ಬೆಂಗಳೂರು: ಕಳೆದ ವಿಧಾನಸಬೆ ಚುನಾವಣೆಯಲ್ಲಿ ಪ್ರಭಾವಿಸಿದ್ದ ಟಿಪ್ಪು ಜಯಂತಿ ಆಚರಣೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನಡೆ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು ನೀವೇ ಸಿಎಂ ಆದರೆ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆಯನ್ನು ಮರುಜಾರಿ ಮಾಡುತ್ತೀರ? ಎಂಬ ಪ್ರಶ್ನೆಗೆ ಜಾಣ ಉತ್ತರ ನೀಡಿದ್ದಾರೆ.
ಇಂಗ್ಲಿಷ್ ಸುದ್ದಿವಾಹಿನಿ ʼಇಂಡಿಯಾ ಟುಡೆʼ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಿದ್ದಾರೆ. ಟಿಪ್ಪು ಸುಲ್ತಾನ್ ಹಿಂದು ವಿರೋಧಿ ಎಂಬುದು ಸುಳ್ಳು ಹಾಗೂ ಬಿಜೆಪಿಯ ರಾಜಕೀಯ ತಂತ್ರ. ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿರಲಿಲ್ಲವೇ? ಬ್ರಿಟಿಷ್ ವಿರುದ್ಧ ಅನೇಕ ಮೈಸೂರು ಯುದ್ಧಗಳು ನಡೆದಿಲ್ಲವೇ? ಆತ ದೇವಸ್ಥಾನಗಳನ್ನು ನಾಶ ಮಾಡಿದ ಎನ್ನುವುದೂ ಸುಳ್ಳು ಎಂದಿದ್ದಾರೆ.
ನೀವು ಮತ್ತೆ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆಯನ್ನು ಮರು ಜಾರಿ ಮಾಡುತ್ತೀರ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಅದನ್ನು ಹೇಳಲು ಸಾಧ್ಯವಿಲ್ಲ. ನಾನು ಸರ್ವಾಧಿಕಾರಿ ಅಲ್ಲ, ನಾನು ಪ್ರಜಾಪ್ರಭುತ್ವವಾದಿ. ನಾವು ಅದನ್ನು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.
ಸಮುದಾಯದ ಹಂತದಲ್ಲಿ ಆಚರಣೆ ಮಾಡಿಕೊಂಡು ಬರುತ್ತಿದ್ದ ಟಿಪ್ಪು ಜಯಂತಿಯನ್ನು 2015ರಿಂದ ಸರ್ಕಾರದ ಅಧಿಕೃತ ಕಾರ್ಯಕ್ರಮವಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದಾಗಿನಿಂದ ವಿವಾದ ಎದ್ದಿತ್ತು. ಕನ್ನಡ ವಿರೋಧಿ, ಟಿಪ್ಪು ವಿರೋಧಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುವುದು ಸರಿಯಲ್ಲ ಎಂದು ಬಿಜೆಪಿ ಆಕ್ಷೇಪಿಸಿತ್ತು. ಇದು 2018ರ ಚುನಾವಣಾ ವಿಷಯವೂ ಆಗಿ ಬಿಜೆಪಿಗೆ ಹಿಂದು ಮತಗಳ ಕ್ರೋಢೀಕರಣಕ್ಕೆ ಕಾರಣವಾಗಿತ್ತು. ಇದೀಗ ಅಪಾಯವನ್ನು ಅರಿತ ಸಿದ್ದರಾಮಯ್ಯ ಎಚ್ಚರಿಕೆಯ ಮಾತನ್ನಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದೇ ಇಂಡಿಯಾ ಟುಟೇ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಹಿಜಾಬ್ ಎನ್ನುವುದು ವಿಚಾರವೇ ಅಲ್ಲ. ಅವುಗಳು ಅನೇಕ ಸಮಯದಿಂದ ನಡೆದುಕೊಂಡು ಬಂದಿರುವ ನಡವಳಿಕೆ ಎಂದಷ್ಟೆ ನಾನು ಹೇಳಿದ್ದೇನೆ. ನಾನು ಭ್ರಮೆಯಲ್ಲಿಲ್ಲ. ಜಾತಿ ಮತದ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಹಿಂದು ನಾನು ಎಂದಿದ್ದಾರೆ.
ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿದ್ದರು ಎಂಬ ಆರೋಪ ಸುಳ್ಳು ಎಂದಿರುವ ಸಿದ್ದರಾಮಯ್ಯ, ನಮ್ಮ ಸರ್ಕಾರದ ಅವಧಿಯಲ್ಲಿ ವಿಶ್ವನಾಥ ಶೆಟ್ಟಿ ಲೋಕಾಯುಕ್ತ ಆಗಿದ್ದರು. ನಾವು ಎಸಿಬಿ ಸ್ಥಾಪನೆ ಮಾಡಿದ್ದೆವು ಅಷ್ಟೆ ಎಂದಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಚೇರಿಯಲ್ಲಿ ಟಿಪ್ಪು ಜಯಂತಿ; ಸರ್ಕಾರದ ನಿಯಮ ಉಲ್ಲಂಘಿಸಿ ಆಚರಣೆ