Site icon Vistara News

Caste Census Report : ಜಾತಿ ಗಣತಿ ವರದಿ ಸ್ವೀಕಾರಕ್ಕೆ ಡಿಸಿಎಂ ಡಿಕೆಶಿ ವಿರೋಧ; ಸಿಎಂಗೆ ಪತ್ರ

CM Siddaramaiah and DK Shivakumar

ಬೆಂಗಳೂರು: ಜಾತಿ ಜನಗಣತಿ ವರದಿ (Caste Census Report) ಸ್ವೀಕಾರಕ್ಕೆ ಕಾಂಗ್ರೆಸ್‌ ಪಕ್ಷದೊಳಗೇ ಒಡಕು ಮೂಡಿದೆ. ಇದಕ್ಕೆ ಸ್ವತಃ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಪತ್ರವನ್ನು ಬರೆದಿರುವ ಡಿ.ಕೆ. ಶಿವಕುಮಾರ್‌, ವರದಿ ಸ್ವೀಕಾರಕ್ಕೂ ಮುನ್ನ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಈ ವರದಿಯನ್ನು ಹಾಗೇ ಸ್ವೀಕಾರ ಮಾಡಿದಲ್ಲಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಾತಿ ಜನಗಣತಿ ಬಗ್ಗೆ ಈ ಹಿಂದಿನಿಂದಲೂ ಅಪಸ್ವರಗಳು ಕೇಳಿ ಬರುತ್ತಲೇ ಇವೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಮಿತಿ ರಚಿಸಿ ವರದಿಗೆ ಸೂಚಿಸಿದ್ದರು. ಆದರೆ, ಆ ವರದಿ ಮಾತ್ರ ಬಿಡುಗಡೆಯಾಗಲೇ ಇಲ್ಲ. ಮುಂದೆ ಬಂದ ಯಾವ ಸರ್ಕಾರಗಳೂ ಸಹ ಬಿಡುಗಡೆಯ ಗೋಜಿಗೆ ಹೋಗಿರಲಿಲ್ಲ. ಆದರೆ, ಈಚೆಗೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಡಳಿತ ಅವಧಿ ಮುಗಿಯುವುದರೊಳಗೆ ಜಾತಿ ಜನಗಣತಿ ವರದಿಯನ್ನು ಸ್ವೀಕಾರ ಮಾಡಿಯೇ ಸಿದ್ಧ ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರು ಈ ಹೇಳಿಕೆ ನೀಡುತ್ತಿದ್ದಂತೆ ಕೆಲವೊಂದು ಸಮುದಾಯಗಳಿಂದ ಅಪಸ್ವರಗಳು ಕೇಳಿ ಬಂದಿದ್ದವು. ಈ ವರದಿಯನ್ನು ಯಥಾವತ್‌ ಸ್ವೀಕಾರ ಮಾಡಿದರೆ ತಮ್ಮ ತಮ್ಮ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂದು ಅಸಮಾಧಾನಗೊಂಡಿದ್ದವು. ಈಗ ಆ ಅಸಮಾಧಾನವು ಡಿ.ಕೆ. ಶಿವಕುಮಾರ್‌ ಮೂಲಕ ವ್ಯಕ್ತವಾಗಿದೆ.

ಇದನ್ನೂ ಓದಿ: Congress Politics : 3 ಡಿಸಿಎಂ ಹುದ್ದೆ ಸೃಷ್ಟಿ ಮಾಡದಿದ್ದರೆ ಈ ಸರ್ಕಾರ ಉಳಿಯಲ್ಲ: ಕೆ.ಎನ್.‌ ರಾಜಣ್ಣ ಸ್ಫೋಟಕ ಹೇಳಿಕೆ

ಜಾತಿ ಜನಗಣತಿ ವರದಿ ಸ್ವೀಕಾರಕ್ಕೆ ಪರ ಮತ್ತು ವಿರೋಧ ಚರ್ಚೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ವರದಿ ಸ್ವೀಕಾರಕ್ಕೂ ಮುನ್ನ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಎಂದು ಡಿ.ಕೆ. ಶಿವಕುಮಾರ್‌ ತಾವು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಸಿಎಂ, ಹಿಂದುಳಿದ ವರ್ಗಗಳ ಖಾತೆ ಸಚಿವರಿಗೆ (Minister for Backward Classes) ಪತ್ರ ಬರೆದು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಸಿಎಂಗೆ ಏಕೆ ಈ ಪತ್ರ?

ಕಾಂತರಾಜ್ ನೇತೃತ್ವದ ಸಮಿತಿಯ (Committee headed by Kantharaj) ವರದಿ ತಿರಸ್ಕರಿಸುವಂತೆ, ಒಕ್ಕಲಿಗರಿಗೆ 3A ಮೀಸಲಾತಿ (3A reservation for Vokkaligas) ಪ್ರಮಾಣ ಹೆಚ್ಚಿಸುವಂತೆ ಡಿ.ಕೆ. ಶಿವಕುಮಾರ್‌ ಅವರಿಗೆ ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ ಮನವಿ ಮಾಡಿತ್ತು. ಹೋರಾಟ ಸಮಿತಿಯ ಮನವಿಯಂತೆ ಸಿಎಂಗೆ ಡಿ.ಕೆ. ಶಿವಕುಮಾರ್‌ ಈ ಪತ್ರವನ್ನು ಬರೆದಿದ್ದಾರೆ.

ಡಿ.ಕೆ. ಶಿವಕುಮಾರ್‌ ಪತ್ರದಲ್ಲೇನಿದೆ?

ಕಾಂತರಾಜ್ ಸಮಿತಿ ವರದಿಯಲ್ಲಿ ಹಲವಾರು ಸಮುದಾಯಗಳಿಗೆ ಶೈಕ್ಷಣಿಕ, ರಾಜಕೀಯ, ಉದ್ಯೋಗ ಮೀಸಲಾತಿ (Educational political and job reservations) ಸಂಬಂಧ ಅನ್ಯಾಯವಾಗಿದೆ. ಒಕ್ಕಲಿಗ ಸಮುದಾಯವನ್ನು (Vokkaliga community) 30ಕ್ಕೂ ಹೆಚ್ಚು ಉಪ ಪಂಗಡಗಳಾಗಿ ವಿಭಜಿಸಿ ವರದಿ ಮಾಡಿರುವುದರಿಂದ ಒಕ್ಕಲಿಗರ ಸಂಖ್ಯೆ ಕಡಿಮೆಯಾಗಿರುತ್ತದೆ. ಈ ಸಂಬಂಧ ನೀಡಿರುವ 2% ಮೀಸಲಾತಿಯನ್ನು ಕಾಯಂಗೊಳಿಸಿ 6% ಹೆಚ್ಚುವರಿ ಮೀಸಲಾತಿ ಕಲ್ಪಿಸಬೇಕು ಎಂದು ಡಿ.ಕೆ. ಶಿವಕುಮಾರ್‌ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‌Cauvery water dispute : ಕಾವೇರಿ ಧ್ವನಿ ಎತ್ತದ ಕನ್ನಡ ನಟರ ವಿರುದ್ಧ ಬೆಂಗಳೂರಲ್ಲಿ ಪ್ರತಿಭಟನೆ

ಡಿಕೆಶಿ ಪರೋಕ್ಷ ವಿರೋಧ

ಒಟ್ಟು ಶೇ. 12ರಷ್ಟು ಹೆಚ್ಚಿನ‌ ಮೀಸಲಾತಿ ಕಲ್ಪಿಸುವಂತೆ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯು ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಶಿವರಾಜ್ ತಂಗಡಗಿಗೆ (Minister Shivaraj Thangadagi) ಡಿ.ಕೆ. ಶಿವಕುಮಾರ್‌ ಅವರು ಪ್ರತ್ಯೇಕ ಪತ್ರ ಬರೆದಿದ್ದಾರೆ. ಈ‌ ಮೂಲಕ ಜಾತಿವಾರು ಜನಗಣತಿ ವರದಿ ಸ್ವೀಕಾರಕ್ಕೆ ಡಿಸಿಎಂ ಡಿಕೆಶಿ ಪರೋಕ್ಷ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

Exit mobile version