ಮೈಸೂರು: ಸಂಸದ ಪ್ರತಾಪ್ ಸಿಂಹ (Pratap Simha) ವಿರುದ್ಧ ಅವಹೇಳನಕಾರಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದ ಹಿನ್ನೆಲೆಯಲ್ಲಿ ಮುಖ್ಯ ಪೇದೆಯನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಲಾಗಿದೆ.
ವಿ.ವಿ. ಪುರಂ ಟ್ರಾಫಿಕ್ ಪೊಲೀಸ್ ಠಾಣೆ ಮುಖ್ಯ ಪೇದೆ ಬಿ. ಪ್ರಕಾಶ್ ಅಮಾನತಾಗೊಳಗಾದವರು. ಸಂಸದ ಪ್ರತಾಪ್ ಸಿಂಹ ಅವರು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಗ್ಗೆ ಮಾಡಿದ್ದ ಟೀಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ಗೆ ಪ್ರಕಾಶ್ ಕಮೆಂಟ್ ಮಾಡಿದ್ದು, “ಪ್ರದೀಪ್ ಸರ್, ಹೆಂಡತಿಯನ್ನು ತಂಗಿ ಅಂತ ಹೇಳಿಕೊಂಡು ಎರಡೆರಡು ಮೂಡಾ ಸೈಟ್ ತಗೆದುಕೊಂಡು ರಾಜ್ಯ ಸರ್ಕಾರಕ್ಕೆ ದ್ರೋಹ ಮಾಡಿದ ಅಯೋಗ್ಯ ಅವನು” ಎಂದು ಟೀಕಿಸಿದ್ದರು.
ಇದರ ಸ್ಕ್ರೀನ್ ಶಾಟ್ ಸೇರಿಸಿ ಪೇದೆ ವಿರುದ್ಧ ಪೊಲೀಸ್ ಕಮಿಷನರ್‌ಗೆ ಸಂಸದ ಪ್ರತಾಪ್ ಸಿಂಹ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಿ ಕ್ರಮ ಕೈಗೊಂಡಿದ್ದಾರೆ.
ಪ್ರತಾಪ್ ಸಿಂಹ ಪತ್ರದಲ್ಲೇನಿತ್ತು?
ಸಾಮಾಜಿಕ ಜಾಲತಾಣದಲ್ಲಿ ನಿಂದಿಸುವ ಮೂಲಕ ಅವಹೇಳನ ಮಾಡುತ್ತಿರುವ ಪ್ರಕಾಶ ವಿ. ಎಚ್‌ಸಿ-478, ವಿವಿ ಮರು ಸಂಚಾರ ಪೊಲೀಸ್ ಠಾಣೆ, ಮೈಸೂರು ಇವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮೈಸೂರು-ಕೊಡಗು ಲೋಕಸಭಾ ಸಂಸದನಾದ ನನ್ನ ವಿರುದ್ಧ ಇಲ್ಲದ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಅಪ ಪ್ರಚಾರ ಮಾಡುತ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ (ಫೇಸ್‌ಬುಕ್) ನಿಂದಿಸುವ ಮೂಲಕ ಅವಹೇಳನಕಾರಿಯಾಗಿ ಪೋಸ್ಟ್‌ಗಳನ್ನು ಮಾಡುತ್ತಿರುವ ಇವನನ್ನು ಕಾನೂನು ಪ್ರಕಾರವಾಗಿ ವಿಚಾರಣೆ ನಡೆಸಿ, ಶಿಸ್ತು ಕ್ರಮ ಜರುಗಿಸಬೇಕೆಂದು ಕೋರಲಾಗಿದೆ.
ಇದನ್ನೂ ಓದಿ: Weather Report: ರಾಜ್ಯಕ್ಕಿಲ್ಲ ಮುಂಗಾರು ಮೋಡಿ; ಮಳೆ ನೋಡಿ ನಾಟಿ ಮಾಡಿ
ಅಮಾನತು ಆದೇಶದಲ್ಲೇನಿದೆ?
ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡಾವಳಿಗಳು) ನಿಯಮಗಳು-1965, 1989ರ ನಿಯಮ-5 ರನ್ವಯ ಪ್ರಕಾಶ್ ಬಿ. ಸಿಎಚ್1-178, ವಿ.ವಿ.ಪುರಂ, ಸಂಚಾರ ಪೊಲೀಸ್ ಠಾಣೆ, ಮೈಸೂರು ನಗರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಬಾಕಿ ಇರುವಂತೆ ಅಮಾನತಿನಲ್ಲಿಡಲಾಗಿದೆ. ಅವರಿಗೆ ಕೆ.ಸಿ.ಎಸ್.ಆರ್. ನಿಯಮ- RC ಅನ್ವಯ ಅಮಾನತಿನ ಅವಧಿಯಲ್ಲಿ ಜೀವನಾಧಾರ ಭತ್ಯೆಯನ್ನು ನೀಡಲಾಗುವುದು. ಅಮಾನತಿನ ಅವಧಿಯಲ್ಲಿ ಯಾವುದೇ ಖಾಸಗಿ ವೃತ್ತಿಯಾಗಲಿ, ವ್ಯಾಪಾರ ವಹಿವಾಟುಗಳಾಗಲಿ ಮಾಡಬಾರದು. ಆ ರೀತಿ ಏನಾದರೂ ಕೆಲಸದಲ್ಲಿ ಪಾಲ್ಗೊಂಡಿರುವುದು ಕಂಡುಬಂದಲ್ಲಿ ನಿಯಮಬಾಹಿರವಾಗಿ ನಡೆದುಕೊಂಡಿರುವರೆಂದು ಪರಿಗಣಿಸಿ, ಪ್ರತ್ಯೇಕವಾಗಿ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳುವುದರ ಜತೆಗೆ ನೀಡಲಾಗುವ ಜೀವನಾಧಾರ ಭತ್ಯೆಯನ್ನು ತಡೆ ಹಿಡಿಯಲಾಗುವುದು. ಅಮಾನತಿನ ಅವಧಿಯಲ್ಲಿ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನವನ್ನು ಬಿಡಬಾರದು. ಹಾಗೂ ರಜೆಯ ಸೌಲಭ್ಯಗಳನ್ನು ಪಡೆಯುವಂತಿಲ್ಲ. ಅಲ್ಲದೆ, ಯಾವುದೇ ಖಾಸಗಿ ವೃತ್ತಿ ಇತ್ಯಾದಿಯಲ್ಲಿ ತೊಡಗಿಲ್ಲವೆಂಬ ಬಗ್ಗೆ ಒಂದು ಪ್ರಮಾಣ ಪತ್ರವನ್ನು ಪ್ರತಿ ತಿಂಗಳು ಜೀವನಾಧಾರ ಭತ್ಯೆಯನ್ನು ಪಡೆಯುವ ಮೊದಲು ಹಾಜರ್ಪಡಿಸತಕ್ಕದ್ದು ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.