ಮಂಗಳೂರು: ಕಾಸರಗೋಡಿನಲ್ಲಿ ʼರೈಲು ಹಳಿ ತಪ್ಪಿಸಲು ನಡೆದ ಯತ್ನʼ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಹಳಿಯಲ್ಲಿ ಕಬ್ಬಿಣದ ಸಲಾಕೆ ಇರಿಸಿದ್ದ ಮಹಿಳೆಯನ್ನು ಬಂಧಿಸಿದ್ದಾರೆ. ಪೊಲೀಸ್ ಇಲಾಖೆ ಸೇರಿದಂತೆ ಸಾರ್ವಜನಿಕರನ್ನು ಆತಂಕಕ್ಕೆ ದೂಡಿದ್ದ ಈ ಸಲಾಕೆಯನ್ನು ಇರಿಸಿದವಳು ಚಿಂದಿ ಆಯುವವಳು ಎಂದು ಗೊತ್ತಾಗಿದೆ!
10 ದಿನಗಳ ಹಿಂದೆ ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಕೋಟಿಕುಳಂನಲ್ಲಿ ರೈಲು ಹಳಿಯಲ್ಲಿ ಕಬ್ಬಿಣದ ಸಲಾಕೆ ಕಂಡು ಬಂದಿತ್ತು. ಅದೇ ದಿನ ತಳಂಗರೆ, ಕೀಯೂರು, ಕುಂಬಳೆ ಎಂಬಲ್ಲಿ ರೈಲಿನ ಮೇಲೆ ಕಲ್ಲೆಸೆತ ಉಂಟಾಗಿದ್ದ ಕಾರಣ, ಕಾಸರಗೋಡು ಪೊಲೀಸರು ಹಾಗೂ ಆರ್‌ಪಿಎಫ್ ತಂಡ ತನಿಖೆ ಚುರುಕುಗೊಳಿಸಿದ್ದರು.
ಶಂಕೆಯ ಹಿನ್ನೆಲೆಯಲ್ಲಿ ತಮಿಳುನಾಡು ಮೂಲದ ನಿವಾಸಿ ಹಾಗೂ ಕಾಸರಗೋಡಿನ ಕೋಟಿಕುಳಂನಲ್ಲಿ ವಾಸಿಸುವ ಕನಕವಲ್ಲಿ (22) ಎಂಬಾಕೆಯನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಕಬ್ಬಿಣದ ಸಲಾಕೆ ಇರಿಸಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾಳೆ. ಕಾಂಕ್ರೀಟ್‌ನಲ್ಲಿ ಹುದುಗಿಸಿದ್ದ ದೊಡ್ಡ ಕಬ್ಬಿಣದ ತುಂಡನ್ನು ಎರಡು ತುಂಡು ಮಾಡಲು ಈಕೆ ರೈಲಿನ ಹಳಿಗೆ ಇಟ್ಟಿದ್ದಳು. ಗುಜರಿ ಹೆಕ್ಕಿ ಜೀವನ ನಡೆಸುತ್ತಿದ್ದ ಈಕೆ ಇದರಿಂದ ಬಂದ ಕಬ್ಬಿಣ ಮಾರಾಟ ಮಾಡಿ ಹಣ ಪಡೆಯುವ ಆಸೆಗೆ ನೂರಾರು ಜನರ ಜೀವದ ಜೊತೆ ಚೆಲ್ಲಾಟವಾಡಿದ್ದಳು.
ಇದನ್ನೂ ಓದಿ: IRCTC | ಪ್ರಯಾಣಿಕರ ಡೇಟಾ ಮಾರಾಟದಿಂದ 1,000 ಕೋಟಿ ರೂ. ಆದಾಯ ಗಳಿಸಲು ರೈಲ್ವೆ ಪ್ಲಾನ್!