ಬಾಗಲಕೋಟೆ: ಸದಾ ಕಾಲ ಒಂದಲ್ಲ ಒಂದು ವಿಷಯಕ್ಕೆ ಜಗಳ ಮಾಡುತ್ತಿದ್ದ, ಹೊಡೆಯುತ್ತಿದ್ದ, ಹೆಂಡತಿ-ಮಕ್ಕಳನ್ನು ನಿರಂತರವಾಗಿ ಹಿಂಸಿಸುತ್ತಿದ್ದ ಮುಧೋಳ ನಗರದ ಪರಶುರಾಮ ಕುಳಲಿಯ(೫೪) ಭಯಾನಕ ಕೊಲೆ ದೇಶಾದ್ಯಂತ ಸದ್ದು ಮಾಡಿದೆ. ಈ ನಡುವೆ, ಈ ಕೊಲೆಯ ಹಿನ್ನೆಲೆ, ಬಳಿಕ ಏನೇನಾಯಿತು, ಕೊಲೆ ಮಾಡಿ ದೇಹವನ್ನು ೩೫ ಪೀಸ್ ಮಾಡಿ ಬೋರ್‌ವೆಲ್ ಪೈಪಿನ ಒಳಗೆ ತುಂಬಿದ್ದ ಈ ಪ್ರಕರಣ ಹೊರಬಂದಿದ್ದು ಹೇಗೆ?
ಈ ಬಗ್ಗೆ ವಿಠಲ ಕುಳಲಿಯ ತಾಯಿ ಸರಸ್ವತಿ ಮತ್ತು ಅಣ್ಣ ಆನಂದ ಹೇಳಿಕೆ ನೀಡಿದ್ದಾರೆ. ಇವರ ಮಾತುಗಳಲ್ಲಿ ಪರಶುರಾಮ್ ಕೊಳಲಿಯ ಸಾವಿನ ಬಗ್ಗೆ ಯಾವುದೇ ಬೇಸರ ಇದ್ದಂತೆ ಕಾಣುತ್ತಿಲ್ಲ.
ಪರಶುರಾಮ್ ಕೊಳಲಿ ಕುಟುಂಬ ವಾಸವಾಗಿರುವುದು ಮುಧೋಳ ಪಟ್ಟಣದ ಒಂದು ಮನೆಯಲ್ಲಿ. ಪರಶುರಾಮ್ ಗೌಂಡಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ಪತ್ನಿ ಸರಸ್ವತಿ, ಹಿರಿಯ ಮಗ ಆನಂದ್ ಮತ್ತು ಕಿರಿಯ ಮಗ ವಿಠಲ ಕುಳಲಿ ವಾಸಿಸುತ್ತಿದ್ದರು. ಪರಶುರಾಮ ಕೊಳಲಿ ಕುಡಿತದ ದಾಸನಾಗಿದ್ದು ಮಾತ್ರವಲ್ಲದೆ ಹೆಂಡತಿ, ಮಕ್ಕಳಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ. ಹೀಗಾಗಿ ತಾಯಿ ಮತ್ತು ಮಕ್ಕಳು ಬೇರೆಯೇ ಆಗಿ ವಾಸಿಸುತ್ತಿದ್ದರು. ಹಾಗಂತ ಮುಧೋಳದ ಮನೆಗೂ ಬಂದು ಹೋಗುತ್ತಿದ್ದರು.
ಕಳೆದ ಮಂಗಳವಾರ (ಡಿಸೆಂಬರ್ ೬) ರಾತ್ರಿ ಪರಶುರಾಮ್ ಕುಳಲಿ ಮನೆಗೆ ಬಂದಿದ್ದ. ಆಗ ಅಲ್ಲಿ ವಿಠಲ ಕುಳಲಿ ಇದ್ದ. ತಾಯಿ ಮತ್ತು ಇನ್ನೊಬ್ಬ ಮಗ ಇರಲಿಲ್ಲ. ರಾತ್ರಿ ೧೨ ಗಂಟೆಗೆ ತಂದೆ ಮತ್ತು ಮಗನ ನಡುವೆ ಜಗಳ ಶುರುವಾಗಿದೆ. ಸಿಟ್ಟಿನ ಭರದಲ್ಲಿ ವಿಠಲ ತಂದೆಗೆ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಶವವನ್ನು ಏನು ಮಾಡಬೇಕು ಎಂದು ಯೋಚಿಸಿದಾಗ ಆತನಿಗೆ ಹೊಲದಲ್ಲಿರುವ ಪಾಳು ಬೋರ್‌ವೆಲ್‌ನೊಳಗೆ ತುಂಬುವ ಪ್ಲ್ಯಾನ್ ಕಾಣಿಸಿದೆ. ಆತ ಶವವನ್ನು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ಹೊಲಕ್ಕೆ ಸಾಗಿಸಿದ್ದಾನೆ. ಅಲ್ಲಿ ಶವವನ್ನು ನೇರವಾಗಿ ಬಾವಿಯೊಳಗೆ ಇಳಿಸಲು ಪ್ರಯತ್ನಿಸಿದ್ದಾನೆ. ಆದರೆ, ಅದು ಸಾಧ್ಯವಾಗದೆ ಇದ್ದಾಗ ಕೊಡಲಿ ತಂದು ದೇಹವನ್ನು ೩೫ ತುಂಡುಗಳನ್ನಾಗಿ ಮಾಡಿ ಪೈಪ್‌ನೊಳಗೆ ತುಂಬಿಸಿದ್ದಾನೆ. ಇಷ್ಟೆಲ್ಲ ಮಾಡಿ ಕೊಡಲಿಯನ್ನು ತೊಳೆದಿಟ್ಟು ತಾನೂ ಸ್ನಾನ ಮುಗಿಸಿದ್ದಾನೆ.
ಈ ಘಟನೆಯ ಬಗ್ಗೆ ಸರಸ್ವತಿ ಮತ್ತು ಆನಂದ ಹೇಳುವುದೇನು?
ಪರಶುರಾಮ್ ಕುಳಲಿ ಸದಾ ಕಾಲ ಮನೆಯಲ್ಲಿ ಜಗಳ ಕಾಯುತ್ತಿದ್ದು. ಹೊಲದಲ್ಲಿ ಏನೇ ಕೆಲಸ ಮಾಡಿದ್ರೂ ಕಾರಣ ಹುಡುಕಿ ಹುಡುಕಿ ಜಗಳ ಮಾಡುತ್ತಿದ್ದರು. ಎಲ್ಲರಿಗೂ ಹೊಡಿಬಡಿ ಮಾಡುತ್ತಿದ್ದರು. ಇದರಿಂದ ಬೇಸತ್ತು ನಾವು ಹೊಲ ಬಿಟ್ಟು ಬೇರೆ ಕಡೆಗೆ ಇದ್ದೆವು.
ಡಿ. 6. ಮಂಗಳವಾರ ರಾತ್ರಿ ಗಲಾಟೆ ಆಗಿ ಕೊಲೆ ನಡೆದಿದೆ. ನಮಗೂ ಈ ವಿಷಯ ತಿಳಿದಿರಲಿಲ್ಲ. ಪರಶುರಾಮ್ ಒಮ್ಮೆ ಬಂದು ಹೋದರೆ ಕೆಲವು ದಿನ ಮರಳಿ ಬರುತ್ತಿರಲಿಲ್ಲ. ಬಂದು ಗಲಾಟೆಗೇ ಇಳಿದುಬಿಡುತ್ತಿದ್ದರು. ಹಾಗಾಗಿ ಅವರಿಲ್ಲ ಎನ್ನುವ ವಿಚಾರ ನಮ್ಮ ಗಮನಕ್ಕೂ ಬಂದಿರಲಿಲ್ಲ. ಕೊಲೆ ನಡೆದು ನಾಲ್ಕು ದಿನದ ಬಳಿಕ ವಿಠಲ ಮನೆಯಲ್ಲಿ ವಿಷಯ ತಿಳಿಸಿದ್ದಾನೆ.
ಕೊಲೆ ಮಾಡಿ, ಕೊಳೆವೆ ಬಾಯಿಯಲ್ಲಿ ಹಾಕಿದ್ದು ಗೊತ್ತಾಗುತ್ತಿದ್ದಂತೆ ನಾವು ಪೊಲೀಸರಿಗೆ ತಿಳಿಸುವಂತೆ ಪಟ್ಟು ಹಿಡಿದೆವು. ಆದರೆ, ಆರಂಭದಲ್ಲಿ ಪೊಲೀಸರಿಗೆ ಶರಣಾಗಲು ವಿಠಲ ಒಪ್ಪಲಿಲ್ಲ. ಕೊನೆಗೆ ನಾವು ಗಲಾಟೆ ಮಾಡಿ ಒಪ್ಪಿಸಿದೆವು. ಎಷ್ಟು ದಿನಾಂತ ಹೀಗೆ ಮುಚ್ಚಿ ಹಾಕಲು ಸಾಧ್ಯ ಎಂದು ಮನವೊಲಿಸಿದೆವು. ಬಳಿಕ ಮುಧೋಳ ಠಾಣೆಗೆ ಹೋಗಿ ದೂರು ದಾಖಲು ಮಾಡಿದೆವು. ಬಳಿಕ ಪೊಲೀಸರು ಜೆಸಿಬಿ ತಂದು ಬೋರ್‌ವೆಲ್ ಪೈಪಿನ ಒಳಗಿನಿಂದ ಶವ ತುಂಡುಗಳನ್ನು ತೆಗೆದರು.
ಇದನ್ನೂ ಓದಿ | ದೆಹಲಿ ಮಾದರಿ ಕೊಲೆ | ತಂದೆಯನ್ನು ಕೊಂದು 30 ಚೂರು ಮಾಡಿ ಕೊಳವೆ ಬಾವಿಗೆ ಎಸೆದ ಮಗ!