ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 159 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 301ಕ್ಕೆ ಏರಿಕೆಯಾಗಿದೆ. ಇನ್ನು ಜನವರಿಯಿಂದ ಈವರೆಗೂ ಡೆಂಗ್ಯೂನಿಂದ (Dengue Cases) 6 ಸಾವು ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಯಲ್ಲಿ 954 ಮಂದಿಗೆ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 159 ಮಂದಿಯಲ್ಲಿ ಡೆಂಗ್ಯೂ ಸೋಂಕು ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 80, ಚಿಕ್ಕಬಳ್ಳಾಪುರ – 08, ತುಮಕೂರು – 12, ದಾವಣಗೆರೆ – 10, ಗದಗ – 5, ಯಾದಗಿರಿ – 2, ಬೀದರ್ – 13, ಕೊಪ್ಪಳ – 1, ಹಾಸನ – 03, ಚಿಕ್ಕಮಗಳೂರು – 25 ಪ್ರಕರಣಗಳು ಪತ್ತೆಯಾಗಿವೆ.
ಕಳೆದ 24 ಗಂಟೆಗಳಲ್ಲಿ 1 ವರ್ಷದೊಳಗಿನ ಮೂವರು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಸದ್ಯ 301 ಸಕ್ರಿಯ ಪ್ರಕರಣಗಳ ಪೈಕಿ 35 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸನದಲ್ಲಿ ಶಂಕಿತ ಡೆಂಗ್ಯೂಗೆ 26 ವರ್ಷದ ಯುವತಿ ಬಲಿ
ಹಾಸನ: ಶಂಕಿತ ಡೆಂಗ್ಯೂಗೆ (Dengue Cases in Hassan) 26 ವರ್ಷದ ಯುವತಿ ಬಲಿಯಾಗಿರುವ ಘಟನೆ ಹಾಸನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಜಿಲ್ಲೆಯ ಅರಸೀಕೆರೆ ತಾಲೂಕಿನ ಮುದುಡಿ ತಾಂಡ್ಯ ಗ್ರಾಮದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಜೂಲೂನಾಯ್ಕ-ಸುಮಿತ್ರಾದೇವಿ ಎಂಬುವವರ ಪುತ್ರಿ ಸುಪ್ರಿತಾ (26) ಮೃತ ಯುವತಿ. ನಾಲ್ಕು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿರುವಾಗಲೇ ಸುಪ್ರಿತಾಗೆ ಬಹುಅಂಗಾಗ ವೈಫಲ್ಯವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಪ್ರಿತಾ ಮೃತಪಟ್ಟಿದ್ದಾಳೆ. ಇದರಿಂದ ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂ ಜ್ವರದಿಂದ ಸಾವಿನ ಸಂಖ್ಯೆ ಏಳಕ್ಕೆ ಏರಿದೆ.
ಮೈಸೂರಿನಲ್ಲಿ ಜಯದೇವ ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಸಾವು
ಮೈಸೂರು: ಜಿಲ್ಲೆಯಲ್ಲಿ ಡೆಂಗ್ಯೂಗೆ ಎರಡನೇ ಬಲಿಯಾಗಿದೆ. ಜಯದೇವ ಹೃದ್ರೋಗ ಆಸ್ಪತ್ರೆ ಡಾಟಾ ಎಂಟ್ರಿ ಆಪರೇಟರ್ ಲಲಿತಾ ಮೃತಪಟ್ಟವರು. ಮೂರು ದಿನಗಳ ಹಿಂದೆ ಹುಣಸೂರು ಸಮುದಾಯ ಆರೋಗ್ಯಾಧಿಕಾರಿ ಮೃತಪಟ್ಟ ಬೆನ್ನಲ್ಲೇ ಇದೀಗ ಮತ್ತೊಬ್ಬರು ಡೆಂಗ್ಯೂ ಜ್ವರದಿಂದ (Dengue Cases in Mysore) ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ | Dengue Scare: ಬೆಂಗಳೂರಿನಲ್ಲಿ ತೀವ್ರವಾಗಿ ಹರಡುತ್ತಿರುವ ಡೆಂಗ್ಯೂ; ನೂರಾರು ಮಂದಿ ಆಸ್ಪತ್ರೆಗೆ ದಾಖಲು
ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. 3 ದಿನಗಳ ಹಿಂದೆ ಮೈಸೂರು ಜಿಲ್ಲೆಯಲ್ಲಿ ಡೆಂಗ್ಯೂಗೆ ಮೊದಲ ಬಲಿಯಾಗಿತ್ತು. ಹುಣಸೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮುದಾಯ ಆರೋಗ್ಯಾಧಿಕಾರಿ ನಾಗೇಂದ್ರ (32) ಮೃತ ಮೃತಪಟ್ಟಿದ್ದರು.