ಆನೇಕಲ್: ತಾಲೂಕಿನ ಅತ್ತಿಬೆಲೆ ಗಡಿಭಾಗದ ಪಟಾಕಿ ಅಂಗಡಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ (Fire Accident) ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ 6 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಈ ಘಟನೆ ನೋಡಿದರೆ ಬಹಳ ದುಃಖ ಆಗುತ್ತದೆ. ಎಲ್ಲಾ ಯುವಕರು ಪಟಾಕಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಅಮಾಯಕರು ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪಟಾಕಿ ಲೋಡ್ ಬಂದಾಗ ಅವಘಡ ಸಂಭವಿಸಿದೆ. ಸುಮಾರು ಹತ್ತೊಂಬತ್ತು ಜನ ಕೆಲಸ ಮಾಡುತ್ತಿದ್ದ ಮಾಹಿತಿ ಇದೆ. ಆರು ಜನ ಆಸ್ಪತ್ರೆಯಲ್ಲಿ ಇದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಒಳಗಡೆ ಕೆಲವರು ಇರುವ ಶಂಕೆ ಇದೆ ಎಂದು ತಿಳಿಸಿದರು.
ಬಹಳ ಅಪಾಯಕಾರಿ ಪರಿಸ್ಥಿತಿ ಇದೆ. ಅಗ್ನಿ ಶಾಮಕ ದಳಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ. ಒಂದೇ ಫ್ಲೋರ್ ಆದರೂ ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಹರಸಾಹಸ ಪಟ್ಟಿದ್ದಾರೆ. ಎಲ್ಲರೂ ತಮಿಳುನಾಡು ಕಾರ್ಮಿಕರು ಎಂಬ ಮಾಹಿತಿ ಇದ್ದು, ಮೃತರ ಗುರುತು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಘಟನೆ ಹೇಗಾಯಿತು, ಏನೆಲ್ಲಾ ಲೋಪ ಇದೆ ಎಂಬುವುದರ ಬಗ್ಗೆ ತನಿಖೆ ಮಾಡಲಾಗುತ್ತದೆ. ಗೋಡೌನ್‌ಗೆ ಪರ್ಮಿಷನ್ ಇರಲಿಲ್ಲ.. ಅಂಗಡಿಗೆ ಪರ್ಮಿಷನ್ ಇತ್ತು ಎಂಬ ಮಾಹಿತಿ ಇದೆ. ಸದ್ಯ ಇದರ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | Fire Accident: 13 ಮಂದಿಯನ್ನು ಬಲಿ ಪಡೆದ ಅತ್ತಿಬೆಲೆ ಪಟಾಕಿ ಅಂಗಡಿ ಅಗ್ನಿ ದುರಂತ
ಎಲ್ಲಾ ಕಡೆಯೂ ಪರಿಶೀಲನೆ ಮಾಡಲಾಗುತ್ತದೆ. ಯಾರ ಜೀವವಾದರೂ ಮುಖ್ಯವೇ. ಇಡೀ ರಾಜ್ಯದಲ್ಲಿ ಸುರಕ್ಷತಾ ಕ್ರಮ ಅನುಸರಿಸಿ ಮಳಿಗೆ ತೆರೆಯಲು ಸೂಚನೆ ನೀಡಲಾಗುತ್ತದೆ. ಎಲ್ಲೆಲ್ಲಿ ಲೈಸೆನ್ಸ್ , ಎಲ್ಲೆಲ್ಲಿ ಸ್ಟಾಕ್ ಇದೆಯೋ ಅಂತಹ ಕಡೆ ಅನಾಹುತ ಘಟನೆಗಳು ನಡೆಯದಂತೆ ನೋಡಿಕೊಳ್ಳೋಕೆ ಮುಂಜಾಗ್ರತೆ ವಹಿಸಲಾಗುತ್ತದೆ. ಎಲ್ಲಾ ಕಡೆ ಅಧಿಕಾರಿಗಳಿಗೂ ಮಾಹಿತಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ. ಮುಖ್ಯಮಂತ್ರಿಗಳ ನಿಧಿಯಿಂದ ಒಬ್ಬರಿಗೆ 5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಅಗ್ನಿಶಾಮಕ ದಳದಿಂದ ಮುಂದುವರಿದ ಕಾರ್ಯಾಚರಣೆ
ಅತ್ತಿಬೆಲೆ ಪಟಾಕಿ ಅಂಗಡಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ (Fire Accident) ಈಗಾಗಲೇ 13 ಮಂದಿ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ 6 ಮಂದಿಯನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಘಟನೆ ನಡೆದಾಗ ಪಟಾಕಿ ಅಂಗಡಿಯಲ್ಲಿ 20ಕ್ಕೂ ಹೆಚ್ಚು ಕಾರ್ಮಿಕರು ಇದ್ದರು ಎನ್ನಲಾಗಿದೆ. ಮೃತ ದೇಹಗಳನ್ನು ಹೊರತೆಗೆಯುವ ಕೆಲಸ ನಡೆಯುತ್ತಿದ್ದು, ಗೋಡೌನ್ ಒಳ ಭಾಗದಲ್ಲಿ ಇನ್ನೂ 5 ಜನ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಅಗ್ನಿಶಾಮಕ ದಳದಿಂದ ಹುಡುಕಾಟ ಮುಂದುವರಿದಿದೆ.
ದೀಪಾವಳಿ ಹಬ್ಬಕ್ಕಾಗಿ ಬಾಲಾಜಿ ಕ್ರ್ಯಾಕರ್ಸ್ ಎಂಬ ಮಳಿಗೆಯಲ್ಲಿ ಹೆಚ್ಚು ಪಟಾಕಿಗಳನ್ನು ಶೇಖರಣೆ ಮಾಡಲಾಗಿತ್ತು. ಆದರೆ, ಏಕಾಏಕಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ದುರಂತ ಸಂಭವಿಸಿದೆ. ಪಟಾಕಿ ಬಾಕ್ಸ್‌ಗಳನ್ನು ತಂದು ಲಾರಿಯಿಂದ ಅನ್‌ಲೋಡ್ ಮಾಡುವಾಗ ಬೆಂಕಿ ಅವಘಡ ಸಂಭವಿಸಿದೆ.