ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವು (Prajwal Revanna Case) ದೇಶಾದ್ಯಂತ ಸಂಚಲನ ಮೂಡಿಸಿದೆ. ಇದೇ ಪ್ರಕರಣದಲ್ಲಿ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಜೈಲುಪಾಲಾಗಿದ್ದಾರೆ. ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೇವರಾಜೇಗೌಡ (Devaraje Gowda) ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ (L R Shivarame Gowda) ನಡುವಿನ ವಾಕ್ಸಮರವೂ ಜೋರಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, “ದೇವರಾಜೇಗೌಡ ಹುಚ್ಚು ನಾಯಿ ಇದ್ದಂತೆ. ಆತ ನಕಲಿ ವಕೀಲ” ಎಂದು ಎಲ್.ಆರ್.ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.
“ಏಪ್ರಿಲ್ 29 ಹಾಗೂ 30ರಂದು ನಾವು ಭೇಟಿ ಮಾಡಿ ಮಾತನಾಡಿದ್ದೇವೆ. ಏಪ್ರಿಲ್ 29ಕ್ಕೂ ಮೊದಲು ನಾನು ಭೇಟಿ ಮಾಡಿಲ್ಲ. ಏಪ್ರಿಲ್ 29ರ ಬಳಿಕ 30ನೇ ತಾರೀಖಿನಂದೂ ಅವನೇ ಬಂದು ಭೇಟಿ ಮಾಡಿದ್ದಾನೆ. ಆ ಎರಡು ಸಭೆ ಹೊರತುಪಡಿಸಿ ನಾನು ಅವನ ಜತೆ ಮಾತನಾಡಿಲ್ಲ. ಅವನೊಬ್ಬ ಹುಚ್ಚುನಾಯಿ, ನಕಲಿ ವಕೀಲ. ಅಲ್ಲದೆ, ಆತನೊಬ್ಬರ ರೋಲ್ ಕಾಲ್ ಮಾಸ್ಟರ್ ಆಗಿದ್ದಾನೆ. ಅವನ ಹಣಕಾಸಿನ ವ್ಯವಹಾರದ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕು” ಎಂದು ಮಾಜಿ ಸಂಸದ ‘ವಿಸ್ತಾರ ನ್ಯೂಸ್’ಗೆ ತಿಳಿಸಿದ್ದಾರೆ.
ಕಾರ್ತಿಕ್, ದೇವರಾಜೇಗೌಡ ಪೆನ್‌ಡ್ರೈವ್ ರೂವಾರಿಗಳು
“ಪೆನ್‌ಡ್ರೈವ್ ರಿಲೀಸ್ ಮಾಡಿರುವುದರ ಹಿಂದೆ ಕಾರು ಚಾಲಕ ಕಾರ್ತಿಕ್ ಹಾಗೂ ದೇವರಾಜೇಗೌಡ ಇದ್ದಾರೆ. ಏಟ್ರಿಯಾ ಹೋಟೆಲ್‌ನಲ್ಲಿ ಮಾತನಾಡುವಾಗ ನನ್ನ ವಿರುದ್ಧ ತನಿಖೆ ಮಾಡಬೇಕು ಅಂತಿದ್ದಾರೆ ಎಂದ. ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಬಗ್ಗೆ ಪದೇಪದೆ ಮಾತನಾಡಬೇಡ ಎಂದೆ. ನಿನ್ನದು ನೀನು ಸರಿಮಾಡಿಕೊ. ಉಳಿದ ಉಸಾಬರಿ ನಿನಗೆ ಬೇಡ ಎಂಬುದಾಗಿ ಹೇಳಿದ್ದೆ” ಎಂದು ತಿಳಿಸಿದರು.
“ದೇವರಾಜೇಗೌಡ ಖದೀಮ ಇದ್ದಾನೆ. ಪ್ರಚಾರ ಪ್ರಿಯನಾದ ಅವನಿಗೆ ಮಾಧ್ಯಮಗಳು ಆದ್ಯತೆ ನೀಡಬಾರದು. ಸಿಎಂ ಹಾಗೂ ಡಿಸಿಎಂ ಮೇಲೆ ನಂಬಿಕೆ ಇಲ್ಲ ಎಂದ. ನೀನು ಅವರನ್ನು ಬಿಡು, ಇವತ್ತಿನಿಂದ ಕೇಸ್ ಬಗ್ಗೆ ಹೋರಾಡ ಮಾಡಿಲ್ಲ ಎಂದು ಹೇಳು ಅಂದೆ. ಅಷ್ಟಕ್ಕೂ, ಅವನು ಬ್ಲ್ಯಾಕ್‌ಮೇಲ್ ಮಾಡಿ ದುಡ್ಡು ಮಾಡಿದ್ದಾನೆ. ಅವನು ವಕೀಲಿಕೆ ಮಾಡಲ್ಲ. ಇಷ್ಟಾದರೂ ಹೇಗೆ ದುಡ್ಡು ಬರುತ್ತದೆ? ವಿಧಾನಸಭೆ ಚುನಾವಣೆಯಲ್ಲಿ ದುಡ್ಡು ಇಟ್ಟುಕೊಂಡು ಸುಮ್ಮನಾದ. ಅವನ ಬಾಡಿಯಲ್ಲಿ ಯಾವಾಗಲೂ ಕ್ಯಾಮೆರಾ (ಬಾಡಿ ಕ್ಯಾಮ್) ಇರುತ್ತದೆ. ನಾವು ಕೂತಾಗ ಒಂದೂ ಮಾತಾಡಲ್ಲ. ನನಗೆ ಅವನ ಬಗ್ಗೆ ಭಯ ಇಲ್ಲ. ಎಸ್‌ಐಟಿ ಅವರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದರೆ ಎಲ್ಲವೂ ಬಯಲಾಗುತ್ತದೆ” ಎಂದು ಹೇಳಿದರು.
ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಸ್ಫೋಟಕ ಆಡಿಯೊ ಹೊರಬಿದ್ದಿದೆ. ಇತ್ತೀಚೆಗೆ ಈ ಹಗರಣದಲ್ಲಿ ಡಿಸಿಎಂ ಡಿಕೆಶಿ ಕೈವಾಡ ಎಂದು ಆರೋಪಿಸಿದ್ದ ವಕೀಲ ದೇವರಾಜೇಗೌಡ, ಮತ್ತೊಂದು ಆಡಿಯೊ ಬಾಂಬ್ ಹಾಕಿದ್ದಾರೆ. ದೇವರಾಜೇಗೌಡ-ಶಿವರಾಮೇಗೌಡ ನಡುವಿನ ಮಾತುಕತೆಯ 36 ಸೆಕೆಂಡ್ಸ್ ಆಡಿಯೊ ವೈರಲ್ ಆಗಿದೆ. ಇದರ ಬೆನ್ನಲ್ಲೇ ವಕೀಲ ದೇವರಾಜೇಗೌಡ ಅವರನ್ನು ಹಿರಿಯೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆಡಿಯೊ ಬಯಲಾದ ಬೆನ್ನಲ್ಲೇ ಈಗ ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿ ಹಲವು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Prajwal Revanna Case: ಸ್ಫೋಟಕ ಆಡಿಯೊ ರಿಲೀಸ್ ಮಾಡಿದ ಬೆನ್ನಲ್ಲೇ ವಕೀಲ ದೇವರಾಜೇಗೌಡ ವಶಕ್ಕೆ