ಬೆಂಗಳೂರು: ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಡೆಂಗ್ಯೂ ಜ್ವರ ಪತ್ತೆಗೆ ಎರಡು ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಪರೀಕ್ಷೆಗಳಿಗೆ ಒಟ್ಟು 600 ರೂ. ನಿಗದಿಪಡಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ.
ಡೆಂಗ್ಯೂ ಜ್ವರ ಪತ್ತೆಗೆ ಎರಡು ಮಾದರಿಯ ಪರೀಕ್ಷೆ ನಡೆಸಲಾಗುತ್ತದೆ. ತಲಾ 300 ರೂ.ನಂತೆ ಒಟ್ಟು 600 ರೂ. ದರವನ್ನು ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಈ ಸಂದರ್ಭವನ್ನು ಬಳಸಿಕೊಂಡು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ದುಪ್ಪಟ್ಟು ಹಣ ವಸೂಲಿಯಾಗುತ್ತಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷೆಗೆ ರಾಜ್ಯ ಸರ್ಕಾರ ದರ ನಿಗದಿ ಮಾಡಲು ಮುಂದಾಗಿದೆ.
ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ
ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುತ್ತಿಲ್ಲ. ಕೆಪಿಎಂ ಆಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯ. IHIPಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಅಪ್ಲೋಡ್ ಮಾಡುತ್ತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯು ತಪಾಸಣೆಗೆ ದರ ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ. ಆ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳವಾರ ತಿಳಿಸಿದ್ದರು.
ನಮ್ಮ ವೆಬ್‌ಸೈಟಿನಲ್ಲಿ ಡೆಂಗ್ಯೂ ಬುಲೆಟಿನ್ ಬಿಡುಗಡೆ ಮಾಡುತ್ತೇವೆ. ಪ್ರತಿ ದಿನ ಎಷ್ಟು ಕೇಸ್ ಬಂದಿದೆ ಎನ್ನುವ ಮಾಹಿತಿ ಹಾಕುತ್ತೇವೆ. ದಿನ ನಿತ್ಯ ಡೆಂಗ್ಯೂ ಬುಲೆಟಿನ್ ಕೊಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ಎಲ್ಲಾ ಮನೆಗಳ ಸರ್ವೆ ಮಾಡುತ್ತಿದೆ. ಸೂಕ್ಷ್ಮ ಪ್ರದೇಶಗಳು ಮಾತ್ರವಲ್ಲ ಎಲ್ಲಾ ಮನೆಗಳ ಸರ್ವೆ ನಡೆಸಲು ನಾನು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ. ಮನೆ ಮನೆಗೆ ಭೇಟಿ ಕೊಡಲು ಸೂಚಿಸಿದ್ದೇನೆ. ರಾಜ್ಯಾದ್ಯಂತ ಡೆಂಗ್ಯೂ ಬಗ್ಗೆ ಕಟ್ಟೆಚ್ಚರ ವಹಿಸಲು ಸೂಚನೆ ಕೊಡಲಾಗಿದೆ. ಪ್ರತಿ ಶುಕ್ರವಾರ ಡೆಂಗ್ಯೂ ವಿಚಾರದಲ್ಲಿ ಫೀಲ್ಡ್‌ನಲ್ಲಿ ಇದ್ದು, ಮಾನಿಟರ್ ಮಾಡಲು ಸೂಚಿಸಿದ್ದೇನೆ. ಪ್ರತಿ ಶುಕ್ರವಾರ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ | Dengue Fever: ಮಳೆಗಾಲ ಬರುತ್ತಿದೆ! ಡೆಂಗ್ಯೂ ಬಗ್ಗೆ ಇರಲಿ ಎಚ್ಚರಿಕೆ!
ಹೊಳೆನರಸೀಪುರದಲ್ಲಿ ಡೆಂಗ್ಯೂ ಜ್ವರದಿಂದ ಬಾಲಕಿ ಸಾವು
ಹಾಸನ: ಮಾರಕ ಡೆಂಗ್ಯೂ ಜ್ವರಕ್ಕೆ ಮತ್ತೊಬ್ಬ ಬಾಲಕಿ ಬಲಿಯಾಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ
ತಾಲೂಕಿನ ಗುಡ್ಡೇನಹಳ್ಳಿಯಲ್ಲಿ ನಡೆದಿದೆ. ಕಲಾಶ್ರೀ ಜಿ.ಎಲ್. (11) ಮೃತಪಟ್ಟ ಬಾಲಕಿ.
ಗುಡ್ಡೇನಹಳ್ಳಿ ಗ್ರಾಮದ ಲೋಕೇಶ್ ತನುಜ ದಂಪತಿಗಳ ಪುತ್ರಿ ಕಲಾಶ್ರೀ ಜಿ.ಎಲ್. ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದಳು. ಆಕೆಗೆ ಹೊಳೆನರಸೀಪುರ ಪಟ್ಟಣದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹಿಮ್ಸ್ ಆಸ್ಪತ್ರೆಗೆ ಶನಿವಾರ ಸಂಜೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾಳೆ. ಇದರಿಂದ ಒಂದು ವಾರದಲ್ಲಿ ಡೆಂಗ್ಯೂ ಜ್ವರಕ್ಕೆ ಇಬ್ಬರು ಹೆಣ್ಣುಮಕ್ಕಳು ಬಲಿಯಾದಂತಾಗಿದೆ.
ಇದನ್ನೂ ಓದಿ | Dengue fever: ಮಾರಕ ಡೆಂಗ್ಯು ಜ್ವರಕ್ಕೆ ಬಾಲಕಿ ಬಲಿ
ಜೂ.28 ರಂದು ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಗ್ರಾಮದ ಕುಮಾರ್ ಎಂಬುವರ ಪುತ್ರಿ ವರ್ಷಿಕ (8) ಮೃತಪಟ್ಟಿದ್ದಳು. ಅತಿಯಾದ ಜ್ವರದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವರ್ಷಿಕ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆದಿದ್ದಳು.