ಬೆಂಗಳೂರು: ದೀಪಾವಳಿಯ (Deepawali 2022) ಸಡಗರ ಎಲ್ಲ ಕಡೆ ಕಾಣುತ್ತಿದ್ದು, ಜನರು ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಆದರೆ, ಇದೇ ಹೊತ್ತಿನಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿರುವ ಗುಂಡಿಗಳು ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿವೆ. ಅನೇಕ ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೃದಯಭಾಗದಲ್ಲಿರುವ ಮೆಜೆಸ್ಟಿಕ್ ಬಸ್ ನಿಲ್ದಾಣದ ಎದುರಿನ ರಸ್ತೆಯ ಗುಂಡಿಗಳ ಮಧ್ಯೆ ದೀಪವನ್ನು ಹಚ್ಚುವ ಮೂಲಕ ವಂದೇ ಮಾತರಂ ಸಂಘಟನೆಯವರು ವಿನೂತನವಾಗಿ ಪ್ರತಿಭಟಿಸಿ ದೀಪಾವಳಿಯನ್ನು ಆಚರಿಸಿದ್ದಾರೆ.
ರಸ್ತೆ ಗುಂಡಿಗಳಲ್ಲಿ ಹಣತೆಗಳನ್ನು ಇಟ್ಟು ದೀಪಗಳನ್ನು ಹಚ್ಚಿ, ಹೂಕುಂಡ ಪಟಾಕಿ ಸಿಡಿಸುವ ಮೂಲಕ ತಕ್ಷಣವೇ ಗುಂಡಿ ಮುಚ್ಚುವ ಕೆಲಸವನ್ನು ಮಾಡಿ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಲಾಗಿದೆ. ಈ ರಸ್ತೆ ಗುಂಡಿಗಳು ವಾಹನ ಸವಾರರನ್ನು ಯಮನಂತೆ ಕಾಡುತ್ತಿವೆ. ಬೆಂಗಳೂರಿನ ರಸ್ತೆಗಲ್ಲಿ ಸಂಚಾರ ಮಾಡುವುದೇ ಕಷ್ಟಕರವಾಗಿದೆ. ಸಾಲು ಸಾಲು ಅಪಘಾತಗಳು ಸಂಭವಿಸುತ್ತಲೇ ಇವೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಬಿಬಿಎಂಪಿ ಅಂಧಕಾರ ತೊಲಗಲಿ
ವಂದೆ ಮಾತರಂ ಸಂಘಟನೆ ವತಿಯಿಂದ ಈ ವಿಭಿನ್ನ ಪ್ರತಿಭಟನೆ ನಡೆದಿದ್ದು, ಗುಂಡಿಗಳಲ್ಲಿ ದೀಪ ಹಚ್ಚುವ ಮೂಲಕ ಇನ್ನಾದರೂ ಬಿಬಿಎಂಪಿ ಎಚ್ಚೆತ್ತು ಗುಂಡಿಯನ್ನು ಮುಚ್ಚಲಿ, ಬಿಬಿಎಂಪಿ ಅಧಿಕಾರಿಗಳಲ್ಲಿರುವ ಅಂಧಕಾರ ತೊಲಗಲಿ ಎಂಬ ಘೋಷಣೆ ಕೂಗಿ ಆಕ್ರೋಶವನ್ನು ಹೊರಹಾಕಿದರು.
ಇದನ್ನೂ ಓದಿ |Bengaluru Potholes | ಬೆಂಗಳೂರು ರಸ್ತೆ ಗುಂಡಿ ವಿರುದ್ಧ ಕಾಂಗ್ರೆಸ್ ಕಿಡಿ; ಸಿಎಂ ಮನೆಗೆ ಮುತ್ತಿಗೆ ಯತ್ನ
ರಸ್ತೆಗುಂಡಿಗೆ ದೀಪವನ್ನು ಹಚ್ಚಿ, ರಸ್ತೆ ಗುಂಡಿಗಳಲ್ಳೇ ಕುಳಿತು ಪ್ರತಿಭಟನೆಕಾರರು ಪ್ರತಿಭಟನೆ ನಡೆಸಿದ್ದಾರೆ. ಗುಂಡಿಗಳಲ್ಲೇ ಹೂಕುಂಡ ಪಟಾಕಿಗಳನ್ನು ಸಿಡಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ತಕ್ಷಣವೇ ಗುಂಡಿ ಮುಚ್ಚಬೇಕು. ದೀಪಾವಳಿ ಹಬ್ಬ ಆಚರಣೆ ಮಾಡಲು ನಮಗೆ ಬಹಳ ನೋವಾಗಿದೆ. ಸಾಕಷ್ಟು ಸಾರ್ವಜನಿಕರು ಓಡಾಟ ನಡೆಸುವ ಮೆಜೆಸ್ಟಿಕ್ ರಸ್ತೆಯ ಪರಿಸ್ಥಿತಿಯೇ ಹೀಗಿದೆ ಎಂದರೆ ಇನ್ನು ಬೆಂಗಳೂರಿನ ಬೇರೆ ರಸ್ತೆಗಳ ಪರಿಸ್ಥಿತಿ ಹೇಗಿದೆ ಎಂದು ವಂದೇ ಮಾತರಂ ಸಂಘಟನೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಮಾಧ್ಯಮಗಳಲ್ಲಿ ಗುಂಡಿಗಳ ಬಗ್ಗೆ ಪ್ರತಿ ದಿನ ವರದಿಯಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಸೇರಿದಂತೆ ಇನ್ನಿತರ ವೇದಿಕೆಗಳಲ್ಲಿ ಜನರೂ ಸರ್ಕಾರವನ್ನು ದೂಷಣೆ ಮಾಡುತ್ತಿದ್ದಾರೆ. ಜನರಿಂದ ಕಟ್ಟಿಸಿಕೊಳ್ಳುವ ತೆರಿಗೆ ಹಣ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | Pothole | ಹದಗೆಟ್ಟ ರಸ್ತೆ ಗುಂಡಿಗೆ ಮುರಿದು ಹೋಯ್ತು ದೇಹದ ಮೂಳೆ; ವಾಹನ ಸವಾರ ಈಗ ವ್ಹೀಲ್ ಚೇರ್ ಮೇಲೆ ನಿತ್ರಾಣ