Site icon Vistara News

Urigowda Nanjegowda: ರಂಗಾಯಣದಿಂದ ಅಡ್ಡಂಡ ವಜಾಕ್ಕೆ ಒತ್ತಾಯ; ಮಂಡ್ಯದಲ್ಲಿ ರೈತರ ಖಂಡನಾ ಸಭೆಯಲ್ಲಿ ನಿರ್ಣಯ

Demands sacking of Addanda from Rangayana Resolution of farmers condemnation meeting in Mandya Urigowda Nanjegowda updates

ಮಂಡ್ಯ: ಉರಿ ಗೌಡ, ನಂಜೇಗೌಡ (Urigowda Nanjegowda) ವಿವಾದಕ್ಕೆ ಸಂಬಂಧಿಸಿ ಆದಿಚುಂಚನಗಿರಿ ಮಠ ಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ (Nirmalanandanatha Swamiji) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ಮೇಲೆ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಅವರ ವಿರುದ್ಧ ಬೃಹತ್ ಖಂಡನಾ ಸಭೆ ನಡೆಸಿ, ಪ್ರತಿಭಟಿಸಲಾಯಿತು. ಅಲ್ಲದೆ, ಅವರನ್ನು ರಂಗಾಯಣದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಸ್ವಾಭಿಮಾನಿ ಒಕ್ಕಲಿಗರ ವೇದಿಕೆ, ಆದಿಚುಂಚನಗಿರಿ ಮಠದ ಭಕ್ತರು, ವಿವಿಧ ಜನಪರ ಸಂಘಟನೆಗಳ ಆಶ್ರಯದಲ್ಲಿ ಮಂಡ್ಯ ನಗರದ ರೈತ ಸಭಾಂಗಣದಲ್ಲಿ ಬೃಹತ್ ಖಂಡನಾ ಸಭೆಯನ್ನು ನಡೆಸಲಾಗಿದೆ. ಈ ವೇಳೆ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಅವರು ಈ ತಪ್ಪಿಗೆ ಬೆಲೆ ತೆರಲೇಬೇಕು ಎಂಬ ಆಗ್ರಹ ಕೇಳಿಬಂದಿದೆ.

ಅಡ್ಡಂಡ ಕಾರ್ಯಪ್ಪ ವಿರುದ್ಧ ಸಭಾ ನಿರ್ಣಯ

ಅಡ್ಡಂಡ ಕಾರ್ಯಪ್ಪ ಹೇಳಿಕೆಗೆ ಸಭೆಯಲ್ಲಿ ಸರ್ವಾನುಮತದಿಂದ ಖಂಡನೆ, ಸರ್ಕಾರ ಅಡ್ಡಂಡ ಕಾರ್ಯಪ್ಪ ಅವರನ್ನು ರಂಗಾಯಣ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ನಿರ್ಲಕ್ಷ್ಯ ಮಾಡಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವ ಮೂರು ಪ್ರಮುಖ ನಿರ್ಣಯವನ್ನು ಈ ಸಭೆಯಲ್ಲಿ ಕೈಗೊಳ್ಳಲಾಗಿದೆ. ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ನೇತೃತ್ವದಲ್ಲಿ ಸಭೆ ನಡೆದಿದ್ದು, ನೂರಾರು ಜನರು ಭಾಗಿಯಾಗಿದ್ದಾರೆ.

ಇದನ್ನೂ ಓದಿ: Corruption case: ಮಧ್ಯಂತರ ಜಾಮೀನು ಸಂಬಂಧ ಬಿಜೆಪಿ ಶಾಸಕ ಮಾಡಾಳುಗೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್

ಅಡ್ಡಂಡ ಕಾರ್ಯಪ್ಪ ವಿರುದ್ಧ ಪ್ರತಿಭಟನೆ

ಮಂಡ್ಯ ರೈತ ಸಭಾಂಗಣದ ಆವರಣದಲ್ಲಿರುವ ಕುವೆಂಪು ಪ್ರತಿಮೆ ಎದುರು ಪ್ರತಿಭಟನೆಯನ್ನು ನಡೆಸಲಾಗಿದ್ದು, ಚುಂಚಶ್ರೀ ವಿರುದ್ಧ ಅಡ್ಡಂಡ ಕಾರ್ಯಪ್ಪ ನೀಡಿದ ಹೇಳಿಕೆಗೆ ವ್ಯಾಪಕ ಖಂಡನೆಯನ್ನು ವ್ಯಕ್ತಪಡಿಸಲಾಗಿದೆ. ಅವರನ್ನು ಕೂಡಲೇ ರಂಗಾಯಣದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಡ್ಡಂಡ ಕಾರ್ಯಪ್ಪ ಅಲ್ಲ, ಅಡ್ಡಡ್ಡ ಕಾರ್ಯಪ್ಪ

ಮಂಡ್ಯದಲ್ಲಿ ಪರಿಷತ್‌ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ಇತಿಹಾಸವನ್ನು ತಿರುಚುವ ಪ್ರಯತ್ನವನ್ನು ಅಡ್ಡಂಡ ಕಾರ್ಯಪ್ಪ ಮಾಡಿದ್ದಾರೆ. ಈಗಾಗಲೇ ಸ್ವಾಮೀಜಿಗಳ ಕ್ಷಮೆ ಯಾಚಿಸಿದ್ದಾರೆ. ಆದಿಚುಂಚನಗಿರಿ ಮಠವು ಒಕ್ಕಲಿಗರಿಗೆ ಮಾತ್ರ ಸೀಮಿತವಾಗಿಲ್ಲ,. ಇದು ಸರ್ವಜನಾಂಗೀಯ ತೋಟವಾಗಿದ್ದು, ಎಲ್ಲರಿಗೂ ಸೇರಿದೆ. ಅಧಿಕಾರಕ್ಕಾಗಿ ಈ ರೀತಿಯ ವರ್ತನೆ ಮಾಡುತ್ತಿರುವ ಅವರು ಅಡ್ಡಂಡ ಕಾರ್ಯಪ್ಪ ಅಲ್ಲ, ಅಡ್ಡಡ್ಡ ಕಾರ್ಯಪ್ಪ. ಶ್ರೀ ಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಅಡ್ಡಂಡ ಕಾರ್ಯಪ್ಪಗೆ ಇತಿಹಾಸದ ಬಗ್ಗೆ ಏನು ಗೊತ್ತು? ಟಿಪ್ಪು ಗುಂಡಿಗೆ ಬಲಿಯಾಗಿದ್ದು. ಸತ್ಯವನ್ನು ತಿರುಚುವ ಕೆಲಸವನ್ನು ಮಾಡಲಾಗುತ್ತದೆ. ಇತಿಹಾಸಕ್ಕೆ ಅಪಮಾನ ಮಾಡುತ್ತಿದ್ದಾರೆ. ಈ ವಿವಾದಕ್ಕೆ ಸ್ವಾಮೀಜಿ ತೆರೆ ಎಳೆದಿದ್ದಾರೆ. ನಾಲಿಗೆಯನ್ನು ಹರಿಬಿಡಬೇಡಿ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿವಾದ ಸೃಷ್ಟಿಸಿದ್ದ ಅಡ್ಡಂಡ ಹೇಳಿಕೆ

ಉರಿ ಗೌಡ, ನಂಜೇಗೌಡ ವಿವಾದದ ಬಗ್ಗೆ ಯಾವುದೇ ಚರ್ಚೆ ಮಾಡಬಾರದು ಎಂಬ ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದು ತಪ್ಪು ಎಂದು ಅಡ್ಡಂಡ ಕಾರ್ಯಪ್ಪ ಅವರು ಗುರುವಾರ ವಿಸ್ತಾರ ನ್ಯೂಸ್‌ ಜತೆ ಮಾತನಾಡುತ್ತಾ ಆಕ್ಷೇಪ ವ್ಯಕ್ತಪಡಿಸಿದದರು. ʻʻಸ್ವಾಮೀಜಿಗಳ ಬಗ್ಗೆ ನನಗೆ ಗೌರವ ಇದೆ. ಆದರೆ ಉರಿಗೌಡ, ನಂಜೇಗೌಡ ಚರ್ಚೆ ನಡೆಯದಂತೆ ಮಾಡಿದ್ದು ಸರಿಯಲ್ಲ. ಈ ಬಗ್ಗೆ ಸಂಶೋಧನೆ ನಡೆಯಲಿ ಅನ್ನಬೇಕಿತ್ತುʼʼ ಎಂದು ಅಡ್ಡಂಡ ಹೇಳಿದ್ದರು.

ʻʻಅವರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ. ಬೇರೆ ಜಾತಿಗಳಿಗೆ ಅಲ್ಲ. ಒಕ್ಕಲಿಗ ಸಮುದಾಯದ ರಕ್ಷಣೆ ಮಾಡುವುದು ಅವರ ಕೆಲಸ. ಹಾಗಂತ ಉರಿಗೌಡ, ನಂಜೇಗೌಡರ ಕುರಿತು ಚರ್ಚೆ ನಡೆಯಲೇಬಾರದು ಎಂದು ಹೇಳಿದ್ದು ಸರಿಯಲ್ಲʼʼ ಎಂದಿದ್ದರು. ʻʻಸ್ವಾಮೀಜಿಗಳು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತರು. ಆಗಾಗ ಡಿ.ಕೆ.ಶಿವಕುಮಾರ್ ಅವರನ್ನು ಕರೆದು ಕುಮಾರಸ್ವಾಮಿ ನಮ್ಮವ, ಅವರ ಸರ್ಕಾರ ಬೀಳದಂತೆ ನೋಡಿಕೋ ಎಂದು ಹೇಳಿದ್ದರುʼʼ ಎಂದು ಗಂಭೀರ ಆರೋಪ ಮಾಡಿರುವ ಅವರು, ಅವರಿಗೆ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಮಾತ್ರ ಒಕ್ಕಲಿಗ ನಾಯಕರು. ಸಿ.ಟಿ.ರವಿ, ಅಶ್ವತ್ಥ ನಾರಾಯಣ ಅವರೆಲ್ಲ ಅದೇ ಸಮುದಾಯದವರಾದರೂ ಸ್ವಾಮೀಜಿಗೆ ಬೇಕಿಲ್ಲ ಎಂದಿದ್ದು ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: Karnataka Election: ಕಾಂಗ್ರೆಸ್‌ನಲ್ಲಿ ಸಿಎಂ ಆಗೋಕೆ ಮೂರು ಜನ ಚಡ್ಡಿ ಹೊಲಿಸ್ಕೊಂಡು ಕೂತಾರ: ಗೋವಿಂದ ಕಾರಜೋಳ ವ್ಯಂಗ್ಯ

ವಿಷಾದ ವ್ಯಕ್ತಪಡಿಸಿದ್ದ ಅಡ್ಡಂಡ

ಅಡ್ಡಂಡ ಕಾರ್ಯಪ್ಪ ಅವರ ಹೇಳಿಕೆ ವಿಸ್ತಾರ ನ್ಯೂಸ್‌ನಲ್ಲಿ ಪ್ರಕಟವಾಗಿ ಭಾರಿ ಸದ್ದು ಮಾಡಿತ್ತು. ಅವರ ಹೇಳಿಕೆಗೆ ತೀವ್ರ ಆಕ್ಷೇಪವೂ ವ್ಯಕ್ತವಾಗಿತ್ತು. ಈ ನಡುವೆ ಗುರುವಾರ ರಾತ್ರಿ ವಿಸ್ತಾರ ನ್ಯೂಸ್‌ನ ನ್ಯೂಸ್‌ ಫ್ರಂಟ್‌ಲೈನ್‌ ವಿತ್‌ ಎಚ್‌ಪಿಕೆ ಕಾರ್ಯಕ್ರಮದಲ್ಲಿ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರ ಜತೆ ಮಾತನಾಡಿದ್ದ ಅಡ್ಡಂಡ ಅವರು ಮೊದಲು ತಮ್ಮ ಹೇಳಿಕೆಯನ್ನು ಸಮರ್ಥಿಸಿದರಾದರೂ ಅಂತಿಮವಾಗಿ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ನುಡಿದಿದ್ದರು. ಆದರೆ, ವಿವಾದ ತಣ್ಣಗಾಗುವ ಲಕ್ಷಣ ಕಾಣಿಸದೆ ಇದ್ದಾಗ ಈಗ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.

Exit mobile version