ಉಡುಪಿ: ರಾಜ್ಯದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಹಿಜಾಬ್ ವಿವಾದ ಭಾರಿ ಸದ್ದು ಮಾಡಿತ್ತು. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿವಾದ ಚರ್ಚೆಯಾಗಿತ್ತು. ಸದ್ಯಕ್ಕೆ ಈ ವಿವಾದ ಈಗ ತಣ್ಣಗಾಗಿದೆ. ಆದರೆ, ಇದೆಲ್ಲದರ ನಡುವೆ ಉಡುಪಿಯಲ್ಲಿ ಹೊಸ ಬೆಳವಣಿಗೆಯೊಂದು ಆಗುತ್ತಿದ್ದು, ಹಿಜಾಬ್ ಧರಿಸಲು ಅವಕಾಶ ಇರುವ ಕಾಲೇಜುಗಳ ಬೇಡಿಕೆ ಹೆಚ್ಚಾಗಿದೆ.
ಹಿಜಾಬ್ ವಿವಾದ ಮುಗಿದ ಬಳಿಕ ಮತ್ತೆ ಈ ವರ್ಷದ ಶೈಕ್ಷಣಿಕ ವರ್ಷ ಆರಂಭವಾಗಿದೆ. ಎಲ್ಲೆಡೆ ಪ್ರವೇಶಾತಿಗಳು ಶುರುವಾಗಿದೆ. ಆದರೆ, ಉಡುಪಿಯಲ್ಲಿ ಮಾತ್ರ ಮುಸ್ಲಿಂ ಕಾಲೇಜುಗಳ ಬೇಡಿಕೆ ಹೆಚ್ಚಾಗಿದೆ. ಹಿಜಾಬ್ ವಿವಾದ ಆದ ಬಳಿಕ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ಗೆ ಅವಕಾಶ ನೀಡದ ಕಾಲೇಜುಗಳನ್ನು ಬಿಟ್ಟು, ತಮ್ಮ ಧರ್ಮದ ಮುಸ್ಲಿಂ ಕಾಲೇಜುಗಳಿಗೆ ಸೇರಲು ಮುಂದಾಗಿದ್ದಾರೆ. ಹೀಗಾಗಿ ಮುಸ್ಲಿಂ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿದೆ.
ಇದನ್ನು ಓದಿ| SSLC ಪೂರಕ ಪರೀಕ್ಷೆ ನಾಳೆಯಿಂದ ಶುರು, ಹಿಜಾಬ್ ಧರಿಸುವಂತಿಲ್ಲ, ಮಾಸ್ಕ್ ಧರಿಸಲೇಬೇಕು
ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ನಾಲ್ಕು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳಿವೆ. ಉಡುಪಿಯ ಹೂಡೆ, ಕುಂದಾಪುರದ ಕೋಡಿ, ಬೈಂದೂರಿನ ಗಂಗೊಳ್ಳಿ ಹಾಗೂ ಕಾಪುವಿನ ಮುಲೂರಿನಲ್ಲಿ ಮುಸ್ಲಿಂ ಕಾಲೇಜುಗಳು ಇವೆ. ಈ ನಾಲ್ಕು ಕಾಲೇಜುಗಳಲ್ಲೂ ಈ ಬಾರಿ ದಾಖಲಾತಿ ಹೆಚ್ಚಾಗಿದೆ. ಅದರಲ್ಲೂ ಉಡುಪಿಯ ಹೂಡೆಯಲ್ಲಿರುವ ಸಾಲಿಯತ್ ಶಿಕ್ಷಣ ಸಂಸ್ಥೆಯಲ್ಲಿ ಕಳೆದ ಬಾರಿಗಿಂತ 150 ಸೀಟ್‌ಗೂ ಹೆಚ್ಚಿನ ದಾಖಲಾತಿಯಾಗಿದೆ. ಜತೆಗೆ ಪ್ರಥಮ ಪಿಯುಸಿಯಲ್ಲಿ ಬೇರೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದವರು ಕೂಡ, ಹಿಜಾಬ್ಗೆ ಅವಕಾಶ ಇಲ್ಲದ ಕಾಲೇಜು ಬಿಟ್ಟು, ದ್ವಿತೀಯ ಪಿಯುಸಿಗೆ ಸಾಲಿಯತ್ ಕಾಲೇಜಿಗೆ ಸೇರಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಕಾಲೇಜಿನಲ್ಲಿ ಹಿಜಾಬ್ ಒಳಗೊಂಡ ಸಮವಸ್ತ್ರವನ್ನು ಕೂಡ ಸಿದ್ಧಪಡಿಸಲಾಗಿದೆ.
ಒಟ್ಟಿನಲ್ಲಿ ಉಡುಪಿಯಲ್ಲಿ ಆರು ಜನ ವಿದ್ಯಾರ್ಥಿನಿಯರಿಂದ ಆರಂಭವಾದ ಹಿಜಾಬ್ ವಿವಾದ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು. ಸದ್ಯ ಈ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಧ್ಯಪ್ರವೇಶಿಸಿ ತರಗತಿಯಲ್ಲಿ ಹಿಜಾಬ್ ಧರಿಸುವಂತಿಲ್ಲ ಅಂತ ಆದೇಶ ಹೊರಡಿಸಿತ್ತು. ಇದಾದ ಬಳಿಕ ಹಿಜಾಬ್ ವಿವಾದ ಕೊಂಚ ತಣ್ಣಗಾಗಿತ್ತು.
ಇದನ್ನು ಓದಿ| Yoga Day 2022 | ಹಿಜಾಬ್ ಧರಿಸಿ ಗೋಳಗುಮಟ್ಟದ ಆವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ಯೋಗ