ರಾಮನಗರ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ (JDS Politics) ಟಿಕೆಟ್ ಗದ್ದಲ ಹೆಚ್ಚಾಗಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯೆ ನೀಡಿದ್ದು, ಸದ್ಯ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರ ಆರೋಗ್ಯದ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಅವರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಏನೇ ನಿರ್ಧಾರವಿದ್ದರೂ ನಾನೇ ಅಂತಿಮ ಎಂಬ ಪರೋಕ್ಷ ಸಂದೇಶವನ್ನು ಸಹೋದರ ಎಚ್.ಡಿ. ರೇವಣ್ಣ ಮತ್ತವರ ಕುಟುಂಬಕ್ಕೆ ರವಾನಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ಬೆರಳೆಣಿಕೆಯ ತಿಂಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುರುಕಿನ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾರೆ. ಈ ವೇಳೆ ಹಾಸನ ವಿಧಾನಸಭಾ ಕ್ಷೇತ್ರ ಜೆಡಿಎಸ್ ಟಿಕೆಟ್ ಬಗ್ಗೆ ಗೊಂದಲ ತಾರಕಕ್ಕೇರಿದ್ದು, ಎಚ್.ಡಿ. ರೇವಣ್ಣ (HD Revanna) ಮತ್ತು ಕುಮಾರಸ್ವಾಮಿ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಬೀದಿಗೆ ಬಂದಿದೆ.
ಹಾಸನದಲ್ಲಿ ಭವಾನಿ ರೇವಣ್ಣ ಅವರಿಗೇ ಟಿಕೆಟ್ ನೀಡಬೇಕು ಎಂದು ಅವರ ಬೆಂಬಲಿಗರು ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮನೆ ಮುಂದೆ ಸೋಮವಾರ (ಫೆ. ೨೭) ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಚನ್ನಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಎಲ್ಲರೂ ಪ್ರತಿಭಟನೆಗಳನ್ನು ಮಾಡುತ್ತಾರೆ. ಭಾನುವಾರ (ಫೆ.೨೬) ಎಚ್.ಪಿ. ಸ್ವರೂಪ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಇಂದು ಭವಾನಿ ರೇವಣ್ಣ ಪರವಾಗಿ ಮಾಡಿದ್ದಾರೆ. ಆದರೆ, ಹಾಗಂತ ಎಲ್ಲರಿಗೂ ಟಿಕೆಟ್ ಕೊಡುವುದಕ್ಕೆ ಆಗುವುದಿಲ್ಲ ಎಂದು ಖಡಕ್ ಆಗಿಯೇ ಹೇಳಿದ್ದಾರೆ.
ಯಾರೇ ಪ್ರತಿಭಟನೆ ಮಾಡಿದರೂ ಅಂತಿಮವಾಗಿ ನಾವು ನಿರ್ಣಯವನ್ನು ತೆಗೆದುಕೊಳ್ಳಬೇಕು. ಪ್ರತಿಭಟನೆ ಮಾಡಿದರು ಎಂಬ ಕಾರಣಕ್ಕೆ ಎಲ್ಲರಿಗೂ ಟಿಕೆಟ್ ಕೊಡುವುದಕ್ಕೆ ಆಗುವುದಿಲ್ಲ. ಅಭ್ಯರ್ಥಿಯಾಗಬೇಕು ಅಂತ ಆಸೆ ಇದ್ದವರು ಈ ರೀತಿಯ ಒತ್ತಡ ಹಾಕುವ ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: BS Yediyurappa : ಬಿಎಸ್‌ವೈ ಜನ್ಮದಿನದ ಸಂಭ್ರಮಕ್ಕೆ ಸಾಥ್ ನೀಡಿದ ಪ್ರಧಾನಿ ಮೋದಿ: ಇಲ್ಲಿದೆ ಸುಂದರ ಚಿತ್ರ ಸಂಚಯ
ಪ್ರಸ್ತುತ ಎಚ್.ಡಿ. ದೇವೇಗೌಡರು ಟಿಕೆಟ್ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದ್ಯ ಅವರ ಆರೋಗ್ಯದ ಪರಿಸ್ಥಿತಿ ಸರಿ ಇಲ್ಲ. ಅವರೀಗ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಹಾಗಾಗಿ ನಾವು ಕುಳಿತು ಎಲ್ಲರೂ ಚರ್ಚೆ ಮಾಡಿ ಬಗೆಹರಿಸುತ್ತೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಾವೇ ಇದರ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಸಂದೇಶವನ್ನು ರವಾನಿಸಿದರು.
ಮುಂದುವರಿದು ಮಾತನಾಡಿದ ಎಚ್‌ಡಿಕೆ, ಸದ್ಯದಲ್ಲೇ ಬಿಡುಗಡೆಯಾಗಲಿರುವ 2ನೇ ಪಟ್ಟಿಯಲ್ಲಿ ಹಾಸನ ಅಭ್ಯರ್ಥಿ ಸಹ ಫೈನಲ್ ಆಗುತ್ತದೆ ಎಂದು ಹೇಳಿದರು.
ಭವಾನಿ ರೇವಣ್ಣಗೆ ಟಿಕೆಟ್ ಘೋಷಿಸುವಂತೆ ಕಾರ್ಯಕರ್ತರ ಪ್ರತಿಭಟನೆ
ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ (JDS Politics) ಟಿಕೆಟ್ ಪ್ರಹಸನ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಎಚ್.ಪಿ.ಸ್ವರೂಪ್‌ಗೆ ಹಾಸನ ಟಿಕೆಟ್ ಕೊಡುವಂತೆ ಬೆಂಬಲಿಗರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಭವಾನಿ ರೇವಣ್ಣಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಸಂಸದರ ನಿವಾಸದ ಮುಂದೆ ನೂರಾರು ಕಾರ್ಯಕರ್ತರು ಸೋಮವಾರ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಆರ್.ಸಿ.ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಬೆಂಬಲಿಗರು, ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕು ಎಂದು ಘೋಷಣೆ ಕೂಗಿದರು. ಭವಾನಿ ರೇವಣ್ಣ ಫೋಟೋ ಹಿಡಿದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ದೇವೇಗೌಡರು, ರೇವಣ್ಣ, ಭವಾನಿ ಪರ ಘೋಷಣೆ ಕೂಗಿದರು. ರೇವಣ್ಣ, ಭವಾನಿ ಬೆಂಬಲಿಗರು ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರಿಂದ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.