Site icon Vistara News

Karnataka Politics: ಎದುರಾಳಿ ವಿರುದ್ಧ ಏಕವಚನದ ಮಟ್ಟಕ್ಕೆ ಇಳಿದ ಕಾಂಗ್ರೆಸ್‌-ಬಿಜೆಪಿ ಜಾಲತಾಣ ಸಂವಾದ!

Congress poster on BJP

#image_title

ಬೆಂಗಳೂರು: ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪ ಸಹಜವಾದುದ್ದಾದರೂ ಪರಸ್ಪರರ ನಾಯಕರ ವಿರುದ್ಧ ಏಕವಚನದ ಪ್ರಯೋಗ ಮಾಡುವ ಮಟ್ಟಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗಗಳು ಇಳಿದಿವೆ.

ಚುನಾವಣೆ ಫಲಿತಾಂಶದ ನಂತರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ವಾಕ್ಸಮರ ನಡೆದೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ತುಸು ಹೆಚ್ಚಾಗಿದೆ. ಕಾಂಗ್ರೆಸ್‌ ವಿರುದ್ಧವಷ್ಟೆ ಅಲ್ಲದೆ ಸ್ವತಃ ಬಿಜೆಪಿಯ ಮಾಜಿ ಸಿಎಂಗಳಾದ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ವಿರುದ್ಧ ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸುತ್ತಿರುವುದು ಕಾಂಗ್ರೆಸ್‌ಗೆ ಅಸ್ತ್ರ ನೀಡಿದೆ.

ಇದೇ ಮಾತನ್ನು ಮುಂದುವರಿಸಿರುವ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಖಾತೆಯ ನಿರ್ವಾಹಕರು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ವಿರುದ್ಧ ಏಕವಚನದಲ್ಲಿ ಪೋಸ್ಟರ್‌ ಬಿಡುಗಡೆ ಮಾಡಿದೆ.

ಬಿಎಲ್ ಸಂತೋಷನ ಮೌತ್ ಪೀಸ್ ಪ್ರತಾಫ್‌ ಸಿಂಹ ಅವರೇ, ನಮ್ಮ ಸರ್ಕಾರದ, ನಮ್ಮ ಸಿಎಂ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತ ನಿಮ್ಮ ವಿರೋಧ ಪಕ್ಷದ ನಾಯಕನನ್ನು ಮೊದಲು ಆಯ್ಕೆ ಮಾಡಿಕೊಳ್ಳಿ. ಮೈಸೂರಿನ ಸಂಸದನಾಗಿ ಜಿಲ್ಲೆಯಲ್ಲಿ ಎಷ್ಟು ಬಿಜೆಪಿ ಶಾಸಕರನ್ನು ಗೆಲ್ಲಿಸಿದ್ದೀರಿ? ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣರಾದ ಬಿ.ಎಲ್ ಸಂತೋಷ್ ಅವರನ್ನು ಟೀಕಿಸುವ ಮಿನಿಮಮ್ ದಮ್ಮು ತಾಕತ್ತು ಇದೆಯೇ? ಎಂದು ಪ್ರಶ್ನಿಸಿದೆ. ತನ್ನ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್‌ ಆಯುಕ್ತರಿಗೆ ಬಿಜೆಪಿ ದೂರು ನೀಡಿದೆ. ಆದರೆ ಬಿಜೆಪಿ ಸಾಮಾಜಿಕ ಜಾಲತಾಣವೇನೂ ಕಡಿಮೆ ಇಲ್ಲದಂತೆ ಕಾಂಗ್ರೆಸ್‌ ವಿರುದ್ಧ ಪೋಸ್ಟ್‌ ಮಾಡಿದೆ.

ಸುರ್ಜೆವಾಲ ಏಜೆಂಟ್‌ ಎಂದ ಬಿಜೆಪಿ
ಒಂದೆಡೆ ಬಿ.ಎಲ್‌. ಸಂತೋಷ್‌ ಅವರನ್ನು ಏಕವಚನದಲ್ಲಿ ಕಾಂಗ್ರೆಸ್‌ ನಿಂದಿಸಿದ್ದರೆ ಇತ್ತ ಬಿಜೆಪಿಯು, ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲ ಅವರನ್ನು ಕಲೆಕ್ಷನ್‌ ಏಜೆಂಟ್‌ ಎಂದಿದೆ.

ಕರ್ನಾಟಕದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಒಂದು ಟ್ವೀಟ್‌ ಮಾಡಿದ್ದರು. “ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಫೇಕ್ ನ್ಯೂಸ್‌ಗಳನ್ನು ಹರಡುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಕಾನೂನು ರೀತ್ಯ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ.. ಎಚ್ಚರಿಕೆ..!! ರಚನಾತ್ಮಕ ಟೀಕೆಗಳಿಗೆ ನಾವು ಮುಕ್ತರಿದ್ದೇವೆ, ಆದರೆ ಸುಳ್ಳು ಸುದ್ದಿಗಳ ಸೃಷ್ಟಿ ಮತ್ತು ಹರಡುವಿಕೆಯನ್ನು ನಾವು ಖಂಡಿತಾ ಸಹಿಸುವುದಿಲ್ಲ.” ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, “ಅರೇ ಸಿದ್ದರಾಮಯ್ಯ ರವರೇ, ನಿಮಗೆ ಇಷ್ಟೊಂದು ಭಯವೇಕೆ? ಅಂದು ನಿಮ್ಮ ಮತ್ತು ನಿಮ್ಮ ಸರ್ಕಾರದ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ಲೋಕಾಯುಕ್ತಕ್ಕೆ ಬೀಗ ಜಡಿದಿದ್ದೀರಿ. ಇಂದು ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಗ್ಯಾರಂಟಿಗಳನ್ನು, ನಿಮ್ಮ ತುಘಲಕ್ ನಡೆಯನ್ನು ಪ್ರಶ್ನಿಸುವ, ಪ್ರತಿಭಟಿಸುವ, ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದೀರಿ. ಎಟಿಎಂ ಸರ್ಕಾರದ ಲೂಟಿಕೋರತನ ಬೀದಿಗೆ ಬರಬಾರದೆಂದು ಕಲೆಕ್ಷನ್ ಏಜೆಂಟ್ ರಣದೀಪ್‌ ಸಿಂಗ್‌ ಸುರ್ಜೆವಾಲ ಕೊಟ್ಟ ಉಪಾಯವೇ ಇದು?” ಎಂದು ಹೇಳಿದೆ.

ಇದನ್ನೂ ಓದಿ: Adipurush Movie : ಆದಿಪುರುಷ ಸಿನಿಮಾ ಮಾಡಿದರವನ್ನು ಸುಟ್ಟು ಹಾಕಬೇಕು ಎಂದ ಭೀಷ್ಮ!


Exit mobile version