Site icon Vistara News

Karnataka Elections | ಮೀಸಲಾತಿ, ನಿಗಮ ಅಧ್ಯಕ್ಷರ ನೇಮಕಕ್ಕೆ ಮೀನಮೇಷ: ಬಿಜೆಪಿ ವಿರುದ್ಧ ಸಿಡಿದು ನಿಂತ್ರಾ ಕಾಡುಗೊಲ್ಲರು?

kadu gollaru

ಬೆಂಗಳೂರು/ತುಮಕೂರು: ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕಾಡುಗೊಲ್ಲರನ್ನು ಸೆಳೆಯುವ ನಿಟ್ಟಿನಲ್ಲಿ ಹಲವು ಭರವಸೆಗಳನ್ನು ನೀಡಲಾಗಿತ್ತು. ಆದರೆ, ಬಳಿಕ ಅವೆಲ್ಲವನ್ನೂ ಕಡೆಗಣಿಸಲಾಗಿದೆ ಎಂಬ ಸಿಟ್ಟು ಈ ಸಮುದಾಯದಲ್ಲಿದೆ. ಹೀಗಾಗಿ ಮತ್ತೊಂದು ಚುನಾವಣೆ ಹೊಸ್ತಿಲಿಗೆ ಬಂದಿರುವ ಕಾಲದಲ್ಲಿ (Karnataka Elections) ಆಕ್ರೋಶ ಸಣ್ಣಗೆ ಹೊಗೆಯಾಡುತ್ತಿದೆ.

ಚಂಗಾವರ ಮಾರಣ್ಣ

ಕಾಡುಗೊಲ್ಲರಿಗೆ ಎಸ್‌ಟಿ ಮೀಸಲಾತಿ ನೀಡುವ ಬಗ್ಗೆ ಭರವಸೆಯನ್ನು ನೀಡಲಾಗಿತ್ತು. ಆದರೆ, ಇದುವರೆಗೂ ಅದರ ಬಗ್ಗೆ ಒಂದು ಹೆಜ್ಜೆ ಮುಂದಿಡಲಾಗಿಲ್ಲ. ಕಳೆದ ಜುಲೈನಲ್ಲಿ ಚಂಗಾವರ ಮಾರಣ್ಣ ಅವರನ್ನು ಕಾಡುಗೊಲ್ಲರ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆದರೆ, ಕೆಲವೇ ದಿನದಲ್ಲಿ ಆದೇಶವನ್ನು ತಡೆ ಹಿಡಿದಿತ್ತು. ಈ ಎಲ್ಲ ವಿಚಾರಗಳು ಸಮುದಾಯದಲ್ಲಿ ಆಕ್ರೋಶ ಮೂಡಿಸಿವೆ.

ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾಡುಗೊಲ್ಲ ಸಮುದಾಯ ದೊಡ್ಡ ಪ್ರಮಾಣದಲ್ಲಿದೆ. ಕಳೆದ ಬಾರಿ ಶಿರಾ ವಿಧಾನಸಭಾ ಉಪಚುನಾವಣೆ ನಡೆದ ಹೊತ್ತಿನಲ್ಲಿ ಈ ಸಮುದಾಯವನ್ನು ಒಲಿಸಿಕೊಳ್ಳಲೆಂದು ಬಿಜೆಪಿ ಸಾಕಷ್ಟು ಭರವಸೆಗಳನ್ನು ನೀಡಿತ್ತು. ಅಂದು ಬಿಜೆಪಿ ಗೆಲುವಿನಲ್ಲಿ ಕಾಡುಗೊಲ್ಲರು ಪ್ರಮುಖ ಪಾತ್ರವನ್ನೇ ವಹಿಸಿದ್ದರು. ಆದರೆ, ಕೊಟ್ಟ ಭರವಸೆಗಳು ಯಾವುದೂ ಈಡೇರಿಲ್ಲ ಎಂದು ಸಮುದಾಯ ಅಸಮಾಧಾನಗೊಂಡಿದೆ.

ಕೊಟ್ಟ ನಿಗಮಾಧ್ಯಕ್ಷತೆಯನ್ನು ಹಿಂದಕ್ಕೆ ಪಡೆದ ಸರ್ಕಾರದ ನಿಲುವಿನಿಂದ ಬೇಸರಗೊಂಡಿರುವ ಚಂಗಾವರ ಮಾರಣ್ಣ ಅವರು ಸದ್ಯ ಬಿಜೆಪಿಯ ಯಾವುದೇ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿಲ್ಲ. ಗುರುವಾರ ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಿರಲಿಲ್ಲ. ಶುಕ್ರವಾರ ಶಿರಾದಲ್ಲೇ ಬಿಜೆಪಿ ಜನ ಸಂಕಲ್ಪ ಯಾತ್ರೆ ನಡೆಯಲಿದ್ದು, ಇಲ್ಲಿ ಕಾಡುಗೊಲ್ಲರನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದರ ಆಧಾರದ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.

ಮೀಸಲಾತಿ ಕೊಡದಿದ್ದರೆ ಮತದಾನ ಬಹಿಷ್ಕಾರ
ಈ ನಡುವೆ, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುವುದರೊಳಗೆ ಕೇಂದ್ರ ಸರ್ಕಾರ ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಕಲ್ಪಿಸದಿದ್ದರೆ ಕಾಡುಗೊಲ್ಲರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲಿದ್ದಾರೆ ಎಂದು ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಯುವಘಟಕದ ಅಧ್ಯಕ್ಷ ಕೆಜೆಹಳ್ಳಿ ಸುರೇಶ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ನ್ಯಾಯದಡಿಯಲ್ಲಿ ಎಸ್ಟಿ ಮೀಸಲಾತಿಗಾಗಿ ಕಾಡುಗೊಲ್ಲರು ಹೋರಾಟ ಮಾಡುತ್ತಿದ್ದರು, ಸರ್ಕಾರಗಳು ತಲೆಕೆಡಿಸಿಕೊಳ್ಳುತ್ತಿಲ್ಲ, ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ನಿಗಮ, ಎಸ್ಟಿ ಮೀಸಲಾತಿ ವಿಷಯಗಳಲ್ಲಿ ಹುಸಿ ಭರವಸೆ ನೀಡಿ ಈ ಸಮುದಾಯದ ಮತಗಳನ್ನ ಪಡೆದು ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡುಗೊಲ್ಲ ಸಮುದಾಯ ಎಸ್ಟಿ ಮೀಸಲಾತಿ ಪಡೆಯಲು ಎಲ್ಲಾ ರೀತಿಯಲ್ಲೂ ಅರ್ಹವಾಗಿದೆ. ಕುಲಶಾಸ್ತ್ರ ಅಧ್ಯಯನ ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಬಿಜೆಪಿ ಸರ್ಕಾರ ಕಾಡುಗೊಲ್ಲರ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಹುಸಿ ಭರವಸೆ ನೀಡಿ ಪದೇ ಪದೇ ವಂಚಿಸುವ ಚೆಲ್ಲಾಟವಾಡದೆ ಸದನದಲ್ಲಿ ಕಾಯ್ದೆ ರೂಪಿಸಿ ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಕಲ್ಪಿಸಲಿ, ಒಂದು ವೇಳೆ ಕೇಂದ್ರ ಸರ್ಕಾರ ಕಾಡುಗೊಲ್ಲರಿಗೆ ರಾಜ್ಯ ವಿಧಾನಸಭಾ ಚುನಾವಣೆ ಒಳಗಾಗಿ ಪರಿಶಿಷ್ಟ ಪಂಗಡಕ್ಕೆ ಪರಿಗಣಿಸದೆ ಇದ್ದರೆ ಕಾಡುಗೊಲ್ಲರು ಹಟ್ಟಿ ಪ್ರವೇಶಕ್ಕೆ ರಾಜಕೀಯ ಪಕ್ಷಗಳಿಗೆ ನಿರ್ಬಂಧ ಹೇರುವುದಲ್ಲದೆ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | Karnataka Election : ಮುಂದುವರಿದ ಜೆ.ಪಿ. ನಡ್ಡಾ ಮಠ ಯಾತ್ರೆ; ಸಮುದಾಯ ಆಧಾರಿತ ಮತ ಬೇಟೆ ತೀವ್ರ

Exit mobile version