ಬಾಗಲಕೋಟೆ: ಗೃಹಲಕ್ಷ್ಮೀ ಯೋಜನೆಗೆ (Gruha lakshmi Scheme) ಅರ್ಜಿ ಸಲ್ಲಿಸಲು ಹಣ ಪಡೆದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಗ್ರಾಮ ಒನ್ ಸಿಬ್ಬಂದಿ ಲಾಗಿನ್ ಐಡಿ ರದ್ದುಗೊಳಿಸಲಾಗಿದೆ. ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಗ್ರಾಮ ಒನ್ ಸಿಬ್ಬಂದಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಹಣ ಪಡೆದಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಗ್ರಾಮ ಒನ್ ಸಿಬ್ಬಂದಿಯ ಲಾಗಿನ್ ಐಡಿ ರದ್ದುಗೊಳಿಸಿ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮೀ ಯೋಜನೆಯಲ್ಲಿ ಯಾವುದೇ ರೀತಿಯ ಅವ್ಯವಹಾರ, ಅಕ್ರಮವನ್ನು ಸರ್ಕಾರ ಸಹಿಸುವುದಿಲ್ಲ. ಯಾರಾದರೂ ಹಣ ಪಡೆದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಕ್ಕೂ ಹಿಂಜರಿಯುವುದಿಲ್ಲ ಎಂದು ಸಚಿವೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Power point with HPK : ನಾನು ಯಾರನ್ನೂ ಅವಲಂಬಿಸಿಲ್ಲ, I am Independent; ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟ ನುಡಿ
ಬಬಲೇಶ್ವರ ತಾಲೂಕಿನಲ್ಲಿ ಅರ್ಜಿ ಸಲ್ಲಿಕೆಗೆ ಹಣ ವಸೂಲಿ
ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಶಿಬರೂರು ಗ್ರಾಮದಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ದುಡ್ಡು ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮ ಒನ್ ಕೇಂದ್ರದ ಸಿಬ್ಬಂದಿ 50ರಿಂದ 100 ರೂಪಾಯಿ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ದುಡ್ಡು ವಸೂಲಿ ದೃಶ್ಯ ಮೊಬೈಲ್‌ನಲ್ಲಿ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ. ಗ್ರಾಮ ಒನ್ ಕೇಂದ್ರದ ಶ್ರೀಪತಿ ಎಂಬುವವರ ವಿರುದ್ಧ ದುಡ್ಡು ವಸೂಲಿ ಆರೋಪ ಕೇಳಿಬಂದಿದೆ. ಗ್ರಾ.ಪಂ. ಅಧ್ಯಕ್ಷ ರವಿಕುಮಾರ್ ಜಮಾದಾರ, ಗ್ರಾಪಂ ಸದಸ್ಯ ಭೀಮಪ್ಪ ಕಂಕಳ್ಳಿ ಅವರು ಸ್ಥಳಕ್ಕೆ ತೆರಳಿ ದುಡ್ಡು ವಸೂಲಿ ಮಾಡುತ್ತಿರುವುದನ್ನು ತಡೆದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.