Site icon Vistara News

Monkey death : ನೀರಿನ ಟ್ಯಾಂಕ್‌ಗೆ ಬಿದ್ದು ಮಂಗಗಳ ಸಾವು, ಸುದ್ದಿ ಕೇಳಿಯೇ ಹಲವರು ಅಸ್ವಸ್ಥ!

Monkey death

ರಾಯಚೂರು: ಊರಿಗೆಲ್ಲ ನೀರು ಸರಬರಾಜು ಮಾಡುವ ಟ್ಯಾಂಕ್‌ಗೆ ಬಿದ್ದು ಎರಡು ಮಂಗಗಳು (Monkey death) ಸಾವನ್ನಪ್ಪಿವೆ. ಈ ಸುದ್ದಿ ಕೇಳಿ ನೀರು ಕುಡಿದ ಹಲವು ಅಸ್ವಸ್ಥರಾಗಿದ್ದಾರೆ. ರಾಯಚೂರು ಜಿಲ್ಲೆಯ (Raichur News) ದೇವದುರ್ಗ ತಾಲೂಕಿನ ಖಾನಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಸ್ವಸ್ಥರಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿನ ನೀರು ಸರಬರಾಜು ಟ್ಯಾಂಕ್‌ನ ತುಂಬ ಎತ್ತರದಲ್ಲಿದ್ದು, ಅಲ್ಲಿಗೆ ನೀರು ಪಂಪ್‌ ಮಾಡಿ ಎಲ್ಲ ಮನೆಗಳಿಗೆ ಸರಬರಾಜು ಮಾಡಲಾಗುತ್ತದೆ. ಸೋಮವಾರ ಈ ಟ್ಯಾಂಕನ್ನು ಕ್ಲೀನ್‌ ಮಾಡಲು ಹೋದಾಗ ಅದರಲ್ಲಿ ಎರಡು ಮಂಗಗಳು ಸತ್ತುಬಿದ್ದಿರುವುದು ಗಮನಕ್ಕೆ ಬಂತು. ಕೂಡಲೇ ವಿಷಯ ಊರಿಗೆಲ್ಲ ಹಬ್ಬಿತು. ಆಗ ಊರಿನವರೆಲ್ಲ ಟ್ಯಾಂಕ್‌ ಸುತ್ತ ಸೇರಿದರು. ಈ ನಡುವೆ, ಕೆಲವರಿಗೆ ನೀರಿನಲ್ಲಿ ಮಂಗ ಬಿದ್ದ ಸುದ್ದಿ ಕೇಳಿಯೇ ಹೊಟ್ಟೆ ತೊಳೆಸಿದ ಅನುಭವ ಆಯಿತು. ಕೆಲವರು ವಾಂತಿ ಮಾಡಿಕೊಂಡರು ಎನ್ನಲಾಗಿದೆ.

ಟ್ಯಾಂಕ್‌ ಒಳಗೆ ಬಿದ್ದಿದ್ದ ಮಂಗಗಳನ್ನು ಹೇಗೋ ಮೇಲೆತ್ತಿ, ಟ್ಯಾಂಕನ್ನು ಕ್ಲೀನ್‌ ಮಾಡಿ ಹೊಸ ನೀರು ತುಂಬಿಸಲಾಯಿತು. ನಿಜವೆಂದರೆ, ಮಂಗಗಳು ಬಿದ್ದು ಸತ್ತು ಆಗಲೇ ಎರಡು ಮೂರು ದಿನಗಳಾಗಿತ್ತು. ಎರಡು ಮೂರು ದಿನ ಮಂಗಗಳು ಸತ್ತು ಬಿದ್ದಿದ್ದ ನೀರನ್ನೇ ಜನ ಕುಡಿದರೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ, ಮಂಗಗಳು ಸತ್ತು ಬಿದ್ದ ನೀರು ಕುಡಿದಿದ್ದೇವೆ ಎಂದು ತಿಳಿದ ಬಳಿಕ ಹಲವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

Khanapur residents

ಇದು ಈ ಹಿಂದೆ ಟ್ಯಾಂಕ್‌ ಪರಿಶೀಲನೆಗೆ ಹೋದವರು ಟ್ಯಾಂಕ್‌ನ ಮುಚ್ಚಳ ಮುಚ್ಚದೆ ಬಂದಿರುವುದರ ಫಲ ಎಂದು ಎಂದು ಹೇಳಲಾಗುತ್ತಿದೆ. ಈ ಭಾಗದಲ್ಲಿ ಮಂಗಗಳು ಸಾಕಷ್ಟು ಓಡಾಡುತ್ತಿದ್ದು, ಅವುಗಳು ಟ್ಯಾಂಕ್‌ ಮೇಲೆ ಕೂಡಾ ಹೋಗುತ್ತವೆ. ಈ ಸಂದರ್ಭದಲ್ಲಿ ಅವುಗಳಿಗೆ ಟ್ಯಾಂಕ್‌ನ ಒಳಗೆ ನೀರು ಕಂಡಿರಬೇಕು. ಮಳೆಗಾಲವಾದರೂ ಮಳೆ ಇಲ್ಲದೆ ನೀರು ಸಿಗದೆ ಪರದಾಡುತ್ತಿದ್ದ ಮಂಗಗಳು ನೀರು ನೋಡಿ ಖುಷಿಯಿಂದ ಜಿಗಿದಿರುವ ಸಾಧ್ಯತೆ ಇದೆ. ಆದರೆ, ಒಮ್ಮೆ ಟ್ಯಾಂಕ್‌ಗೆ ಜಿಗಿದ ಮೇಲೆ ಅವುಗಳಿಗೆ ಮೇರೆ ಬರಲು ಯಾವುದಾ ಆಧಾರಗಳು ಇರಲಿಲ್ಲ. ಹೀಗಾಗಿ ಅವುಗಳು ಅಲ್ಲೇ ನೀರಿನಲ್ಲಿ ಮುಳುಗಿ ಸತ್ತಿವೆ ಎನ್ನಲಾಗಿದೆ.

ನೀರಿನ ಟ್ಯಾಂಕ್‌ ಮತ್ತು ಅದರ ಮುಚ್ಚಳ ಹಾಕಲು ನಿರ್ಲಕ್ಷ್ಯ ವಹಿಸಿದ್ದ ಯಮನಾಳ ಗ್ರಾಮ ಪಂಚಾಯತಿ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಕಿಡಿ ಕಾರಿದ್ದಾರೆ. ಈ ಪ್ರದೇಶಯಮನಾಳ ಪಂಚಾಯತಿ ವ್ಯಾಪ್ತಿಗೆ ಬರುತ್ತಿದ್ದು, ಪಂಚಾಯತಿ ಪಿಡಿಓ ಹಾಗೂ ಸಿಬ್ಬಂದಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಂಚಾಯಿತಿ ವ್ಯಾಪ್ತಿಗಳಲ್ಲಿ ಈಗ ನೀರಿನ ಪೂರೈಕೆಯೇ ಕಷ್ಟವಾಗಿರುವ ಪರಿಸ್ಥಿತಿ ಇದೆ. ಮಳೆ ಇನ್ನೂ ಸರಿಯಾಗಿ ಬಂದಿಲ್ಲ. ಹಳ್ಳ, ನದಿಗಳು ತುಂಬಿಲ್ಲ. ಹೀಗಿರುವಾಗ ನೀರನ್ನು ಜಾಗರೂಕತೆಯಿಂದ ಬಳಸಬೇಕಾದ ಹೊತ್ತಿನಲ್ಲೇ ಇಂಥ ಅನಾಹುತ ಸಂಭವಿಸಿದೆ. ಈ ನಡುವೆ ಪಂಚಾಯಿತಿ ಸಿಬ್ಬಂದಿ ಕೂಡಾ ನಿಮಿಷ/ ಗಂಟೆ ಲೆಕ್ಕದಲ್ಲಿ ನೀರು ಬಿಡಬೇಕಾದ ಪರಿಸ್ಥಿತಿ ಇದ್ದು, ಟ್ಯಾಂಕ್‌ನ ಮೇಲೆ ಹೋಗಿ ಎಷ್ಟು ತುಂಬಿತು/ ಎಷ್ಟು ಬಿಡಬಹುದು ಎಂಬ ಲೆಕ್ಕಾಚಾರ ಮಾಡುತ್ತಿರುತ್ತಾರೆ. ಈ ಹೊತ್ತಿನಲ್ಲಿ ನೀರು ನೋಡಲು ಹೋಗಿ ಮುಚ್ಚಳ ಹಾಕಲು ಮರೆತು ಬಂದಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: Crocodile attack : ಕೃಷ್ಣಾ ನದಿಯಲ್ಲಿ ನೀರು ಖಾಲಿ; ಊರಿಗೆ ನುಗ್ಗಿದ ಮೊಸಳೆಯಿಂದ ಮೇಕೆ ಮೇಲೆ ದಾಳಿ

Exit mobile version