ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ (Devarajegowda) ನೀಡಿದ ಹೇಳಿಕೆ ಸಂಚಲನ ಮೂಡಿಸಿದೆ. ಪೆನ್ ಡ್ರೈವ್ ಪ್ರಕರಣದ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಇದ್ದಾರೆ. ಅವರು 100 ಕೋಟಿ ರೂ. ಆಫರ್ ಮಾಡಿದ್ದರು ಎಂದು ದೇವರಾಜೇಗೌಡ ನೀಡಿದ ಹೇಳಿಕೆ ಕುರಿತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿದ್ದು, “ಬೆಂಕಿ ಇಲ್ಲದೆ ಹೊಗೆಯಾಡಲ್ಲ” ಎಂದಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾದ ಬಳಿಕ ಆರ್.ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿದರು. “ದೇವರಾಜೇಗೌಡ ಬಳಿ ಸಾಕ್ಷ್ಯ ಇದೆ ಎಂಬ ಕಾರಣಕ್ಕಾಗಿಯೇ ಅವರನ್ನು ಬಂಧಿಸಲಾಗಿದೆ. ದೇವರಾಜೇಗೌಡ ಹೊರಗಿದ್ದರೆ ದಾಖಲೆ ಬಿಡುಗಡೆ ಮಾಡುತ್ತಾರೆ ಎಂಬ ಭಯದಿಂದ ಬಂಧಿಸಲಾಗಿದೆ. ದೇವರಾಜೇಗೌಡ ಮಾಡಿದ ಆರೋಪಗಳು ನಿಜವೇ ಇರಬೇಕು. ಅದಕ್ಕೆಲ್ಲ ಅವರ ಬಳಿ ಸಾಕ್ಷ್ಯ ಇದೆ ಎನಿಸುತ್ತದೆ. ಅವರು ಹೇಳಿದ್ದೆಲ್ಲ ನೂರಕ್ಕೆ ನೂರು ಸತ್ಯ. ಅಷ್ಟಕ್ಕೂ ಬೆಂಕಿಯೇ ಇಲ್ಲದೆ ಹೊಗೆಯಾಡಲ್ಲ” ಎಂದು ಹೇಳಿದರು.
“ದೇವರಾಜೇಗೌಡ ಅವರೇ ತಮಗೆ ಹಣದ ಆಫರ್ ಮಾಡಿದ ಬಗ್ಗೆ ಹೇಳಿದ್ದಾರೆ. ಈಗಾಗಲೇ ಡಿಕೆಶಿ ಮಾತಾಡಿದ ದಾಖಲೆ ಸಹ ಬಿಡುಗಡೆ ಮಾಡಿದ್ದಾರೆ. ಅವರನ್ನು ಬಿಟ್ಟರೆ ಸರಣಿ ದಾಖಲೆ ಬಿಡುಗಡೆ ಮಾಡುತ್ತಾರೆ. ಸರ್ಕಾರಕ್ಕೆ ಮುಜುಗರ ಆಗುತ್ತದೆ ಎಂದು ಬಂಧಿಸಿದ್ದಾರೆ. ಇದೆಲ್ಲ ಮಾಧ್ಯಮಗಳಲ್ಲಿ ಬರಬಾರದು ಎಂಬುದು ಡಿಕೆಶಿ ಉದ್ದೇಶವಾಗಿದೆ. ದೇವರಾಜೇಗೌಡ ಹೇಳಿದ್ದೆಲ್ಲ ಸತ್ಯ ಇರಬಹುದು. ರಣದೀಪ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಡಿಕೆಶಿ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ” ಎಂದು ಆರೋಪಿಸಿದರು.
ಒಕ್ಕಲಿಗರ ಮುಗಿಸಲು ತಂತ್ರ
“ರಾಜ್ಯದಲ್ಲಿ ಒಕ್ಕಲಿಗರನ್ನು ಮುಗಿಸಲು ಕಾಂಗ್ರೆಸ್ ತಂತ್ರ ಮಾಡುತ್ತಿದೆ. ಈಗಾಗಲೇ ಸಿದ್ದರಾಮಯ್ಯ ದಲಿತರನ್ನು ಮುಗಿಸಿದ್ದಾರೆ. ಪರಮೇಶ್ವರ್ ಅವರು ಸಿಎಂ ಅಗೋದನ್ನು ತಪ್ಪಿಸಿದ್ದಾರೆ. ಸಿಬಿಐ ತನಿಖೆಗೆ ಕೊಟ್ರೆ ಸತ್ಯ ಹೊರಗೆ ಬರುತ್ತದೆ ಎಂದು ತನಿಖೆಗೆ ಕೊಡತ್ತಿಲ್ಲ. ಕೆ.ಜೆ. ಜಾರ್ಜ್ ವಿಚಾರದಲ್ಲೂ ಸಿಬಿಐ ತನಿಖೆ ನಡೆಯಿತು. ತಪ್ಪಿದ್ದರೆ ತಪ್ಪಿದೆ ಎಂದು, ತಪ್ಪಿಲ್ಲದಿದ್ದರೆ ತಪ್ಪಿಲ್ಲ ಎಂದು ಸಿಬಿಐ ವರದಿ ನೀಡುತ್ತದೆ. ಎಸ್ಐಟಿಯಿಂದ ಸತ್ಯ ಹೊರಗೆ ಬರುತ್ತದೆ ಎಂಬ ನಂಬಿಕೆ ಯಾರಿಗೂ ಇಲ್ಲ. ಸರ್ಕಾರ ಹೇಳಿದಂತೆ ಎಸ್‌ಐಟಿ ಕೆಲಸ ಮಾಡುತ್ತದೆ. ಕಾರ್ತಿಕ್‌ಗೆ ಜಾಮೀನು ನಿರಾಕರಿಸಿದರೂ ಯಾಕೆ ಬಂಧಿಸಿಲ್ಲ? ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲಿ. ಇದು ಪ್ರಜ್ವಲ್ ರೇವಣ್ಣ ಅವರಿಗೂ ಅನ್ವಯವಾಗುತ್ತದೆ. ಆದರೆ, ಪೆನ್‌ಡ್ರೈವ್ ಹಂಚಿಕೆ ಮಾಡಿದವರಿಗೂ ಶಿಕ್ಷೆಯಾಗಬೇಕು” ಎಂದು ಒತ್ತಾಯಿಸಿದರು.
ದೇವರಾಜೇಗೌಡ ಹೇಳಿದ್ದೇನು?
“ಪೆನ್ ಡ್ರೈವ್ ಪ್ರಕರಣದ ಹಿಂದೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದ್ದಾರೆ. ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಬಳಿ ಪೆನ್‌ಡ್ರೈವ್ ತರಿಸಿಕೊಂಡು ಎಲ್ಲವನ್ನೂ ರೆಡಿ ಮಾಡಿದ್ದು ಡಿಕೆಶಿ, ಇದರಲ್ಲಿ ಸುಮ್ಮನಾಗಲು 100 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಎಲ್.ಆರ್. ಶಿವರಾಮೇಗೌಡ ಮೂಲ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಜತೆಗೆ ಮಾತನಾಡಿದ್ದಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: Prajwal Revanna Case: ವಿದೇಶದಿಂದ ಪ್ರಜ್ವಲ್ ಕರೆತರೋಕೆ ಎಸ್‌ಐಟಿ ಮಾಸ್ಟರ್ ಸ್ಟ್ರೋಕ್!