಪಂಚರತ್ನ ರಥಯಾತ್ರೆಯನ್ನು ಯಶಸ್ವಿಗೊಳಿಸಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಿಂದಗಿ ಪಟ್ಟಣಕ್ಕೆ ಬಂದ ರಥಯಾತ್ರೆಗೆ ಬೃಹತ್‌ ಬೆಲ್ಲದ ಹಾರದ ಸ್ವಾಗತ ನೀಡಿದ್ದರು. ಜೊತೆಗೆ ನಿನ್ನೆಯಷ್ಟೇ ವಿಜಯಪುರ ನಗರದ ದರ್ಬಾರ್‌ ಶಾಲಾ ಮೈದಾನದಲ್ಲಿ ನಡೆದ ನಾಗಠಾಣ ಮತಕ್ಷೇತ್ರದ ಬೃಹತ್‌ ವೇದಿಕೆ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು. ಇದೇ ವೇದಿಕೆಯಲ್ಲಿ ಇತ್ತೀಚೆಗಷ್ಟೇ ಅಗಲಿದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಶ್ರದ್ಧಾಂಜಲಿಯನ್ನೂ ಸಲ್ಲಿಸಿದ್ದರು. ಸಭೆಯ ನಂತರ ಸಿಂದಗಿ ಪಟ್ಟಣಕ್ಕೆ ತೆರಳಿದ್ದ ಅವರು, ಶುಕ್ರವಾರ ರಾತ್ರಿ ಒಂಬತ್ತರ ವೇಳೆಗೆ ಸಂಬಂಧಿಕರ ಮನೆಯಲ್ಲಿ ತಲೆಸುತ್ತು ಬಂದು, ಕುಡಿಯಲು ನೀರು ಕೇಳಿದ್ದಾರೆ. ನೀರು ತರುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ.

ಶಿವಾನಂದ ಪಾಟೀಲರು ಮೂಲತಃ ಸಿಂದಗಿ ತಾಲೂಕಿನ, ಈಗಿನ ಆಲಮೇಲ ತಾಲೂಕಿನ ಸೋಮಜಾಳ ಗ್ರಾಮದವರು. ಹದಿನಾರು ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಅವರು, ಸೇನೆಯಿಂದ ನಿವೃತ್ತಿ ಹೊಂದಿದ ನಂತರ ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿದ್ದರು. ಕೋವಿಡ್‌ ಸಂದರ್ಭದಲ್ಲಿ ಮತಕ್ಷೇತ್ರದ ಬಹುತೇಕ ಹಳ್ಳಿಗಳಿಗೆ ತೆರಳಿ ಬಡವರಗೆ, ದೀನ ದಲಿತರ ನೆರವಿಗೆ ಧಾವಿಸಿ ಆಹಾರದ ಕಿಟ್‌ಗಳನ್ನು ಹಂಚಿದ್ದರು.

ಇದನ್ನೂ ಓದಿ | Shivanand Patil Somajal | ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಹೃದಯಾಘಾತದಿಂದ ನಿಧನ

ಶಿವಾನಂದ ಪಾಟೀಲ್‌ ಸೋಮಜಾಳ ಪತ್ನಿ, ಓರ್ವ ಪುತ್ರ, ಪುತ್ರಿ, ಅಪಾರ ಪ್ರಮಾಣದ ಬಂಧು ಬಳಗವನ್ನು ಅಗಲಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ವಿಜಯಪುರ ಜಿಲ್ಲೆಯ ಹಲಸಂಗಿ ಗ್ರಾಮದಲ್ಲಿದ್ದು, ಪಂಚರತ್ನ ರಥಯಾತ್ರೆ ಉದ್ದೇಶಿಸಿ ಮಾತನಾಡುತ್ತಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದ ಕುಮಾರಸ್ವಾಮಿಯವರಿಗೂ ಆಘಾತವಾಗಿದೆ. ಇಂದು ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಪ್ರಯಾಣ ಬೆಳೆಸಲಿದ್ದ ಅವರು ಸಿಂದಗಿಗೆ ಧಾವಿಸುವ ಸಾಧ್ಯತೆಯಿದೆ.

ಕುಮಾರಸ್ವಾಮಿ ಟ್ವೀಟ್

ʼʼಸಿಂದಗಿ ವಿಧಾನಸಭೆ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶಿವಾನಂದ ಪಾಟೀಲ ಅವರ ಅಕಾಲಿಕ ಮರಣ ನನಗೆ ತೀವ್ರ ಆಘಾತ ಉಂಟು ಮಾಡಿದೆ. ಜ.18ರಂದು ಇಡೀ ದಿನ ಅವರು ನನ್ನೊಂದಿಗೆ ಸಿಂದಗಿ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮರುದಿನ ಯಾತ್ರೆಯೊಂದಿಗೆ ನನ್ನನ್ನು ಆತ್ಮೀಯವಾಗಿ ದೇವರ ಹಿಪ್ಪರಗಿ ಕ್ಷೇತ್ರಕ್ಕೆ ಬೀಳ್ಕೊಟ್ಟಿದ್ದರು. ನಿನ್ನೆ ಮಧ್ಯಾಹ್ನವೂ ಮತ್ತೆ ನಾಗಠಾಣ ಕ್ಷೇತ್ರದ ಯಾತ್ರೆಯಲ್ಲಿ ಭಾಗವಹಿಸಿದ್ದರು. ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಪಾಟೀಲರು, ಸಮಾಜ ಸೇವೆಯ ಅದಮ್ಯ ಹಂಬಲ ಹೊಂದಿದ್ದರು. ಅತ್ಯುತ್ತಮ ಸಂಘಟನಾ ಶಕ್ತಿ, ಕ್ರಿಯಾಶೀಲತೆ ಹೊಂದಿದ್ದ ಅವರು ಪರಿಚಯವಾದ ಅಲ್ಪಕಾಲದಲ್ಲಿಯೇ ನನಗೆ ಅತ್ಯಂತ ಆತ್ಮೀಯರಾಗಿದ್ದರು. ಅವರ ಅಗಲಿಕೆ ನನಗೆ ವೈಯಕ್ತಿಕವಾಗಿ ಅತೀವ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆʼʼ ಎಂದು ಎಚ್‌ಡಿಕೆ ಟ್ವೀಟ್‌ ಮಾಡಿದ್ದಾರೆ.

Exit mobile version