ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ (Congress Guarantee Scheme) ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಜುಲೈ 20ರಂದು ಚಾಲನೆ ನೀಡಲಾಗಿತ್ತು. ಈ ಮೂಲಕ ಮಹಿಳೆಯರಿಗೆ 2 ಸಾವಿರ ರೂಪಾಯಿ ಕೊಡುವ ಯೋಜನೆಗೆ ಅಭೂತಪೂರ್ವ ಯಶಸ್ಸು ಸಹ ಸಿಕ್ಕಿದ್ದು, ದಾಖಲೆ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಈ ಯೋಜನೆ ಜಾರಿಗೆ ಮುಂಚೆ ನಡೆದಿರುವ ಹಲವು ಗೊಂದಲಗಳಿಂದ ಮುನಿಸಿಕೊಂಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಈಗ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಇದರ ಪರಿಣಾಮ ಐಎಎಸ್ ಅಧಿಕಾರಿಯನ್ನು ಎತ್ತಂಗಡಿ (IAS officer transferred) ಮಾಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ (Department of Women and Child Development Secretary) ಎನ್. ಮಂಜುಳಾ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇದಕ್ಕೆ ಕಾರಣ, ಯೋಜನೆ ಜಾರಿ ಮಾಡಲು ವಿಳಂಬ ಆಗಿರುವುದು. 2-3 ಬಾರಿ ದಿನಾಂಕ ಮುಂದೂಡಿಕೆಯಾಗಿರುವುದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೇಸರಕ್ಕೆ ಕಾರಣವಾಗಿದೆ.
ಬೇಸರಗೊಂಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಈ ರೀತಿ ದಿನಾಂಕದ ಗೊಂದಲವಾಗುತ್ತಿದ್ದಂತೆ ಪ್ರತಿಪಕ್ಷಗಳು ನಾನಾ ಕಾರಣಗಳಿಂದ ಟೀಕೆ ಮಾಡುತ್ತಿದ್ದವು. ಇದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೇಲೆ ಒತ್ತಡ ಉಂಟಾಗಲು ಕಾರಣವಾಗುತ್ತಿತ್ತು. ಹೀಗಾಗಿ ಈ ಬಗ್ಗೆ ಸಚಿವೆ ತೀವ್ರ ಬೇಸರಗೊಂಡಿದ್ದರು ಎನ್ನಲಾಗಿದೆ. ಈಗ ಯೋಜನೆ ಜಾರಿ ಮಾಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಹ ಸರಾಗವಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕಾರ್ಯಗಳು ಪ್ರಗತಿಯಲ್ಲಿ ಹಾಗೂ ವೇಗವಾಗಿ ಸಾಗಬೇಕು ಎಂಬ ಉದ್ದೇಶದಿಂದ ಈ ವರ್ಗಾವಣೆಯನ್ನು ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Mallikarjun Kharge : ಖರ್ಗೆ ಕಪ್ಪು ಎಂದ ಆರಗರನ್ನು ನಿಮ್ಹಾನ್ಸ್‌ಗೆ ಕಳಿಸುತ್ತೇವೆ: ಡಿಕೆಶಿ ಗುಡುಗು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಸ್ಥಾನಕ್ಕೆ ಡಾ. ಜಿ.ಸಿ. ಪ್ರಕಾಶ್ ಅವರನ್ನು ನೇಮಕ ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಇವರು ಮೈಸೂರು ಪ್ರಾದೇಶಿಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಈಗ ಅವರು ಮಹಿಳಾ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಜಾರಿಯ ನಡುವಿನಲ್ಲೇ ಅಧಿಕಾರಿಯನ್ನು ಸರ್ಕಾರ ವರ್ಗಾವಣೆ ಮಾಡಿದೆ.