Site icon Vistara News

Death News : ಶಂಕಿತ ಉಗ್ರ ಮತೀನ್‌ ತಂದೆ ನಿಧನ; 26 ವರ್ಷ ಸೈನಿಕರಾಗಿದ್ದ ಮನ್ಸೂರ್‌ ಅಹಮದ್‌ ಇನ್ನಿಲ್ಲ

Abdul matin taha and his father mansoor

ಶಿವಮೊಗ್ಗ: ಶಿವಮೊಗ್ಗದ ಹಲವು ಯುವಕರಲ್ಲಿ ಧಾರ್ಮಿಕ ದ್ವೇಷ ಭಾವನೆ ಮೂಡಿಸಿ, ದೇಶ ದ್ರೋಹದ ಕೃತ್ಯಗಳಿಗೆ ಪ್ರೇರೇಪಿಸಿದ (Shivamogga Terror) ಆರೋಪ ಎದುರಿಸುತ್ತಿರುವ, ಹಾಲಿ ತಲೆ ಮರೆಸಿಕೊಂಡಿರುವ ಶಂಕಿತ ಉಗ್ರ ಅಬ್ದುಲ್‌ ಮತೀನ್‌ನ (Terrorist Abdul Mateen) ತಂದೆ, 26 ವರ್ಷ ದೇಶದ ಸೈನಿಕನಾಗಿ ಕೆಲಸ ಮಾಡಿದ್ದ ಮನ್ಸೂರ್ ಅಹಮದ್ (57) ಅವರು ನಿಧನರಾಗಿದ್ದಾರೆ (Death News).

ತೀರ್ಥಹಳ್ಳಿ ಸೊಪ್ಪುಗುಡ್ಡೆ ನಿವಾಸಿಯಾಗಿರುವ ಮನ್ಸೂರ್ ಅಹ್ಮದ್ ಅವರು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗಿ ಕೊನೆಯುಸಿರೆಳೆದಿದ್ದಾರೆ. 26 ವರ್ಷಗಳ ಕಾಲ ಸೈನಿಕನಾಗಿ ದೇಶಸೇವೆ ಮಾಡಿದ್ದ ಮನ್ಸೂರ್ ಅಹಮದ್ ಅವರಿಗೆ ಮೂರು ಮಕ್ಕಳಿದ್ದು, ಶಂಕಿತ ಉಗ್ರ ಮತೀನ್‌ ಮೊದಲ ಮಗ. ಅವರ ಇನ್ನೊಬ್ಬ ಪುತ್ರ ಮತ್ತು ಪುತ್ರಿ ಉತ್ತಮ ಶಿಕ್ಷಣ ಪಡೆದು ಸಜ್ಜನರಾಗಿದ್ದಾರೆ. ಮತೀನ್‌ ಕೂಡಾ ತಾಂತ್ರಿಕ ಶಿಕ್ಷಣ ಪಡೆದವನಾಗಿದ್ದು, ಬಳಿಕ ಉಗ್ರ ಜಾಲಕ್ಕೆ ಸಿಲುಕಿ ದೇಶದ್ರೋಹ ಕೃತ್ಯಕ್ಕೆ ಇಳಿದಿದ್ದ. ಅಬ್ದುಲ್‌ ಮತೀನ್‌ 2020ರಿಂದಲೇ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಎನ್ಐಎ ಬಹುಮಾನವನ್ನೂ ಘೋಷಿಸಿದೆ.

ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ ಪ್ರಕರಣದ ಪ್ರಧಾನ ಆರೋಪಿಯಾಗಿರುವ ಮೊಹಮ್ಮದ್ ಶಾರಿಕ್‌ ಮತ್ತು ಮತೀನ್‌ನ ಮನೆಗಳು ತೀರ್ಥಹಳ್ಳಿಯ ಸೊಪ್ಪು ಗುಡ್ಡೆಯಲ್ಲಿ ಅಕ್ಕಪಕ್ಕದಲ್ಲೇ ಇವೆ. ಮೊದಲು ಉಗ್ರ ಜಾಲವನ್ನು ಸೇರಿಕೊಂಡಿದ್ದ ಮತೀನ್‌ ಪಕ್ಕದ ಮನೆಯ ಶಾರಿಕ್‌ನನ್ನು ಕೂಡಾ ಸೆಳೆದುಕೊಂಡಿದ್ದ. ಶಾರಿಕ್‌ ಶಿವಮೊಗ್ಗ ಮೊಹಮ್ಮದ್‌ ಮೊಹಿಸಿನ್‌ ಮತ್ತು ಮಂಗಳೂರಿನಲ್ಲಿದ್ದ, ಮೂಲತಃ ಸೊಪ್ಪುಗುಡ್ಡೆಯವನೇ ಆದ ಮಾಜ್‌ ಮುನೀರ್‌ ಎಂಬಿಬ್ಬರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಟ್ರಯಲ್‌ ಬಾಂಬ್‌ ಬ್ಲಾಸ್ಟ್‌ ಸೇರಿದಂತೆ ಅನೇಕ ಕುಕೃತ್ಯಗಳನ್ನು ನಡೆಸಿದ್ದ. ಆತನ ಈ ಕುಕೃತ್ಯಗಳಿಗೆ ಬೆಂಗಾವಲಾಗಿ ನಿಂತವನು, ಸಹಾಯ ಮಾಡಿದವನು ಅಬ್ದುಲ್‌ ಮತೀನ್‌.

ಮಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದ‌ ಶಂಕಿತ ಮಾಜ್‌ ಮುನೀರ್‌ ಕೂಡಾ ಸೊಪ್ಪುಗುಡ್ಡೆಯವಾಗಿದ್ದು, ಅವನು ಉಗ್ರ ಕೃತ್ಯದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದ ಬಳಿಕ 2022ರ ಸೆಪ್ಟೆಂಬರ್‌ 23ರಂದು ಆತನ ತಂದೆ ಮೃತಪಟ್ಟಿದ್ದಾರೆ. ಮೊಹಮ್ಮದ್‌ ಶಾರಿಖ್‌ನ ತಂದೆ ಕೂಡಾ 2022ರಲ್ಲೇ ಮೃತಪಟ್ಟಿದ್ದರು. ಅವರ ಬಳಿಕ ಅವರ ಬಟ್ಟೆ ಅಂಗಡಿಯನ್ನು ಸ್ವಲ್ಪ ಕಾಲ ನೋಡಿಕೊಂಡಿದ್ದ ಶಾರಿಕ್‌ ಬಳಿಕ 2022ರ ಜುಲೈನಲ್ಲಿ ಬಟ್ಟೆ ತರಲೆಂದು ಮನೆ ಬಿಟ್ಟು ಹೋದವನು ನಾಪತ್ತೆಯಾಗಿದ್ದ. ಬಳಿಕ ಅವನು ಸಿಕ್ಕಿದ್ದು ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ನೊಂದಿಗೆ.

ಇದನ್ನೂ ಓದಿ; Shivamogga terror | ಶಿವಮೊಗ್ಗದಲ್ಲೂ ಬಾಂಬ್‌ ಸ್ಫೋಟಕ್ಕೆ ಸಂಚು ನಡೆಸಿದ್ದ ಐಸಿಸ್‌ ಉಗ್ರ ಮತೀನ್‌

ಎಂಥಾ ಅಪ್ಪನಿಗೆ ಎಂಥಾ ಮಗ? ಮತೀನ್‌ ಬಗ್ಗೆ ತಂದೆ ಏನು ಹೇಳಿದ್ದರು?

2022ರಲ್ಲಿ ಶಿವಮೊಗ್ಗದಲ್ಲಿ ಉಗ್ರ ಜಾಲ ಬಯಲಾದಾಗ, ಮತೀನ್‌ ಖಾನ್‌ನೇ ಮಾಸ್ಟರ್‌ ಮೈಂಡ್‌ ಎಂಬ ಸುದ್ದಿ ಹರಡಿದಾಗ ಮತೀನ್‌ ತಂದೆ ಮನ್ಸೂರ್‌ ಅಹಮದ್‌ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ್ದರು.

ʻʻಅವನು ನನ್ನ ದೊಡ್ಡ ಮಗ. ಅವನಿಗೆ 28 ವರ್ಷ. ನನ್ನ ಮತ್ತೊಬ್ಬ ಮಗ ಹೋಟೆಲ್‌ ಮ್ಯಾನೇಜ್ಮೆಂಟ್‌ ಮಾಡುತ್ತಿದ್ದಾನೆ. ಮಗಳು ಪಿಯುಸಿ. ಯತೀನ್‌ ಬಿಇ. ಮಾಡುತ್ತೇನೆ ಎಂದು ಬೆಂಗಳೂರಿಗೆ ಹೋಗಿದ್ದ. ಆದರೆ ವಿದ್ಯಾಭ್ಯಾಸ ಡಿಸ್‌ ಕಂಟಿನ್ಯೂ ಮಾಡಿದ್ದಾನೆ. ಎಂಜಿನಿಯರಿಂಗ್‌ ಅರ್ಧಕ್ಕೆ ಬಿಟ್ಟು ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ೨೦೨೦ರಲ್ಲಿ ಅವನು ಇರುವ ಜಾಗದಲ್ಲಿ ಏನೋ ಸಮಸ್ಯೆ ಆಯಿತು ಅಂತ ಗೊತ್ತಾಯಿತು. ಮತೀನ್ 2020 ರಿಂದ ಇಲ್ಲಿಯವರೆಗೂ ಎಲ್ಲಿದ್ದಾನೆಂದು ಗೊತ್ತಿಲ್ಲ. ಆವತ್ತಿನಿಂದ ನಮಗೆ ಯಾವುದೇ ಸಂಪರ್ಕದಲ್ಲಿ ಇಲ್ಲʼʼ

ʻʻನಾನು 26 ವರ್ಷ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದೇನೆ. ನನ್ನ ಮಗ ಹೀಗೆ ಆಗಿದ್ದಾನೆ ಅಂತ ಯೋಚನೆ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಅವನು ನಮ್ಮ ಮನೆಯ ಹಿರಿಮಗ. ನನ್ನ ಈ ವಯಸ್ಸಿನಲ್ಲಿ ಮನೆಗೆ ಆಧಾರವಾಗಿರಬೇಕಾಗಿದ್ದವನು. ಅವನಿಗೆ ಈ ಉಗ್ರರ ನಂಟು ಎಲ್ಲಿಂದ ಬಂತೋ ಗೊತ್ತಿಲ್ಲʼʼ ಎಂದು ಮನ್ಸೂರ್‌ ಅಹಮದ್‌ ಹೇಳಿದರು.

ʻʻಯಾರು ಬ್ರೇನ್‌ ವಾಷ್‌ ಮಾಡುತ್ತಾರೆ ಅಂತ ಗೊತ್ತಿಲ್ಲ. ಈಗ ಮೊಬೈಲ್‌ನಲ್ಲಿ ಯಾರ್ಯಾರು ಸಂಪರ್ಕಕ್ಕೆ ಸಿಗುತ್ತಾರೋ ಅವರೇನು ಹೇಳುತ್ತಾರೋ ಗೊತ್ತಿಲ್ಲ. ನಾವು ಅವನನ್ನು ಕಳೆದುಕೊಂಡಿದ್ದೇವೆ. ನೆಮ್ಮದಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ನೋವು ನಮಗೆ ಮತ್ತು ದೇವರಿಗೆ ಮಾತ್ರ ಗೊತ್ತುʼʼ ಎಂದು ನೋವಿನಿಂದ ಹೇಳಿಕೊಂಡರು ಮನ್ಸೂರ್‌.

ವಿದ್ಯಾವಂತ ಯುವಕರೇ ಹೀಗೇಕಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರೆಲ್ಲ ವಿದ್ಯಾವಂತರಾಗಿ ಮನೆಗೆ ಆಧಾರವಾಗಬೇಕು. ಅದರೆ, ಅವರೇ ಭಾಗವಾಗುತ್ತಿರುವುದು ನಮಗೆ ದಿಕ್ಕು ತೋಚದಂತಾಗಿದೆ ಎಂದರು. ಈಗ ಉಗ್ರ ಜಾಲದಲ್ಲಿದ್ದಾರೆಂದು ಗುರುತಿಸಲಾಗಿರುವ ಶಾರಿಕ್‌, ಯಾಸಿನ್‌, ಮಾಝ್‌ ಎಲ್ಲ ಸ್ನೇಹಿತರಾ ಎಂಬ ಪ್ರಶ್ನೆಗೆ, ಒಂದೇ ಊರಿನ ಮಕ್ಕಳು, ಸ್ನೇಹಿತರು ಹೌದೋ ಅಲ್ವೋ ಗೊತ್ತಿಲ್ಲ ಎಂದರು ಮನ್ಸೂರು.
ಬೆಳೆದು ಆಸರೆಯಾಗಿರಬೇಕಾಗಿದ್ದ ಮಕ್ಕಳು ಈ ರೀತಿ ದಿಕ್ಕು ತಪ್ಪಿ ಉಗ್ರರಾಗುತ್ತಿರುವುದು ಈ ಮಾಜಿ ಸೈನಿಕನ ಮನಸ್ಸಲ್ಲಿ ಗಾಢವಾದ ನೋವು ಉಂಟು ಮಾಡಿದ್ದು ಮಾತಿನ ಮಧ್ಯೆ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: Shivamogga terror | ಎಂಥಾ ಅಪ್ಪನಿಗೆ ಎಂಥಾ ಮಗ: ಐಸಿಸ್‌ ಉಗ್ರ ಮತೀನ್‌ನ ತಂದೆ 26 ವರ್ಷ ಸೇನೆಯಲ್ಲಿದ್ದರು!

Exit mobile version