Site icon Vistara News

ದಾಖಲೆ ಇಲ್ಲದಿದ್ದರೂ ಕೊಳಚೆ ಪ್ರದೇಶವೆಂದು 6 ವಾರ್ಡ್‌ಗಳ ಘೋಷಣೆ; ಹಕ್ಕುಪತ್ರ ನೀಡಿ ಬಡ ಜನರಿಗೆ ಮೋಸ: ಧೀರಜ್‌ ತಿನೇಕರ್

Declaration of 6 wards as slums even if there is no record says Dheeraj Tinekar

ಯಲ್ಲಾಪುರ: ಪಟ್ಟಣದ 6 ವಾರ್ಡ್‌ಗಳನ್ನು ಯಾವುದೇ ಪೂರಕ ದಾಖಲೆಗಳಿಲ್ಲದಿದ್ದರೂ ಕೊಳಚೆ ಎಂದು ಘೋಷಣೆ ಮಾಡಲಾಗಿದ್ದು, ಬೋಗಸ್ ಹಕ್ಕುಪತ್ರಗಳನ್ನು ವಿತರಿಸಿ, ಅಲ್ಲಿನ ಬಡ ಜನರಿಗೆ ಮೋಸ ಮಾಡಲಾಗಿದೆ. ಚುನಾವಣೆಯಲ್ಲಿ ಮತ ಪಡೆಯುವ ಹಿನ್ನೆಲೆಯಿಂದ ತರಾತುರಿಯಲ್ಲಿ, ಹಕ್ಕು ಪತ್ರ ನೀಡಿ ಜನರಿಂದ ಹಣ ವಸೂಲಿ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಧೀರಜ್‌ ತಿನೇಕರ್ ಆಪಾದಿಸಿದ್ದಾರೆ.‌

ಮಂಗಳವಾರ ಪಟ್ಟಣದ ಸಾರ್ವಜನಿಕ ಸೇವಾ ಕೇಂದ್ರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಚಿವ ಶಿವರಾಮ್‌ ಹೆಬ್ಬಾರ್ ಅವರು ಪಟ್ಟಣದ ಗಣಪತಿ ಗಲ್ಲಿ, ಕಾಳಮ್ಮನಗರ, ಉದ್ಯಮನಗರ, ರವೀಂದ್ರನಗರ, ಮಂಜುನಾಥ ನಗರ ಹಾಗೂ ನೂತನ ನಗರದ ಸುಮಾರು 3500 ಕುಟುಂಬಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹಕ್ಕುಪತ್ರವನ್ನು ವಿತರಿಸಿದ್ದರು. ಇದಕ್ಕಾಗಿ ಪ್ರತಿ ಕುಟುಂಬದಿಂದ 2300 ರೂಪಾಯಿಯಂತೆ ಲಕ್ಷಾಂತರ ರೂಪಾಯಿ ಹಣವನ್ನು ಸಹ ವಸೂಲಿ ಮಾಡಲಾಗಿತ್ತು. ಆದರೆ ಈ ಹಕ್ಕುಪತ್ರ ಮಾನ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಧೀರಜ್‌ ತಿನೇಕರ್‌ ಹೇಳಿದ್ದಾರೆ.

ಇದನ್ನೂ ಓದಿ: Karnataka Election: ಮೇ 4ರಂದು ಒಂದೇ ದಿನ 7 ಕಡೆ ಬಿ.ವೈ. ವಿಜಯೇಂದ್ರ ಪ್ರಚಾರ; ಎಲ್ಲೆಲ್ಲಿ ಮತಬೇಟೆ? ಇಲ್ಲಿದೆ ಫುಲ್‌ ಡಿಟೇಲ್ಸ್

ಕೊಳಚೆ ನಿರ್ಮೂಲನಾ ಮಂಡಳಿಯ ನಿಯಮಗಳ ಪ್ರಕಾರ, ಕಂದಾಯ ಇಲಾಖೆಯ ಮಾಲೀಕತ್ವದ ಜಾಗವು ಕೊಳಚೆ ಪ್ರದೇಶವಾಗಿದ್ದಲ್ಲಿ, ಅಲ್ಲಿನ ಜಾಗವನ್ನು ಅಭಿವೃದ್ಧಿಪಡಿಸಿ, ಮನೆ ಕಟ್ಟಿಸಿಕೊಟ್ಟು ನಂತರ ಆ ಜಾಗದ ಹಕ್ಕುಪತ್ರವನ್ನು ಪಟ್ಟಣ ಪಂಚಾತಿಯಿತಿಗೆ ನೀಡಬೇಕು. ಆದರೆ, ಸಚಿವರು ಸಾರ್ವಜನಿಕವಾಗಿ ವಿತರಿಸಿದ ಹಕ್ಕುಪತ್ರದಲ್ಲಿ ಕೇವಲ ಎರಡು ಅಧಿಕಾರಿಗಳ ಸಹಿ ಬಿಟ್ಟರೆ, ಸರ್ಕಾರದ ಯಾವುದೇ ಅಧಿಕೃತ ಮುದ್ರೆ ಇರುವುದಿಲ್ಲ. ಮುಖ್ಯಮಂತ್ರಿಗಳು, ವಸತಿ ಸಚಿವರು ಹಾಗೂ ಕಾರ್ಮಿಕ ಸಚಿವರ ಫೋಟೊವನ್ನು ಮುದ್ರಿಸಲಾಗಿದೆ ಎಂದು ಧೀರಜ್‌ ತಿನೇಕರ್‌ ಆಪಾದಿಸಿದ್ದಾರೆ.

ಸರ್ಕಾರ ಬದಲಾದರೆ ಈ ಹಕ್ಕುಪತ್ರಗಳಿಗೆ ಇದೆಯೇ ಮಾನ್ಯತೇ?

ಈ ಬಾರಿಯ ಚುನಾವಣೆಯಲ್ಲಿ ಒಂದು ವೇಳೆ ಸರ್ಕಾರ ಬದಲಾದರೆ, ಈ ಹಕ್ಕು ಪತ್ರಗಳಿಗೆ ಮಾನ್ಯತೆ ಇರುತ್ತದೇಯೇ ಎಂಬುದು ನನ್ನ ಪ್ರಶ್ನೆಯಾಗಿದೆ. ಕಾನೂನು ಬಾಹಿರವಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಮಾಡಲಾಗಿದೆ. ಈ ಕುರಿತು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದಲ್ಲಿ ಉತ್ತರ ನೀಡುತ್ತಿಲ್ಲ. ಕಂದಾಯ ಇಲಾಖೆಯ ಜಾಗವನ್ನು ಹೊರತುಪಡಿಸಿ, ಅರಣ್ಯ ಭಾಗದ ಜನರ ಹಣವನ್ನು ಹಿಂದಿರುಗಿಸಬೇಕು. ಇಲ್ಲದ ಪಕ್ಷದಲ್ಲಿ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಧೀರಜ್‌ ತಿನೇಕರ್‌ ಎಚ್ಚರಿಕೆ ನೀಡಿದ್ದಾರೆ.

ಯಾರೊಬ್ಬರಿಗೂ ರಿಜಿಸ್ಟರ್ ಮಾಡಿಸಿಕೊಟ್ಟಿಲ್ಲ

ನಾಗರಿಕ ಸೇವಾ ಕೇಂದ್ರದ ಸದಸ್ಯ ಪ್ರಕಾಶ ಕಟ್ಟಿಮನಿ ಮಾತನಾಡಿ, ಹಕ್ಕುಪತ್ರ ನೀಡುವ ಸಂದರ್ಭದಲ್ಲಿ ಸಚಿವರು 1 ತಿಂಗಳೊಳಗಾಗಿ ಜಾಗವನ್ನು ರಿಜಿಸ್ಟರ್ ಮಾಡಿ, ಫಾರ್ಮ ನಂ. 03 ಅನ್ನೂ ನೀಡುವ ಭರವಸೆ ನೀಡಿದ್ದರು. ಹಕ್ಕು ಪತ್ರ ನೀಡಿ ತಿಂಗಳುಗಳೇ ಕಳೆದರೂ ಈ ವರೆಗೂ ಯಾರೊಬ್ಬರಿಗೂ ಸಹ ರಿಜಿಸ್ಟರ್ ಮಾಡಿಸಿಕೊಟ್ಟಿಲ್ಲ ಎಂದರು.

ಇದನ್ನೂ ಓದಿ: Karnataka Election 2023: ಪ್ರಧಾನಿ ಮೋದಿ ಭಾಷಣದಲ್ಲಿ ‘ಜೈ ಬಜರಂಗಬಲಿ’ ಸಂಚಲನ!

ಎಂ.ಜಿ. ಭಟ್ ಮಾತನಾಡಿ, ನಾವು ಆರ್‌ಟಿಐ ಅಡಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದ್ದೆವು. ಆಗ ಅವರು ಬಡವರಿಂದ ಹಕ್ಕು ಪತ್ರವನ್ನು ಅಧಿಕಾರಿಗಳ ಸಹಿ ಆಗಿಲ್ಲ ಎಂಬ ನೆಪದಲ್ಲಿ ಹಿಂಪಡೆದಿದ್ದಾರೆ. ಹಕ್ಕು ಪತ್ರ ಹಿಂಪಡೆಯುವಾಗ ಬಡವರ ಹಣವನ್ನು ಸಹ ಹಿಂದಿರುಗಿಸಬೇಕಿತ್ತು. ಆದರೆ, ಆ ಕೆಲಸವನ್ನು ಮಾಡಲಾಗಿಲ್ಲ ಎಂದು ಆರೋಪ ಮಾಡಿದರು. ಈ ಸಂದರ್ಭದಲ್ಲಿ ವಕೀಲರಾದ ಕೆ.ಎನ್. ಭಟ್ ಇದ್ದರು.

Exit mobile version