ಹುಬ್ಬಳ್ಳಿ: ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಹತ್ಯೆ ಬೆನ್ನಲ್ಲೇ, ಪತ್ನಿ ಪುಷ್ಪಾ ಕಳೆದ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಪುಷ್ಪಾ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್‌ವೊಂದು (Death Note) ಪತ್ತೆಯಾಗಿದ್ದು, ತಮ್ಮ ಸಾವಿಗೆ ಕಾರಣರಾದವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.
ಪತ್ರದಲ್ಲಿ ಏನಿದೆ?
ನನ್ನ ಸಾವಿಗೆ ಮೇಟಿ ಕುಟುಂಬದವರು ಕಾರಣ. ಅದರಲ್ಲಿ ಪ್ರಮುಖರು ಯಲ್ಲಪ್ಪ ಶಂಕ್ರಪ್ಪ ಮೇಟಿ, ರುದ್ರಪ್ಪ ಶಂಕ್ರಪ್ಪ ಮೇಟಿ, ಕುಮಾರ್ ಮಹದೇವಪ್ಪ ಮೇಟಿ, ನವೀನ್ ಬಸಪ್ಪ ಮದ್ಲಿಂಗಣ್ಣನವರ ಮತ್ತೆ ಬಂಧಿತ ಏಳು ಆರೋಪಿಗಳು ಕಾರಣ ಎಂದು ಬರೆದಿದ್ದಾರೆ.
ಮುಂದುವರಿದು, ನನ್ನ ಗಂಡನನ್ನು ರಾಜಕೀಯ ವೈಷಮ್ಯದಿಂದ ಬಹಳ ಹೀನಾಯವಾಗಿ ಹತ್ಯೆಗೈದಿದ್ದಾರೆ. ಇದರಿಂದ ಬಹಳ ನೊಂದ ನನ್ನ ಕುಟುಂಬದವರು ಮತ್ತು ನಾನು ಪ್ರಮುಖ ಆರೋಪಿಗಳನ್ನು ಬಂಧಿಸಲು ಕಾನೂನಿಗೆ ಕ್ರಮವಾಗಿ ಎಷ್ಟೋ ಹೋರಾಟ ಮಾಡಿದೆವು. ಆದರೆ ಪೊಲೀಸರು ನಮಗೆ ಸರಿಯಾಗಿ ಸ್ಪಂದಿಸಿಲ್ಲ. ಆದ್ದರಿಂದ ತುಂಬಾ ನೊಂದಿದ್ದೇನೆ. ನಾನು ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸಲು ಆಗಲಿಲ್ಲ. ಇಂತಹ ದುಷ್ಟ ಸರ್ಕಾರದಲ್ಲಿ ಬದುಕಲು ಇಷ್ಟ ಇಲ್ಲ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಬೇಕು, ಜೀವಾವಧಿ ಶಿಕ್ಷೆ ಆಗದಿದ್ದಲ್ಲಿ ನನ್ನ ಕೊನೆಯ ವಿಧಿ ವಿಧಾನ ಮಾಡುವಂತಿಲ್ಲ ಎಂದು ಬರೆದಿದ್ದಾರೆ.
ಇತ್ತ ಡೆತ್ ನೋಟ್ ಪತ್ತೆಯಾಗಿರವುದರ ಹಿಂದೆಯೂ ಹಲವು ಅನುಮಾನ ಕಾಡುತ್ತಿದ್ದು, ತನಿಖಾಧಿಕಾರಿಗಳಿಗೆ ಪರಿಶೀಲನೆ ಮಾಡಲು ಸೂಚಿಸಿದ್ದೇನೆ ಎಂದು ಪೊಲೀಸ್ ಕಮೀಷನರ್ ಲಾಭೂರಾಮ್ ಮಾಹಿತಿ ನೀಡಿದ್ದಾರೆ.
ಪುಷ್ಪಾ ಮೃತದೇಹಕ್ಕೂ ಪಟ್ಟು ಹಿಡಿದಿದ್ದ ಎರಡು ಕುಟುಂಬ
ಪುಷ್ಪಾ ಮೃತದೇಹಕ್ಕಾಗಿ ಆಕೆಯ ಪತಿ ಕುಟುಂಬಸ್ಥರು ಹಾಗೂ ತವರು ಮನೆಯವರು ಪಟ್ಟು ಹಿಡಿದು, ಶವಾಗಾರದ ಮುಂದೆ ಹೈಡ್ರಾಮಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನ ನವನಗರದ (Hubballi News) ಸಂಬಂಧಿಕರ ಮನೆಯಲ್ಲಿ ಮನನೊಂದು ಪುಷ್ಪಾ ಸೆ.28ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪತಿ ದೀಪಕ್ ಪಟದಾರಿ ಹತ್ಯೆ ಘಟನೆ ಏನು?
ತಾಲೂಕಿನ ರಾಯನಾಳ ಬಳಿ ಜುಲೈ 4 ರಂದು ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಎಂಬಾತನ ಹತ್ಯೆಯಾಗಿತ್ತು. ದೀಪಕ್ ಮತ್ತು ಪುಷ್ಪಾ ಪ್ರೀತಿಸಿ ವಿವಾಹವಾಗಿದ್ದರು. ಇದರಿಂದ ತಮ್ಮ ಕುಟುಂಬದವರೇ ದೀಪಕ್ ಕೊಲೆ ಮಾಡಿರಬಹುದು ಎಂದು ಆರೋಪಿಸಿ ಪುಷ್ಪಾ, ಗಂಡನ ಕಡೆಯವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಪತಿಯ ಹತ್ಯೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಮೂಲಕ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದರು. ಈ ಸಂಬಂಧ ಪುಷ್ಪಾ ಪ್ರತಿದಿನ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದರು. ಕಳೆದ ವಾರವೇ ದೀಪಕ್ ಹತ್ಯೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಹುಬ್ಬಳ್ಳಿಯ ಸಂಬಂಧಿಯೊಬ್ಬರ ಮನೆಯಲ್ಲಿ ಪುಷ್ಪಾ ಸೆಪ್ಟೆಂಬರ್ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಕುಟುಂಬಸ್ಥರಿಗೆ ಪುಷ್ಪಾಳೇ ಬರೆದಿರುವ ಡೆತ್‌ನೋಟ್ ಪತ್ತೆಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ | Hubballi News | ಪುಷ್ಪಾ ಮೃತದೇಹಕ್ಕೆ ಎರಡೂ ಕುಟುಂಬಸ್ಥರ ಪಟ್ಟು; ಶವಾಗಾರದ ಎದುರು ಪೊಲೀಸ್ ಬಂದೋಬಸ್ತ್