ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 155 ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿವೆ. ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 107 ಹೊಸ ಕೇಸ್‌ಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟಾರೆ 343 ಸಕ್ರಿಯ ಡೆಂಗ್ಯೂ ಪ್ರಕರಣಗಳು ಇವೆ. ಡೆಂಗ್ಯೂ ಸೋಂಕಿನಿಂದ ಜನವರಿಯಿಂದ ಈವರೆಗೆ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 899 ಮಂದಿಗೆ ಡೆಂಗ್ಯೂ ಟೆಸ್ಟ್ ನಡೆಸಲಾಗಿದ್ದು, ಈ ಪೈಕಿ 155 ಮಂದಿಗೆ ಡೆಂಗ್ಯೂ ದೃಢವಾಗಿದೆ. ಬೆಂಗಳೂರಿನಲ್ಲಿ 107, ಚಿತ್ರದುರ್ಗ 10, ದಾವಣಗೆರೆ 4, ಶಿವಮೊಗ್ಗ 9, ಉತ್ತರ ಕನ್ನಡ 2, ವಿಜಯನಗರ 4, ಹಾಸನ 16 ಉಡುಪಿಯಲ್ಲಿ 3 ಕೇಸ್‌ಗಳು ಪತ್ತೆಯಾಗಿವೆ. 343 ಸಕ್ರಿಯ ಪ್ರಕರಣಗಳ ಪೈಕಿ 142 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡೆಂಗ್ಯೂಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊದಲ ಬಲಿ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡೆಂಗ್ಯೂಗೆ ಮೊದಲ ಬಲಿಯಾಗಿದೆ. ಗುಡಿಬಂಡೆ ಪಟ್ಟಣದ ನಿವಾಸಿ ವೇಣು(50) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡೆಂಗ್ಯೂ ಜ್ವರರಿಂದ ವೇಣು ಅವರು ಮೃತಪಟ್ಟಿರುವುದಾಗಿ ಸಂಬಂಧಿಕರು ಹೇಳಿದ್ದಾರೆ.
ಡೆಂಗ್ಯೂ ಆತಂಕ; ರಾಜಧಾನಿಯಲ್ಲಿ ಇನ್ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಡಿದರೆ ಬೀಳಲಿದೆ ಭಾರಿ ದಂಡ!
ಬೆಂಗಳೂರು: ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು (Dengue Fever) ಹೆಚ್ಚಳವಾಗುತ್ತಿರುವುದರಿಂದ ಆತಂಕ ಮೂಡಿದೆ. ಹೀಗಾಗಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿರುವ ಬಿಬಿಎಂಪಿ, ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ಭಾರಿ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಲು ನಿರ್ಧರಿಸಿದೆ. ಸದ್ಯದಲ್ಲೇ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಿಗೂ ಆರೋಗ್ಯ ಇಲಾಖೆ ಆದೇಶ ಹೊರಡಿಸಲಿದೆ.
ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿದವರಿಗೆ ಇನ್ಮುಂದೆ 50 ರೂಪಾಯಿ ಅಲ್ಲ, 500 ರೂಪಾಯಿ ದಂಡ ವಿಧಿಸಲು ಪಾಲಿಕೆ ನಿರ್ಧರಿಸಿದೆ. ಸ್ವಚ್ಛತೆ ಇಲ್ಲದಿದ್ದರೆ 500 ರೂ. ದಂಡ ಬೀಳೋದು ಗ್ಯಾರಂಟಿ. 50 ರೂ ಇದ್ದ ದಂಡದ ಮೊತ್ತವನ್ನು 500 ರೂ.ಗೆ ಏರಿಕೆ ಮಾಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ನೆನ್ನೆ ಆರೋಗ್ಯ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಸಂಗ್ರಹಿಸಿದ ನೀರನ್ನು ನಾಲ್ಕೈದು ದಿನಗಳಿಗೆ ಒಮ್ಮೆ ಬದಲಾಯಿಸಬೇಕು. ಆಶಾ ಕಾರ್ಯಕರ್ತೆಯರು ಬಂದಾಗ ಸಾರ್ವಜನಿಕರು ಸ್ಪಂದಿಸಬೇಕು ಎಂದು ಕೋರಿದ್ದಾರೆ.